ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಹೇಯ ಕೃತ್ಯ ಸಮರ್ಥಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಿ – ಪೊಲೀಸರನ್ನು ಬೆಂಬಲಿಸಿ

ಉಡುಪಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೀನುಗಾರರು ಶ್ರಮ ಜೀವಿಗಳು. ಸೌಹಾರ್ದತೆಯಲ್ಲಿ ನಂಬಿಕೆವುಳ್ಳವರು. ಅವರ ಒಳ್ಳೆತನವನ್ನು, ಸಂಘಟಿತ ಶಕ್ತಿಯನ್ನು ನಮ್ಮ ಸಂವಿಧಾನ ಪ್ರತಿಪಾದಿಸುವ ಮಹತ್ವದ ಜೀವನ ಮೌಲ್ಯಗಳ ಆಧಾರದಲ್ಲಿ, ಇಡೀ ಸಮಾಜವನ್ನು ಪರಿವರ್ತಿಸಲು ಬಳಸಿಕೊಳ್ಳಬೇಕೇ ಹೊರತು, ಕಾನೂನು ಉಲ್ಲಂಘನೆಯನ್ನು, ಹೇಯ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಅಲ್ಲ. ಇದನ್ನು ಯಾರೂ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಬಾರದು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಮನವಿ ಮಾಡಿದೆ.

ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಮಾತನಾಡಿ, ಮಲ್ಪೆ ಬಂದರು ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ತಲೆ ಮೇಲೆ ಮೀನು ಹೊರುವ ಕಾಯಕದಲ್ಲಿ ನಿರತರಾಗಿದ್ದ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರನ್ನು ಮಾ. 18ರಂದು ಕೆಲಸದ ವೇಳೆಯಲ್ಲಿ ಸ್ವಲ್ಪ ಮೀನು ಕದ್ದರು ಎಂಬ ಕ್ಷುಲ್ಲಕ ಆರೋಪದಲ್ಲಿ ಅಮಾನವೀಯವಾಗಿ ಮರಕ್ಕೆ ಹಗ್ಗದಿಂದ ಕಟ್ಟಿಹಾಕಿ ಥಳಿಸಿದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಮತ್ತು ಈ ಹೇಯ ಅಪರಾಧ ಕೃತ್ಯವನ್ನು ಬಹಿರಂಗವಾಗಿ ಬೆಂಬಲಿಸಿದವರ ವಿರುದ್ಧ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲೇಬೇಕು. ಇದರಲ್ಲಿ ರಾಜಿ ಮಾಡಿಕೊಳ್ಳಲು ನಮ್ಮ ಪ್ರಜ್ಞಾವಂತ ಸಮಾಜ ಅವಕಾಶ ನೀಡಬಾರದು ಎಂದರು.

ಪೊಲೀಸರನ್ನು ಬೆಂಬಲಿಸಿ
ಜಾತಿ, ಮತ, ಧರ್ಮ ಭೇದಭಾವ ಇಲ್ಲದೆ ಈ ವಿಚಾರವಾಗಿ ಪೊಲೀಸರನ್ನು ಬೆಂಬಲಿಸಬೇಕು. ಪೊಲೀಸರು ಕರ್ತವ್ಯ ಲೋಪ ಎಸಗಿದ್ದರೆ ಅವರ ವಿರುದ್ಧವೂ ಕ್ರಮಕೈಗೊಳ್ಳಲು ಅವಕಾಶವಿದ್ದೇ ಇದೆ. ಆದ್ದರಿಂದ ಯಾರೂ ಸಂಘಟಿತ ಶ್ರಮಜೀವಿ ಜನವರ್ಗವನ್ನು ಕಾನೂನು ಉಲ್ಲಂಘಿಸಲು ಪ್ರೇರೆಪಿಸಬಾರದು ಎಂದು ವಿನಂತಿಸಿದ್ದಾರೆ.

ಭದ್ರತೆ ಒದಗಿಸಿ
ಸಂತ್ರಸ್ತೆ ಮತ್ತು ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಕಲ್ಪಿಸಬೇಕು. ಸಂತ್ರಸ್ತೆಗೆ ತುರ್ತು ಪರಿಹಾರ ಬಿಡುಗಡೆ ಮಾಡಬೇಕು ಮತ್ತು ಅವರ ಕುಟುಂಬಕ್ಕೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಎಸ್ಪಿ ಅವರನ್ನು ಆಗ್ರಹಿಸುತ್ತೇವೆ ಎಂದರು.

ಕೇಸು ದಾಖಲಿಸಬೇಕು
ಪೊಲೀಸರ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆಲವರು ಬಳಸಿದ ಭಾಷೆಯಿಂದ ಮತ್ತು ಮಾನವೀಯತೆವುಳ್ಳ ಪ್ರತಿಯೊಬ್ಬನೂ ತಲೆ ತಗ್ಗಿಸುವಂತೆ ಮಾಡಿದ ಈ ಹೇಯ ಕೃತ್ಯವನ್ನು ಸಮರ್ಥಿಸಿದ ರೀತಿಯಿಂದ, ಪರಿಶಿಷ್ಟರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಹಾಕಿದ ಕೇಸು ವಾಪಸು ಪಡೆಯಬೇಕೆಂದು ನೀಡಿದ ಎಚ್ಚರಿಕೆಯ ಸ್ವರೂಪದಿಂದ ಕೂಡಿದ್ದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯಗಳ ಜನರಲ್ಲಿ ಅವ್ಯಕ್ತ ಆತಂಕವುಂಟಾಗಿದೆ. ಈ ಹಿನ್ನೆಲೆಯಲ್ಲಿ, ಪರಿಶಿಷ್ಟ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ, ಅವರ ಮೇಲೆ ಸಾರ್ವಜನಿಕವಾಗಿ ಅವಮಾನ ಮಾಡಿ ದೌರ್ಜನ್ಯ ನಡೆಸಿರುವ, ದೌರ್ಜನ್ಯವನ್ನು ಬೆಂಬಲಿಸಿರುವ ಹಾಗೂ ಸಮರ್ಥಿಸಿರುವವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಾಂತಪ್ಪ, ಸದಾಶಿವ ಸಾಲಿಯಾನ್, ಸರೋಜಿನಿ ಬಂಟ್ವಾಳ, ರಘು ಎಕ್ಕಾರ್, ಕೃಷ್ಣ ಮೂಡುಬೆಳ್ಳೆ, ಮಾಧವ ಕಾವೂರು, ಪದ್ಮನಾಭ ಉಪಸ್ಥಿತರಿದ್ದರು.



























































































































error: Content is protected !!
Scroll to Top