ಕಾರ್ಕಳ : ಪ್ರತಿಷ್ಠಿತ ಕಂಬಳ ಕೂಟದಲ್ಲಿ ಒಂದಾಗಿರುವ ಮಿಯ್ಯಾರಿನ ಲವ-ಕುಶ ಜೋಡುಕರೆ ಕಂಬಳವು ಮಾ. 15ರ ಶನಿವಾರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ಕಂಬಳ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ವಾಡಿಕೆಯಂತೆ ಪ್ರತಿ ವರ್ಷ ಜನವರಿ ತಿಂಗಳ ಮೊದಲ ವಾರದಲ್ಲಿ ನಡೆಯುತ್ತಿದ್ದ ಕಂಬಳವು ಮಿಯ್ಯಾರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಮುಂದೂಡಲ್ಪಟ್ಟಿತ್ತು.
250ಕ್ಕೂ ಮಿಕ್ಕಿ ಜೋಡಿ ಕೋಣ
ಈ ವರ್ಷ ಸುಮಾರು 250ಕ್ಕೂ ಮಿಕ್ಕಿ ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು, 24 ಗಂಟೆಯೊಳಗೆ ಸ್ಪರ್ಧೆಯನ್ನು ಅಂತಿಮ ಹಂತಕ್ಕೆ ತಲುಪಿಸುವ ಎಲ್ಲಾ ಪ್ರಯತ್ನ ಕಂಬಳ ಸಮಿತಿ ವತಿಯಿಂದ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಜಿಲ್ಲೆಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಹಾಗೂ ಅತಿಥಿ ಗಣ್ಯರು ಈ ಜಾನಪದ ಕ್ರೀಡೋತ್ಸವದಲ್ಲಿ ಭಾಗವಹಿಸಲಿರುವರು.
ನಾಲ್ವರಿಗೆ ಸನ್ಮಾನ
ಕಂಬಳ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ 4 ಮಂದಿ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ವಿ. ಸುನಿಲ್ ಕುಮಾರ್ ಮತ್ತು ಕಾರ್ಯಾಧ್ಯಕ್ಷ ಜೀವನ್ ದಾಸ್ ಅಡ್ಯಂತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































































