ಶಾಲೆಗಳಲ್ಲಿ ವಾರದಲ್ಲಿ ಒಂದು ದಿನ ನೈತಿಕ ಶಿಕ್ಷಣ

ಬೆಂಗಳೂರು : ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ಪಾಠಕ್ಕೆ ಅವಕಾಶ ಮಾಡಿಕೊಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಶೂನ್ಯ ವೇಳೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಭಾರತಿ ಶೆಟ್ಟಿ ಅವರು, ದುಶ್ಚಟಗಳಿಗೆ ದಾಸರಾಗುವುದು, ಅಪ್ರಾಪ್ತ ವಯಸ್ಸಿನಲ್ಲಿ ಲೈಂಗಿಕ ಚಟುವಟಿಕೆ, ಗರ್ಭಧಾರಣೆ, ಖಿನ್ನತೆ, ಒತ್ತಡ, ಸೈಬರ್ ವ್ಯಸನ, ಹಿರಿಯರ ಮಾತು ಕೇಳದಿರುವುದು ಸೇರಿದಂತೆ ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತು ವಿವರಿಸಿದರು.

ರಾಜ್ಯ ಸರ್ಕಾರವು ಲೈಂಗಿಕ ಶಿಕ್ಷಣವನ್ನು ನೀಡುತ್ತಿದೆ ಮತ್ತು ಸೆಮಿನಾರ್‌ಗಳನ್ನು ನಡೆಸುತ್ತಿದೆ ಎಂದು ಹೇಳಿಕೊಳ್ಳುತ್ತದೆ. ನಾನು ಅನೇಕ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಲೈಂಗಿಕ ಶಿಕ್ಷಣವನ್ನು ನೀಡಲಾಗಿಲ್ಲ. ಹುಡುಗರು ಮತ್ತು ಹುಡುಗಿಯರಿಗೆ ಇದರ ಬಗ್ಗೆ ತಿಳಿದೇ ಇರುವುದಿಲ್ಲ. ಈ ಹಿಂದೆ ಶಾಲೆಗಳಲ್ಲಿ ಕಡ್ಡಾಯ ನೈತಿಕ ಶಿಕ್ಷಣ ಮತ್ತು ಪರೀಕ್ಷೆಗಳಿದ್ದವು. ಅದರಿಂದ ನಾವು ಸಾಕಷ್ಟು ಕಲಿಯುತ್ತಿದ್ದೆವು. ಆದರೆ, ಈಗ ಅದು ಇಲ್ಲ ಎಂದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, 8-10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ವಾರ ನೈತಿಕ ಶಿಕ್ಷಣ ಅವಧಿ ಇರುತ್ತಿತ್ತು. ಭಾರತಿ ಹೇಳುವುದು ನಿಜ ಮತ್ತು ನೈತಿಕ ವಿಜ್ಞಾನ ತರಗತಿಗಳು ಪ್ರಸ್ತುತ ಕಾಲದಲ್ಲಿ ಬಹಳ ಅವಶ್ಯಕ. 8 ರಿಂದ 10ನೇ ತರಗತಿ ಮಕ್ಕಳಿಗೆ ವಾರಕ್ಕೆ ಒಂದು ಗಂಟೆ ನೈತಿಕ ಶಿಕ್ಷಣ ನೀಡಬೇಕು. ಅದಕ್ಕೇ ಒಬ್ಬರೇ ಶಿಕ್ಷಕರು ಆಗಬೇಕೆಂದೇನೂ ಇಲ್ಲ. ಎಲ್ಲ ಶಿಕ್ಷಕರೂ ವಾರಕ್ಕೆ ಒಂದು ಬಾರಿ ನೈತಿಕ ಪಾಠ ಮಾಡಿದರೆ ಸಾಕು ಎಂದು ಸಲಹೆ ನೀಡಿದರು.

ಇದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ನೈತಿಕ ಶಿಕ್ಷಣ ನೀಡುವ ವಿಚಾರವು ಚರ್ಚೆಯಲ್ಲಿದೆ. ಪರಿಸರ, ಸಂಚಾರ ಪ್ರಜ್ಞೆ ಸೇರಿ ವಾರದಲ್ಲಿ ಒಂದು ನೈತಿಕ ಶಿಕ್ಷಣ ತರಗತಿ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಶೀಘ್ರದಲ್ಲೇ ಈ ಬಗ್ಗೆ ನಭೆ ನಡೆಸಲಾಗುವುದು ಎಂದು ಹೇಳಿದರು. ಈ ವೇಳೆ ಭಾರತಿಯವರು ಈ ವಿಷಯಗಳಿಗೆ ಪರೀಕ್ಷೆಗಳನ್ನೂ ಕೂಡ ನಡೆಸಬೇಕೆಂದು ಒತ್ತಾಯಿಸಿದರು.





























































































































error: Content is protected !!
Scroll to Top