ಆಹಾರದಿಂದ ಶಕ್ತಿ – ಮಹಿಳಾ ದಿನಕ್ಕೆ ಸಮೃದ್ಧಿ (Strength through food – prosperity for Women’s Day!)

ಪ್ರತಿ ವ್ಯಕ್ತಿಯು ಆರೋಗ್ಯವನ್ನು ಕಾಯ್ದುಕೊಳ್ಳಲು ಸರಿಯಾದ ಜೀವನಶೈಲಿ ಮತ್ತು ಆಹಾರ ಪದ್ಧತಿ ಬಹುಮುಖ್ಯವಾಗಿವೆ. ಇದರಿಂದ ಮಾತ್ರ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳನ್ನು ಉತ್ತಮವಾಗಿ ನಿರ್ವಹಿಸಬಹುದು. ನಾವು ಸೇವಿಸುವ ಆಹಾರವೇ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ರೂಪಿಸುತ್ತದೆ. ವಿಶೇಷವಾಗಿ, ಸರಿಯಾದ ಸಮಯದಲ್ಲಿ ಪೌಷ್ಟಿಕ ಆಹಾರ ಸೇವನೆ ಅವಶ್ಯಕವಾಗಿದೆ. ಮಹಿಳೆಯರಿಗೆ ಪೌಷ್ಟಿಕ ಆಹಾರದ ಅವಶ್ಯಕತೆ ಹೆಚ್ಚು ಆಗಿರುತ್ತದೆ. ದೇಹದಲ್ಲಿ ಆಗುವ ಬದಲಾವಣೆಗಳು, ಮುಟ್ಟಿನ ದಿನಗಳು, ಗರ್ಭಾವಸ್ಥೆ, ಹೆರಿಗೆ, ಬಾಣಂತನ ಮತ್ತು ಋತುಬಂಧದ ಬದಲಾವಣೆಗಳಿಂದ ದೇಹದಿಂದ ಶಕ್ತಿ ನಷ್ಟವಾಗುತ್ತದೆ. ಈ ಕಾರಣದಿಂದ, ಮಹಿಳೆಯರಿಗೆ ಹೆಚ್ಚಿನ ಪೌಷ್ಟಿಕಾಂಶಗಳು ಅಗತ್ಯವಾಗಿವೆ.
ಮಹಿಳೆಯವರು ತಮ್ಮ ಆರೋಗ್ಯವನ್ನು ಸರಿಯಾದ ಪೋಷಣೆಯ ಮೂಲಕ ನೋಡಿಕೊಳ್ಳುವುದು ಉತ್ತಮ ಗುಣಮಟ್ಟದ ಜೀವನವನ್ನು ಕಾಯುವ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಅತ್ಯಂತ ಅಗತ್ಯವಿದೆ.

ಮಹಿಳೆಯರ ಆರೋಗ್ಯ
ಹದಿಹರೆಯದ ವಯಸ್ಸಿನಿಂದ ಹಿಡಿದು ಋತುಬಂಧದವರೆಗೆ ಮಹಿಳೆಯ ದೇಹದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತವೆ ಮತ್ತು ಈ ಸಮಯದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳೂ ಎದುರಾಗುತ್ತವೆ. ಆದ್ದರಿಂದ, ಇವುಗಳನ್ನು ಸರಿಯಾಗಿ ನಿರ್ವಹಿಸಲು ಶರೀರದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಅದರಲ್ಲೂ, ಸರಿಯಾದ ಆಹಾರ ಸೇವನೆ, ವಿಶೇಷವಾಗಿ ಪೌಷ್ಟಿಕ ಆಹಾರ ಸೇವನೆ ಅತ್ಯಂತ ಮುಖ್ಯವಾಗಿದೆ. ಚಿಕ್ಕ ವಯಸ್ಸಿನಲ್ಲಿ ಪೌಷ್ಟಿಕಾಂಶದ ಕೊರತೆ ಕಂಡುಬಂದರೆ, ಮಾಸಿಕ ದಿನಗಳ ಆರಂಭದಿಂದಲೇ ಪಿಸಿಓಡಿಯಂತಹ ಸಮಸ್ಯೆಗಳು ಉಂಟಾಗಬಹುದು. ಪಿಸಿಓಡಿ (Polycystic Ovary Syndrome) ಅಂದರೆ ಅಂಡಾಶಯದಲ್ಲಿ ಸಿಸ್ಟಗಳು ಇರುತ್ತದೆ ಮತ್ತು ಹರ‍್ಮೋನಿನ ಅಸಮತೋಲನವು ಸಮಸ್ಯೆಯನ್ನು ಉಂಟುಮಾಡುತ್ತದೆ. ಆದ್ದರಿಂದ, ದೇಹದಲ್ಲಿ ಪೌಷ್ಟಿಕಾಂಶವನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ಬಹುಮುಖ್ಯವಾಗಿದೆ.

ವಯಸ್ಸಿಗೆ ಅನುಗುಣವಾಗಿ ಪೌಷ್ಟಿಕಾಂಶದ ಅಗತ್ಯತೆ

ಹದಿಹರೆಯದ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಪೌಷ್ಟಿಕಾಂಶದ ಅಗತ್ಯವಿರುತ್ತದೆ. ನಂತರ ಗರ್ಭಾವಸ್ಥೆ, ಹೆರಿಗೆ ಮುಂತಾದ ಹಂತಗಳಲ್ಲಿ, ಮೂಳೆಗಳ ಬೆಳವಣಿಗೆ ಮತ್ತು ಗರ್ಭಕೋಶದ ಆರೋಗ್ಯವನ್ನು ಕಾಪಾಡಲು ಪೌಷ್ಟಿಕ ಆಹಾರ ಸೇವನೆ ಅತ್ಯಂತ ಮಹತ್ವ ಪೂರ್ಣವಾಗಿರುತ್ತದೆ. ಹೀಗಾಗಿ, ಹಸಿರು ತರಕಾರಿಗಳು, ಹಣ್ಣುಗಳು, ಫೈಬರ್‌ ಹಾಗೂ ಕ್ಯಾಲ್ಸಿಯಂ ಜಾಸ್ತಿ ಹೊಂದಿರುವ ಆಹಾರಗಳನ್ನು ಸೇವಿಸುವುದು ಅತ್ಯವಶ್ಯಕವಾಗಿದೆ. ಆದರೆ, ಹೆಚ್ಚು ಸಂಸ್ಕರಿತ ಆಹಾರಗಳು ಸಕ್ಕರೆ, ಉಪ್ಪು, ಕರ‍್ಬೋನೇಟೆಡ್ ಪಾನೀಯಗಳು ಮತ್ತು ಸಿಹಿತಿಂಡಿಗಳನ್ನು ಸೇವಿಸುವುದರಿಂದ ತಪ್ಪಿಸಿಕೊಳ್ಳುವುದು ಉತ್ತಮ.

ಯಾವೆಲ್ಲಾ ಪೌಷ್ಟಿಕಾಂಶದ ಅಗತ್ಯವಿರುತ್ತದೆ?
ಪೌಷ್ಟಿಕಾಂಶದ ಸಮತೋಲನ ಸಾಧಿಸುವುದು ಸುಲಭವಲ್ಲ, ಏಕೆಂದರೆ ದೇಹಕ್ಕೆ ಅಗತ್ಯವಿರುವ ಆಹಾರವು ಸರಿಯಾದ ಪ್ರಮಾಣದಲ್ಲಿ ದೊರೆಯಬೇಕಾಗುತ್ತದೆ. ಆದ ಕಾರಣ, ಪ್ರತಿದಿನವೂ ಕರ‍್ಬೋಹೈಡ್ರೇಟ್‌ಗಳು, ಲಿಪಿಡ್‌ಗಳು, ಪ್ರೋಟೀನ್‌ಗಳು, ನೀರು, ವಿಟಮಿನ್‌ಗಳು ಮತ್ತು ಖನಿಜಗಳು ಸೇರಿದಂತೆ ಪ್ರಮುಖ ಪೋಷಕಾಂಶಗಳನ್ನು ಹೊಂದಿದ ಆಹಾರ ಸೇವಿಸುವುದು, ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಸರಿಯಾಗಿ ದೊರಕಿಸಿಕೊಳ್ಳಲು ಸಹಾಯ ಮಾಡುತ್ತದೆ.

ಉತ್ತಮ ಪೌಷ್ಟಿಕಾತ್ಮಕ ನಿರ್ವಹಣೆಗೆ ಜೀವನ ಶೈಲಿ ಸಲಹೆಗಳು
ಮನೆಯಲ್ಲೇ ತಯಾರಿಸಿದ ತಾಜಾ ಆಹಾರ ಸೇವಿಸಿ.
ಸಮತೋಲಿತ ಆಹಾರವನ್ನು ಸೇವಿಸಿ: ನಿಮ್ಮ ಊಟದಲ್ಲಿ ವಿವಿಧ ಆಹಾರಗಳನ್ನು ಸೇರಿಸಿ- ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳು.

ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮೇಲೆ ಕೇಂದ್ರೀಕರಿಸಿ : ಮೂಳೆಯ ಆರೋಗ್ಯವನ್ನು ಬೆಂಬಲಿಸಲು ಹಾಲು ಮತ್ತು ಹಾಲಿನ ಉತ್ಪನ್ನಗಳು, ರಾಗಿ, ಎಳ್ಳು ಬೀಜಗಳು, ಹಸಿರು ಸೊಪ್ಪು ತರಕಾರಿ, ಮೀನು ಮತ್ತು ವಿಟಮಿನ್ ಡಿ ಗಾಗಿ ಸರ‍್ಯನ ಬೆಳಕು. ವಿಟಮಿನ್ ಡಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಸಾಕಷ್ಟು ಕಬ್ಬಿಣಾಂಶವಿರುವ ಆಹಾರವನ್ನು ಸೇವಿಸಿ: ರಕ್ತಹೀನತೆಯನ್ನು ತಡೆಗಟ್ಟಲು ಕಬ್ಬಿಣಾಂಶವು (Iron) ಮುಖ್ಯವಾಗಿದೆ. ಕೋಳಿ ,ಮೀನು, ಮೊಟ್ಟೆ , ಲಿವರ್, ಹಸಿರು ಸೊಪ್ಪು ತರಕಾರಿ, ಧಾನ್ಯಗಳು, ಬೆಲ್ಲ, ಒಣ ಹಣ್ಣು ಮತ್ತು ಬೀಜಗಳನ್ನು ಸೇವಿಸಿ. ಕಬ್ಬಿನಾಂಶದ ಉತ್ತಮ ಹೀರಿಕೆಗೆ ವಿಟಾಮಿಕ್ ಸಿ ಸಮೃದ್ಧ ಆಹಾರ ಬಳಸಿ. ಟೀ ಮತ್ತು ಕಾಫಿ ನಿಯಮಿತವಾಗಿ ಹಾಗೂ ಆಹಾರದ ಜೊತೆಗೆ ಸೇವಿಸದೇ ಕನಿಷ್ಠ ಅಂತರವನ್ನು ಕಾಪಾಡಿ .

ನಾರಿನಂಶ /ಫೈಬರ್ಗೆ ಆದ್ಯತೆ ನೀಡಿ : ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಸಕ್ಕರೆ ಕಾಯಿಲೆ, ಬೊಜ್ಜು ಹಾಗೂ ಹೃದಯದ ಸಂಬಂಧಿಸಿದ ಕಾಯಿಲೆಯನ್ನು ತಪ್ಪಿಸಲು ನಾರಿನಂಶವಿರುವ ಆಹಾರಗಳಾದ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯ, ಬೇಳೆಕಾಳುಗಳಂತಹ ಹೆಚ್ಚಿನ ಫೈಬರ್ ಆಹಾರಗಳನ್ನು ಸೇರಿಸಿ.

ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆಯನ್ನು ಮಿತಿಗೊಳಿಸಿ

ಹೆಚ್ಚು ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಇದು ತೂಕ ಹೆಚ್ಚಾಗಲು ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಆಹಾರದ ಪ್ರಮಾಣವನ್ನು ಗಮನಿಸಿ : ಅತಿಯಾದ ಆಹಾರ ಸೇವನೆಯಿಂದ ತಪ್ಪಿಸಲು ತೆಗೆದುಕೊಳ್ಳುವ ಪ್ರಮಾಣವನ್ನು ಗಮನಿಸಿ. ಸಣ್ಣ ಮತ್ತು ಸಮತೋಲಿತ ಆಹಾರಗಳನ್ನು ಸೇವಿಸುವುದರಿಂದ ಶಕ್ತಿ ಮಟ್ಟಗಳನ್ನು ಕಾಪಾಡಿಕೊಳ್ಳಲು ಮತ್ತು ತೂಕ ಹೆಚ್ಚುವಿಕೆ ತಪ್ಪಿಸಲು ಸಹಾಯವಾಗುತ್ತದೆ. ಅಜಾಗರೂಕತೆಯಿಂದ ತಿನ್ನುವುದನ್ನು ತಪ್ಪಿಸಿ, ಮನಸ್ಸಿಟ್ಟು ತಿನ್ನುವ ಅಭ್ಯಾಸ ಬೆಳೆಸಿ.

ಆರೋಗ್ಯಕರ ಪಾನೀಯಗಳೊಂದಿಗೆ ಹೈಡ್ರೇಟ್ ಆಗಿರಿ : ಸಕ್ಕರೆ ಪಾನೀಯಗಳ ಬದಲಿಗೆ ಎಳನೀರು, ಗಿಡಮೂಲಿಕೆ ಚಹಾಗಳು ಅಥವಾ ಕಡಿಮೆ-ಕೊಬ್ಬಿನ ಹಾಲು, ಮಜ್ಜಿಗೆ, ರಾಗಿ ಅಂಬಲಿ, ಸೂಪ್‌ಗಳನ್ನು ಆರಿಸಿಕೊಳ್ಳಿ.

ನಿಯಮಿತವಾಗಿ ವ್ಯಾಯಾಮ ಮಾಡಿ : ವಾರದ ಹೆಚ್ಚಿನ ದಿನಗಳಲ್ಲಿ ಕನಿಷ್ಠ 30 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಗುರಿಯಾಗಿರಿಸಿಕೊಳ್ಳಿ. ಸ್ನಾಯುವಿನ ಮತ್ತು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಶಕ್ತಿ ತರಬೇತಿ ವ್ಯಾಯಾಮಗಳನ್ನು (Strength training exercises) ಸೇರಿಸಿ.

ಒತ್ತಡ ಮತ್ತು ಮಾನಸಿಕ ಆರೋಗ್ಯವನ್ನು ನಿರ್ವಹಿಸಿ
ಯೋಗ, ಆಳವಾದ ಉಸಿರಾಟ ಅಥವಾ ಧ್ಯಾನದಂತಹ ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿ. ಒತ್ತಡವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ಸ್ವಯಂ-ಆರೈಕೆಗಾಗಿ ಸಮಯ ತೆಗೆದುಕೊಳ್ಳಿ. ಮೆಡಿಟೇಶನ್, ಉತ್ತಮ ನಿದ್ರೆ ಮತ್ತು ಸಮತೋಲಿತ ಆಹಾರದ ಮೂಲಕ ಒತ್ತಡ ನಿರ್ವಹಿಸಬೇಕು.

ನಿಯಮಿತ ಆರೋಗ್ಯ ಪರೀಕ್ಷೆಗಳು

ವಾರ್ಷಿಕ ಪರೀಕ್ಷೆಗಳು, ರಕ್ತದೊತ್ತಡ, ಕೊಲೆಸ್ಟ್ರಾಲ್, ಮ್ಯಾಮೊಗ್ರಾಮ್‌ಗಳು ಮತ್ತು ಪ್ಯಾಪ್ ಸ್ಮೀಯರ್‌ಗಳಂತಹ ಮಹಿಳೆಯರಿಗೆ ನಿಯಮಿತ ಆರೋಗ್ಯ ಪರೀಕ್ಷೆಗಳು (Routine health check) ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಅನುಸರಣಾ ಆರೈಕೆಯು (Follow-ups) ಮಧುಮೇಹ ಮತ್ತು ಹೃದ್ರೋಗದಂತಹ ದೀರ್ಘಕಾಲದ ಪರಿಸ್ಥಿತಿಗಳ ನಿರಂತರ ಮೇಲ್ವಿಚಾರಣೆಯನ್ನು ಖಚಿತಪಡಿಸುತ್ತದೆ. ಮಾನಸಿಕ ಆರೋಗ್ಯ, ಮೂಳೆ ಆರೋಗ್ಯ ಮತ್ತು ಥೈರಾಯ್ಡ್ ಕಾರ್ಯಕ್ಕೆ ಆದ್ಯತೆ ನೀಡುವುದು ಅತ್ಯಗತ್ಯ. ಸಮಯೋಚಿತ ಸ್ಕ್ರೀನಿಂಗ್‌ಗಳು ಮತ್ತು ತಪಾಸಣೆಗಳು ದೀರ್ಘಾವಧಿಯ ಯೋಗಕ್ಷೇಮ ಮತ್ತು ತಡೆಗಟ್ಟುವಿಕೆಯನ್ನು ಬೆಂಬಲಿಸುತ್ತವೆ.

ಆಹಾರ, ಆರೋಗ್ಯ ಮತ್ತು ಪೋಷಣೆ ಮಹಿಳೆಯರ ಪ್ರಗತಿಗೆ ಮಹತ್ವಪೂರ್ಣವಾಗಿದೆ. ಸಮತೋಲಿತ ಪೋಷಣೆ ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಬೆಂಬಲಿಸಿ, ಅವರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸಮತೋಲಿತ ಆಹಾರಕ್ಕೆ ಪ್ರಾಮುಖ್ಯತೆ ನೀಡಿದರೆ, ಮಹಿಳೆಯರ ಆರೋಗ್ಯ ಮತ್ತು ಪ್ರತಿರೋಧಕ ಭವಿಷ್ಯ ನಿರ್ಮಿಸಲು ಸಹಾಯ ಮಾಡಬಹುದು.

ಶಾಂತಿ ನೀರೆ
ಪಥ್ಯಾಹಾರ ತಜ್ಞರು
ಕ್ಲಿನಿಕಲ್ ನ್ಯೂಟ್ರಿಷನ್ & ಪಥ್ಯಾಹಾರ ವಿಭಾಗ
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ























error: Content is protected !!
Scroll to Top