ಯಾವುದೇ ಒಂದು ಕ್ರಿಮಿನಲ್ ಘಟನೆ ನಡೆದ ಸ್ಥಳವನ್ನು ತಕ್ಷೀರು ಸ್ಥಳ ಎನ್ನುತ್ತಾರೆ. ಒಂದು ಅಪರಾಧದ ಬಗ್ಗೆ ತನಿಖೆ ನಡೆಸುವ ಪ್ರಾರಂಭದ ಹಂತದಲ್ಲಿ ತಕ್ಷೀರು ಸ್ಥಳದ ಸಂರಕ್ಷಣೆ ಅತ್ಯಗತ್ಯವಾಗಿರುತ್ತದೆ. ಕಾರಣ ಅಪರಾಧದಲ್ಲಿ ಭಾಗಿಯಾದ ಅಪರಾಧಿಯು ತಕ್ಷೀರು ಸ್ಥಳದಲ್ಲಿ ಬಿಟ್ಟು ಹೋಗಿರುವ ಕೆಲವು ಗುರುತುಗಳನ್ನು ಮತ್ತು ಭೌತಿಕ ಸುಳಿವುಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುವುದರಿಂದ ಅದು ಅಪರಾಧಿಯನ್ನು ಪತ್ತೆ ಹಚ್ಚುವಲ್ಲಿ ತನಿಖಾಧಿಕಾರಿಗೆ ನೆರವಾಗುತ್ತದೆ. ಯಾವುದೇ ಒಂದು ಅಪರಾಧದ ಬಗ್ಗೆ ವೈಜ್ಞಾನಿಕವಾಗಿ ತನಿಖೆಯನ್ನು ನಡೆಸುವ ಸಂದರ್ಭದಲ್ಲಿ ತಕ್ಷೀರು ಸ್ಥಳದ ಮತ್ತು ಅದರ ಸುತ್ತಮುತ್ತಲಿನ ಭೌತಿಕ ಸಾಕ್ಷ್ಯವನ್ನು ಅತ್ಯಂತ ಸೂಕ್ಷವಾಗಿ ಗಮನಿಸುವುದು ಮತ್ತು ಸಂಗ್ರಹ ಮಾಡುವುದು ತನಿಖಾಧಿಕಾರಿಯ ಪ್ರಮುಖ ಕರ್ತವ್ಯವಾಗಿರುತ್ತದೆ. ಸಾಮಾನ್ಯವಾಗಿ ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಭೌತಿಕ ಸಾಕ್ಷ್ಯವು ಲಭ್ಯವಿರುತ್ತದೆ.
ತಕ್ಷೀರು ಸ್ಥಳದಲ್ಲಿ ಸಂತ್ರಸ್ತನ ದೇಹ ಮತ್ತು ಉಡುಪುಗಳ ಮೇಲೆ, ಸಂದೇಹಿತ ವ್ಯಕ್ತಿಯ ದೇಹ ಮತ್ತು ಉಡುಪುಗಳು ಮತ್ತು ಅಪರಾಧಕ್ಕಾಗಿ ಉಪಯೋಗಿಸಿದ ಆಯುಧಗಳ ಮೇಲೆ ಕಂಡು ಬರಬಹುದಾದ ರಕ್ತ, ವೀರ್ಯ, ಜೊಲ್ಲು, ಮೂತ್ರ, ಬೆವರಿನ ಕಲೆಗಳು ಲಭ್ಯವಿರುವ ಸಾಧ್ಯತೆ ಇರುತ್ತದೆ. ಅತ್ಯಾಚಾರ, ಹತ್ಯೆ, ಅಪಘಾತ ಮಾಡಿ ಪರಾರಿಯಾಗುವಂತಹ ಅಪರಾಧಗಳಿಗೆ ಸಂಬಂಧಿಸಿದ ಹಿಂಸೆಯ ಕೃತ್ಯಗಳಲ್ಲಿ ಲಭ್ಯವಿರುವ ಅಪರಾಧಿಯ ಕೂದಲುಗಳನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬಹುದಾಗಿದೆ. ಮಾನವ ಹತ್ಯೆ, ಅಪಘಾತ ಮಾಡಿ ಪರಾರಿಯಾಗುವುದು, ಕೊಲೆ, ಮನೆಗಳ್ಳತನ, ಅತ್ಯಾಚಾರ, ಕಳ್ಳತನ ಮುಂತಾದ ಅಪರಾಧಗಳಲ್ಲಿ ಉಪಯೋಗಿಸಿದ ವಾಹನಗಳಲ್ಲಿ ಅಥವಾ ಸ್ಥಳದಲ್ಲಿ ಲಭ್ಯವಿರುವ ವಸ್ತ್ರದ ತುಣುಕುಗಳನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬಹುದಾಗಿದೆ. ದರೋಡೆ, ವ್ಯಕ್ತಿಯನ್ನು ಹತ್ಯೆಗೈದು ನೇತು ಹಾಕುವುದು, ಕುತ್ತಿಗೆ ಹಿಸುಕುವುದು ಮುಂತಾದ ಅಪರಾಧಗಳ ಸಂದರ್ಭದಲ್ಲಿ ಉಪಯೋಗಿಸಿದ ಹಗ್ಗ ಲಭ್ಯವಿದ್ದಲ್ಲಿ ಅದನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬಹುದಾಗಿದೆ. ಗಾಜುಗಳ ಮುಖಾಂತರ ಅಗ್ನ್ಯಸ್ತ್ರಗಳನ್ನು ಉಪಯೋಗಿಸಿರುವಾಗ ಮತ್ತು ಅಪರಾಧಗಳ ಇತರ ಬಗೆಯ ಸಾಕಷ್ಟು ಸಂದರ್ಭಗಳಲ್ಲಿ ಪದೇ ಪದೆ ದರೋಡೆ, ಕೊಲೆ, ಹತ್ಯೆ, ಮೋಟಾರು ವಾಹನ ಅಪಘಾತಗಳಲ್ಲಿ ಲಭ್ಯವಿರುವ ಗಾಜನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬಹುದಾಗಿದೆ. ಒಬ್ಬ ವ್ಯಕ್ತಿಯು ಒಂದು ನಿಶ್ಚಿತ ಸ್ಥಳಕ್ಕೆ ಹೋಗಿದ್ದಾನೆಯೇ ಅಥವಾ ಇಲ್ಲವೇ ಮತ್ತು ಒಂದು ವೇಳೆ ಆತನು ಸೆಣಸಾಡುವ ಅವಧಿಯಲ್ಲಿ ನೆಲದ ಮೇಲೆ ಎಸೆಯಲ್ಪಟ್ಟರೆ ಆತನ ಪಾದರಕ್ಷೆ, ವಸ್ತ್ರಗಳ ಮೇಲೆ ಮಣ್ಣು ಕಂಡುಬರುವುದೇ ಅಥವಾ ಇಲ್ಲವೇ ಎಂಬುದನ್ನು ದೃಢೀಕರಿಸಲು ಸ್ಥಳದಲ್ಲಿ ಲಭ್ಯವಿರುವ ಮಣ್ಣನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬಹುದಾಗಿದೆ. ಮನೆಗಳ್ಳತನ, ಮೋಟಾರು ವಾಹನ ಅಪಘಾತದ ಸ್ಥಳ, ಭದ್ರತಾ ತಿಜೋರಿಯನ್ನು ಒಡೆದ ಪ್ರಕರಣಗಳು ಮತ್ತು ಅಪರಾಧಗಳ ಹಲವಾರು ವಿವಿಧ ಬಗೆಗಳೊಂದಿಗೆ ಸಂಬಂಧಿಸಿದಂತೆ ಸಂದೇಹಾಸ್ಪದ ವ್ಯಕ್ತಿಯ ವಸ್ತ್ರಗಳ ಮೇಲೆ ಕಂಡುಬರುವಂತಹ ಲೇಪನಗಳು ಅಥವಾ ಕಲೆಗಳನ್ನು ಹಾಗೂ ವ್ಯಾಪಾರ ಅಥವಾ ವೃತ್ತಿಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳ ಕರ್ತವ್ಯದ ಕಾಲಾವಧಿಯಲ್ಲಿ ಅವರ ಕಫ್, ಉಗುರು, ಕಿವಿ, ಮತ್ತು ಚರ್ಮದ ಮಡಿಕೆಗಳಲ್ಲಿ ಅಥವಾ ಕಾರ್ಯದ ಲಕ್ಷಣಕ್ಕೆ ಸಂಬಂಧಿಸಿದಂತೆ ಕಂಡು ಬರುವಂತಹ ಧೂಳು ಇವುಗಳನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬಹುದಾಗಿದೆ. ಭೌತಿಕ ಸುಳಿವುಗಳನ್ನು ಕಾನೂನುಬದ್ಧವಾಗಿ ಅಂಗೀಕರಿಸಬಹುದಾದ ನಮೂನೆಯಲ್ಲಿ ಹಾಜರುಪಡಿಸುವುದರಿಂದ ಮತ್ತು ಜಪ್ತಿಗೊಳಪಟ್ಟ ವಸ್ತುಗಳ ವೈಜ್ಞಾನಿಕ ವಿಶ್ಲೇಷಣೆಯಿಂದ ಮತ್ತು ಕಾನೂನಿನಡಿಯಲ್ಲಿ ಅಂಗೀಕರಿಸಿದಂತೆ ತಜ್ಞರ ಅಭಿಪ್ರಾಯದಿಂದ ಖಾತ್ರಿಗೊಳಪಡುತ್ತದೆ. ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಸಾಕ್ಷ್ಯ ಅಥವಾ ವಿಧಿವಿಜ್ಞಾನವು ಡಿಎನ್ಎ ಪರೀಕ್ಷೆಯನ್ನು ಒಳಗೊಂಡಂತೆ ಹಲವಾರು ಕ್ಷೇತ್ರಗಳಲ್ಲಿ ವಿಶ್ವಾಸಾರ್ಹವಾದ ಒಂದು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲ್ಪಟ್ಟಿದೆ. ಡಿಎನ್ಎ ಪರೀಕ್ಷೆಯ ಮುಖಾಂತರ ಆರೋಪಿಯ ಅಥವಾ ಸಂತ್ರಸ್ತ ವ್ಯಕ್ತಿಯ ಅಂಗಾಂಶ, ಮೂಳೆ, ಕೂದಲು, ಮತ್ತು ಶರೀರ ಸತ್ವಗಳ ವಿಶ್ಲೇಷಣೆ ಮಾಡುವುದರಿಂದ ಗುರುತು ಹಿಡಿಯಬಹುದು. ಎಲ್ಲೆಲ್ಲಿ ಅಗತ್ಯ ಮತ್ತು ಸಾಧ್ಯತೆಗಳಿರುವುದೋ ಅಂತಹ ಸಂದರ್ಭಗಳಲ್ಲೆಲ್ಲಾ ಆರೋಪಿ ಅಥವಾ ಸಂತ್ರಸ್ತದ ಗುರುತನ್ನು ಅಪರಾಧದೊಂದಿಗೆ ಸಂಬಂಧವನ್ನು ಕಲ್ಪಸುವುದಕ್ಕಾಗಿ ಗುರುತನ್ನು ಸಾಬೀತುಪಡಿಸಲು ಡಿಎನ್ಎ ಪರೀಕ್ಷಾ ತತ್ವಗಳ ಮೇಲೆ ಸಾಕ್ಷ್ಯವನ್ನು ಸಂಗ್ರಹ ಮಾಡಬೇಕಾಗುತ್ತದೆ.































































