ಸೂಕ್ತ ಪರಿಹಾರ ನೀಡಿದಲ್ಲಿ ಭೂಮಿ ಬಿಟ್ಟು ಕೊಡಲು ಸಿದ್ಧ – ಹೋರಾಟ ಸಮಿತಿ
ಕಾರ್ಕಳ : ರಾಷ್ಟ್ರೀಯ ಹೆದ್ದಾರಿ 169 ಸಾಣೂರು ಪುಲ್ಕೇರಿ ಬೈಪಾಸ್ ಜಂಕ್ಷನ್ನಿಂದ ಮಾಳ ಅರಣ್ಯ ಗೇಟ್ವರೆಗೆ 15 ಕಿ.ಮೀ. ವ್ಯಾಪ್ತಿಯ ರಸ್ತೆ ಕಾಮಗಾರಿ ನಡೆಯುತ್ತಿದ್ದು ಭೂಮಾಲಕರಿಗೆ ಸೂಕ್ತ ಪರಿಹಾರ ನೀಡದೇ ಅನ್ಯಾಯ ಮಾಡಲಾಗಿದೆ. ಅಲ್ಲದೆ ಮಾ. 3ರಂದು ದಿನ ಪತ್ರಿಕೆಯೊಂದರಲ್ಲಿ ಜಿಲ್ಲಾಧಿಕಾರಿಯವರ ಹೇಳಿಕೆ ಪ್ರಕಟವಾಗಿದ್ದು, ಅದರಲ್ಲಿ ಎಲ್ಲಾ ಭೂಮಾಲಕರು ಪರಿಹಾರ ಮೊತ್ತವನ್ನು ಪಡೆಯಲು ಸಹಮತ ವ್ಯಕ್ತಪಡಿಸಿರುತ್ತಾರೆ ಎಂದು ತಿಳಿಸಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ರಾಷ್ಟ್ರೀಯ ಹೆದ್ದಾರಿ 169 – ಭೂ ಮಾಲಕರ ಹೋರಾಟ ಸಮಿತಿ ಹೇಳಿದೆ.
ಸಾಣೂರು, ಮಿಯ್ಯಾರು, ಮುಡಾರು, ಮಾಳ ರಾಷ್ಟ್ರೀಯ ಹೆದ್ದಾರಿ169 ಭೂ ಮಾಲಕರ ಹೋರಾಟ ಸಮಿತಿ ಮಾ. 5ರಂದು ಕಾರ್ಕಳ ಪ್ರಕಾಶ್ ಹೊಟೇಲ್ನಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ, ಭೂ ಮಾಲಕರ ಪರಿಹಾರ ವಿಚಾರವಾಗಿ ಅನ್ಯಾಯವಾಗುತ್ತಿದೆ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಾನೂನಾತ್ಮಕವಾಗಿ ಗಮನ ಹರಿಸಿ ಸೂಕ್ತ ಪರಿಹಾರ ನೀಡಿದಲ್ಲಿ ಭೂಮಿ ಬಿಟ್ಟು ಕೊಡಲು ಸಿದ್ಧ ಎಂದು ಹೋರಾಟ ಸಮಿತಿಯ ಜಾನ್ ಡಿಸಿಲ್ವಾ ಹೇಳಿದರು.

ಸಾಣೂರಿನಿಂದ ಮಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಇನ್ನೂ ಕೂಡ ಭೂಮಾಲಕರಿಗೆ ನ್ಯಾಯಯುತ ಪರಿಹಾರ ದೊರಕಿರುವುದಿಲ್ಲ ಎಂದ ಅವರು ನಮಗೆ ಕಾಮಗಾರಿ ಬಗ್ಗೆ ಯಾವುದೇ ಆಕ್ಷೇಪ ಇಲ್ಲ ಬದಲಾಗಿ ಭೂಮಾಲಕರಿಗೆ ನ್ಯಾಯಯುತ ಪರಿಹಾರ ದೊರೆಯಬೇಕು ಎಂದು ಆಗ್ರಹಿಸಿದರು.
ಮಾಳ ಗ್ರಾಮದ ಪದ್ಮನಾಭ್ ನಾಯಕ್ ಮಾತನಾಡಿ, ನ್ಯಾಯಯುತವಾದ ಪರಿಹಾರ ನೀಡುತ್ತೇವೆ ಎಂಬ ಭರವಸೆಯ ಹೊರತಾಗಿ ಯಾವುದೇ ರೀತಿಯಾದ ಪರಿಹಾರ ದೊರೆತಿಲ್ಲ. ಈ ಬಗ್ಗೆ ಕಳೆದ ಬಾರಿ ಸಭೆ ನಡೆದಾಗ 2024ರ ಡಿಸೆಂಬರ್ 31ರೊಳಗೆ ಸೂಕ್ತವಾದ ಪರಿಹಾರ ನೀಡುವುದಾಗಿ ತಿಳಿಸಿದ್ದರು, ಆದರೆ ಆ ಬಗ್ಗೆ ಯಾವುದೇ ನೋಟಿಸ್ ಬಂದಿಲ್ಲ ಬದಲಾಗಿ ಈಗ ಕೊಡುವಷ್ಟು ಪರಿಹಾರ ತೆಗೆದುಕೊಳ್ಳಿ ಎನ್ನುತ್ತಿದ್ದಾರೆ. ಅಲ್ಲದೆ ನಾವು ಜಾಗ ಬಿಟ್ಟು ಕೊಡಲು ಸಿದ್ದ ಎಂದು ಹೇಳಿದ್ದೇವೆ ಎಂದು ಪತ್ರಿಕೆಯಲ್ಲಿ ಡಿಸಿ ಅವರ ಹೇಳಿಕೆ ಪ್ರಕಟಿಸಿದ್ದಾರೆ. ಇದು ಸುಳ್ಳು. ನಾವು ಒಪ್ಪಿಗೆ ನೀಡಲೇ ಇಲ್ಲ. ನಮಗೆ ಸೂಕ್ತ ಪರಿಹಾರ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಎನ್.ಹೆಚ್. ನಿಯಮ ಪಾಲನೆಯಿಲ್ಲ
ಶ್ಯಾಮ್ ಶೆಟ್ಟಿ ಮಿಯ್ಯಾರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಜಾಗಕ್ಕೆ ಅಧಿಕ ಬೆಲೆಯಿದೆ. ಆದರೆ, ಆ ಬೆಲೆಗನುಸಾರವಾಗಿ ನಮಗೆ ಪರಿಹಾರ ಒದಗಿಸುತ್ತಿಲ್ಲ. ಅಲ್ಲದೆ ಜಮೀನಿನಲ್ಲಿ ಇರುವ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಅತಿ ಕನಿಷ್ಠ ಬೆಲೆಯನ್ನು ನಿರ್ಧರಿಸಲಾಗಿದೆ. ಒಂದು ತೆಂಗಿನ ಮರದ ಜೀವಿತಾವಧಿ ಸರಾಸರಿ 60 ರಿಂದ 75 ವರ್ಷವಾಗಿದ್ದು ವರ್ಷಕ್ಕೆ ಕನಿಷ್ಠ 3,000 ರೂಪಾಯಿ ಆದಾಯ ಕೊಡುತ್ತದೆ. ಒಂದು ಲಕ್ಷದವರೆಗೆ ಬೆಲೆ ಬಾಳುವ ತೆಂಗಿನ ಮರಕ್ಕೆ ಕೇವಲ 13,000 ರೂ. ಬೆಲೆ ನಿರ್ಧರಿಸಿದ್ದಾರೆ. ಕೃಷಿ ಭೂಮಿಗೆ ಮೌಲ್ಯ ನಿಗದಿ ಮಾಡುವಾಗ ಎನ್.ಹೆಚ್. ನಿಯಮ ಪಾಲಿಸಲಿಲ್ಲ. ಹೆದ್ದಾರಿ ಬದಿಯಲ್ಲಿರುವ ಕೆಲವು ಜಮೀನುಗಳಿಗೆ ಇನ್ನೂ ಭೂಸ್ವಾಧೀನಕ್ಕೆ ಅಧಿಸೂಚನೆಯನ್ನೇ ಹೊರಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾರತಮ್ಯ
ಸಾಣೂರಿನಿಂದ ಕುಲಶೇಖರ ರಾಷ್ಟ್ರೀಯ ಹೆದ್ದಾರಿ 169 ನಮ್ಮದೇ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದ್ದು, ಅವರಿಗೆ ರಾಷ್ಟ್ರೀಯ ಹೆದ್ದಾರಿ ನಿಯಮಾವಳಿ ಪ್ರಕಾರ ನೀಡಿದ್ದ ಪರಿಹಾರವನ್ನು ನಮಗೆ ನೀಡದೆ ಅನ್ಯಾಯವೆಸಗಿದ್ದಾರೆ. ಈ ತಾರತಮ್ಯ ಧೋರಣೆಯನ್ನು ಪ್ರಬಲವಾಗಿ ಖಂಡಿಸುತ್ತೇವೆ. ನ್ಯಾಯಯುತವಾದ ಪರಿಹಾರ ದೊರಕದೇ ಯಾವುದೇ ಕಾರಣಕ್ಕೂ ನಮ್ಮ ಜಮೀನನ್ನು ಬಿಟ್ಟು ಕೊಡುವುದಿಲ್ಲ. ಮುಂದಿನ ದಿನಗಳಲ್ಲಿ ನಾವು ಸಾರ್ವಜನಿಕವಾಗಿ ತೀವ್ರ ಪ್ರತಿಭಟನೆ ಮಾಡುವವರಿದ್ದೇವೆ. ಮಾನ್ಯ ಶಾಸಕರು, ಜಿಲ್ಲಾಧಿಕಾರಿಯವರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದಕ್ಕೆ ಅವಕಾಶ ಕೊಡದೆ ನಮಗೆ ರಾ. ಹೆ. 169ರ ನಿಯಮಗಳಿಗೆ ಅನುಗುಣವಾಗಿ ಕಾನೂನಿನ ಚೌಕಟ್ಟಿನೊಳಗೆ ನ್ಯಾಯಯುತವಾದ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕ್ಲಿಂಟನ್ ಕಾರ್ಡೋಜ, ಮಿಥುನ್ ಕುಮಾರ್, ಸಾಣೂರಿನಿಂದ ಮಾಳವರೆಗಿನ ರಾಷ್ಟ್ರೀಯ ಹೆದ್ದಾರಿ ಬದಿಯ ಭೂ ಮಾಲಕರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.































































