ಕಾರ್ಕಳ ಲ್ಯಾಂಪ್ಸ್‌ ಸೊಸೈಟಿ ಅಧ್ಯಕ್ಷರ ಆಯ್ಕೆಯಲ್ಲಿ ಮೋಸ

ಕಾರ್ಕಳ : ಲ್ಯಾಂಪ್ಸ್‌ ಸೊಸೈಟಿಯಲ್ಲಿ (ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ) ಅಧ್ಯಕ್ಷರ ಆಯ್ಕೆಯ ಚುನಾವಣೆ ವೇಳೆ ಅನ್ಯಾಯವಾಗಿದೆ‌ ಎಂದು ಆರೋಪಿಸಿ‌ ನಿರ್ದೇಶಕರು ಸೊಸೈಟಿಯ ಮುಂಭಾಗದಲ್ಲಿ ಫೆ. 27ರಂದು ಧರಣಿ ನಡೆಸಿದ ಘಟನೆ ನಡೆದಿದೆ. ಸೊಸೈಟಿ ನಿರ್ದೇಶಕ‌ ಗಂಗಾಧರ್ ಗೌಡ ಈದು ಮಾತನಾಡಿ, ಲ್ಯಾಂಪ್ಸ್ ಸೊಸೈಟಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ‌ಲ್ಲಿ 13 ಮತದಲ್ಲಿ ಅಭ್ಯರ್ಥಿಗಳಾದ ಉದಯ ನಾಯ್ಕ್ ಮತ್ತು ರಾಘವ ನಾಯ್ಕ್ ಅವರಿಗೆ ತಲಾ 6 ಮತ ಬಂದಿದೆ. ಒಂದು ಮತ ಅಸಿಂಧುಗೊಂಡಿದೆ. ಆದರೆ ಇದನ್ನು ಸರಿಯಾಗಿ ಪರಿಶೀಲಿಸದೇ ಚುನಾವಣಾಧಿಕಾರಿ ಕೆ. ಆರ್. ರೋಹಿತ್ ಅವರು ಅಸಿಂಧು ಮತವನ್ನು ಸಿಂಧುಗೊಳಿಸಿ ರಾಘವ ನಾಯ್ಕ್‌ ಅವರನ್ನು ಅಧ್ಯಕ್ಷರನ್ನಾಗಿ‌ ಆಯ್ಕೆ ಮಾಡಿದ್ದಾರೆ ಎಂದು ಆಕ್ರೋಶ‌ ವ್ಯಕ್ತಪಡಿಸಿದರು.

ಅಸಿಂಧು ಮತದ ಕುರಿತಾಗಿ ನಮ್ಮ ಆಕ್ಷೇಪಣೆಯ ಹೊರತಾಗಿಯೂ ರಾಘವ ನಾಯ್ಕ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಚುನಾವಣಾಧಿಕಾರಿ ಮತ್ತು ರಾಘವ ನಾಯ್ಕ್ ಮೊದಲೇ ಯೋಜನೆ ರೂಪಿಸಿ ಈ ರೀತಿಯ ಅನ್ಯಾಯ ಮಾಡಿದ್ದಾರೆ ಎಂದು ಗಂಗಾಧರ್‌ ಆರೋಪಿಸಿದರು. ಚುನಾವಣೆಯಲ್ಲಿ ಸಹಕಾರಿ ರಂಗದ ನಿಯಮ‌ ಉಲ್ಲಂಘಣೆಯಾಗಿದೆ. ಆದ್ದರಿಂದ ಚುನಾವಣಾ‌ಧಿಕಾರಿ ಮತ್ತು ಉಪನಿಬಂಧಕರು ನಮ್ಮ ಆಕ್ಷೇಪಣೆಯನ್ನು ಪರಿಗಣಿಸಬೇಕು. ಲಾಟರಿ, ನಾಣ್ಯ ಚಿಮ್ಮುವಿಕೆ, ಚೀಟಿ ಎತ್ತುವ ಮೂಲಕ ಅಥವಾ ಮರು ಮತದಾನದ‌ ಮೂಲಕ ಅಧ್ಯಕ್ಷರ ಮರು ಆಯ್ಕೆಯಾಗಬೇಕೆಂದು ಗಂಗಾಧರ್‌ ಒತ್ತಾಯಿಸಿದರು.
ನಿರ್ದೇಶಕ ರಾಘವೇಂದ್ರ ನಾಯ್ಕ್ ಮಾತನಾಡಿ, ಚುನಾವಣೆಯಲ್ಲಿ ಮೋಸ ಕಂಡು ಬಂದಾಗಲೇ ನಾವು ಅದರ ವಿರುದ್ಧ ಧ್ವನಿ ಎತ್ತಿದ್ದೇವೆ. ನಮ್ಮ ಆಕ್ಷೇಪಣೆಯನ್ನು ಲೆಕ್ಕಿಸದೇ ಚುನಾವಣಾಧಿಕಾರಿ ಅಸಿಂಧು ಮತವನ್ನು ಸಿಂಧುಗೊಳಿಸಿದ್ದಾರೆ. ನಾವು ಆ ಸಂದರ್ಭ ಇದರ ವಿರುದ್ಧ ಆಕ್ಷೇಪಣೆ ವ್ಯಕ್ತಪಡಿಸುತ್ತಿರುವುದನ್ನು ವೀಡಿಯೋ ಮಾಡಿಸಿದ ಚುನಾವಣಾಧಿಕಾರಿ ನನ್ನ ಕರ್ತವ್ಯಕ್ಕೆ ಅಡ್ಡಿ ಮಾಡುತ್ತಿದ್ದೀರಿ ಕೇಸ್ ಹಾಕುತ್ತೇನೆ ಎಂದು ಬೆದರಿಸಿದ್ದಾರೆ. ಆದರೆ, ಸಹಕಾರಿ ರಂಗದ ಚುನಾವಣೆ ಸಂದರ್ಭ ವೀಡಿಯೋ ಚಿತ್ರೀಕರಣ ಅವಶ್ಯವಾಗಿದ್ದು, ಈ ಬಾರಿ ಚುನಾವಣೆಯಲ್ಲಿ ವೀಡೀಯೋ ಚಿತ್ರೀಕರಣವೇ ಮಾಡಲಿಲ್ಲ. ಈ ಬಗ್ಗೆ ಚುನವಣಾಧಿಕಾರಿ ಏನೂ ಮಾತನಾಡಲಿಲ್ಲ ಎಂದರು.

ಸೊಸೈಟಿಯಲ್ಲಿ 14 ಮಂದಿ ನಿರ್ದೇಶಕ ಸ್ಥಾನವಿದೆ. ಇವರಲ್ಲಿ 10 ಮಂದಿ ಚುನಾಯಿತರು. 4 ಮಂದಿ ಪದನಿಮಿತ್ತ ನಿರ್ದೇಶಕರಲ್ಲಿ ಮೂವರು ಪದನಿಮಿತ್ತರಿದ್ದು ಪ್ರಸ್ತುತ ಒಟ್ಟು 13 ಮಂದಿ ನಿರ್ದೇಶಕರಿದ್ದಾರೆ. 2025ರ ಜ. 31ರಂದು ನಿರ್ದೇಶಕರ ಚುನಾವಣೆ ನಡೆದಿದ್ದು, ಫೆ. 11 ರಂದು ಅಧ್ಯಕ್ಷರ ಆಯ್ಕೆ ಚುನಾವಣೆ ನಡೆಯಿತು. ರಾಘವ ನಾಯ್ಕ್ ಮತ್ತು ಉದಯ ನಾಯ್ಕ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಇಬ್ಬರೂ ತಲಾ 6 ಮತಗಳನ್ನು ಪಡೆದಿರುತ್ತಾರೆ. ರಾಘವ ನಾಯ್ಕ್ ಅವರು ಕಳೆದ ಮೂರು (15 ವರ್ಷ) ಅವಧಿಗಳಿಂದ ಸೊಸೈಟಿಯ ಅಧ್ಯಕ್ಷರಾಗಿದ್ದು, ನಾಲ್ಕನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ. ಪ್ರತಿಭಟನೆಯಲ್ಲಿ ನಿರ್ದೇಶಕರಾದ ಗಂಗಾಧರ್ ಗೌಡ,‌ ಸುರೇಶ್ ಗೌಡ ನಾಡ್ಪಾಲು, ಉದಯ ನಾಯ್ಕ್ ಭಾಗಿಯಾಗಿದ್ದರು.

ಮನವಿ
ಅಸಿಂಧು ಮತದ ಆಕ್ಷೇಪಣೆಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಲ್ಯಾಂಪ್ ಸೊಸೈಟಿ ಮತ್ತು ಉಡುಪಿ ಜಿಲ್ಲಾ ಸಹಕಾರಿ ರಂಗದ ಉಪನಿಬಂಧಕರ ಕಚೇರಿಯ ಮುಂಭಾಗದಲ್ಲಿ ಅಹೋರಾತ್ರಿ ಪ್ರತಿಭಟನೆ‌ ನಡೆಸುವುದಾಗಿ ಪ್ರತಿಭಟನಾಕಾರರು ಸೊಸೈಟಿಯ ಸಿಇಓ ಕೆ.‌ ದಿವಾಕರ್ ಶೆಟ್ಟಿಯವರಿಗೆ ಮನವಿ ಸಲ್ಲಿಸಿದರು.

















































error: Content is protected !!
Scroll to Top