ತೆಳ್ಳಾರು ರಸ್ತೆಯಲ್ಲಿ ಮುಂದುವರಿದ ಅರೆಬರೆ ಕಾಮಗಾರಿ

ಸ್ಥಳೀಯರಿಗೆ ನರಕಯಾತನೆ – ಪುರಸಭಾ ಮಾಜಿ ಸದಸ್ಯರಿಂದ ತರಾಟೆ

ಕಾರ್ಕಳ : ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕಾರ್ಕಳ ನಗರದಲ್ಲಿ ಅಮೃತ್‌ 2.0 ಯೋಜನೆಯಡಿ ಸುಧಾರಿತ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪೈಪ್‌ ಅಳವಡಿಕೆ ಕಾರ್ಯವಾಗುತ್ತಿದ್ದು, ಈ ವೇಳೆ ಅವಾಂತರವೇ ಸೃಷ್ಟಿಯಾಗುತ್ತಿದೆ. ಕಾಮಗಾರಿ ನಡೆಸುವವರ ನಿರ್ಲಕ್ಷ್ಯದಿಂದ ಹಲವಾರು ಮನೆಗಳ ಒಳಚರಂಡಿ ಪೈಪ್‌ ಒಡೆದಿದ್ದು ಪರಿಣಾಮ ನರಕಯಾತನೆ ಅನುಭವಿಸುವಂತಾಗಿದೆ. ಬಾವಿಗಳಿಗೆ ಒಳಚರಂಡಿಯ ಕೊಳಚೆ ನೀರು ಹರಿದು ನೀರು ಕಲುಷಿತಗೊಂಡಿದೆ. ಪರಿಣಾಮ ಜನರ ತಾಳ್ಮೆಯ ಕಟ್ಟೆಯೂ ಒಡಿದಿದೆ.

ತೆಳ್ಳಾರು ರಸ್ತೆಯಲ್ಲಿ ಬೃಹತ್‌ ಹೊಂಡವೇ ನಿರ್ಮಾಣವಾಗಿದೆ. ಹೊಸ ಪೈಪ್‌ ಕೂರಿಸುವ ವೇಳೆ ಒಳಚರಂಡಿಯ ಚೇಂಬರ್‌ ಹಾಗೂ ಪೈಪ್‌ಗೆ ಡ್ಯಾಮೇಜ್‌ ಆಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಸಾಧ್ಯತೆಯಿದೆ. ಅಗತ್ಯ ಮುನ್ನೆಚ್ಚರಿಕೆ ವಹಿಸದೇ ಕಾಮಗಾರಿ ನಡೆಸುತ್ತಿರುವುದರಿಂದ ಮತ್ತು ನಿಧಾನವಾಗಿ ಕಾಮಗಾರಿ ಸಾಗುತ್ತಿರುವುದರಿಂದ ಸ್ಥಳೀಯರಿಗೆ ಮತ್ತು ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

ಫೆ. 7ರಂದು ಪುರಸಭಾ ಮಾಜಿ ಸದಸ್ಯ, ಸಾಮಾಜಿಕ ಮುಂದಾಳು ಪ್ರಕಾಶ್‌ ರಾವ್‌ ಅವರು ಇಲ್ಲಿನ ಸಮಸ್ಯೆ ಕುರಿತು ಹೇಳಲು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿನೀಯರ್‌ ರಕ್ಷಿತ್‌ ಅವರಿಗೆ ಕರೆ ಮಾಡಿದ್ದರು. ಈ ವೇಳೆ ಇಂಜಿನೀಯರ್‌ ಉಡಾಫೆಯಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಕೆರಳಿದ ಪ್ರಕಾಶ್‌ ರಾವ್‌ ಅಧಿಕಾರಿಗಳ ಸಮ್ಮುಖದಲ್ಲೇ ಕಾಮಗಾರಿ ನಡೆಯಬೇಕು. ಅನುಭವಿ ಪ್ಲಂಬರ್‌ ಕೂಡ ಜೊತೆಗಿರಬೇಕು. ಗೊತ್ತು ಗುರಿಯಿಲ್ಲದೇ ಹೊರಜಿಲ್ಲೆಯ ಕಾರ್ಮಿಕರು ಕಾಮಗಾರಿ ನಡೆಸುವುದರಿಂದ ಆಗುವ ಎಡವಟ್ಟುಗಳಿಗೆ ನೀವೇ ಹೊಣೆ ಎಂದು ತೀವ್ರವಾಗಿ ತರಾಟೆಗೆತ್ತಿಕೊಂಡರು.

ಸಮನ್ವಯತೆಯಿಲ್ಲ
ಪುರಸಭೆ, ಒಳಚರಂಡಿ ಮಂಡಳಿ ನಡುವೆ ಯಾವುದೇ ಸಮನ್ವಯತೆಯಿಲ್ಲ. ಕಾಮಗಾರಿ ಕುರಿತು ಸ್ಪಷ್ಟತೆ ಇಲ್ಲ. ಸೂಕ್ತ ಮುನ್ನೆಚ್ಚರಿಕೆ ವಹಿಸದೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಧೂಳು ರಾಚದಂತೆ ನೀರು ಕೂಡ ಸಿಂಪಡಿಸುತ್ತಿಲ್ಲ. ಇದರಿಂದ ಅದೆಷ್ಟೋ ಮಂದಿಯ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಪ್ರಕಾಶ್‌ ರಾವ್‌ ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳದಲ್ಲಿ ಪುರಸಭಾ ಅ‍ಧ್ಯಕ್ಷ ಯೋಗೀಶ್‌ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್‌, ನಿವೃತ್ತ ಶಿಕ್ಷಕ ವಸಂತ ಎಂ. ಸಾಮಾಜಿಕ ಧುರೀಣ ಪ್ರವೀಣ್‌ ಪುಲ್ಕೇರಿ ಉಪಸ್ಥಿತರಿದ್ದರು.





























































































































error: Content is protected !!
Scroll to Top