ಕರ್ನಾಟಕ ಭೂ ಕಂದಾಯ ಕಾಯಿದೆ 1964 ಎಂಬ ಕಾನೂನು 1964ರಿಂದ ಕರ್ನಾಟಕ ರಾಜ್ಯದಾದ್ಯಂತ ಜಾರಿಯಲ್ಲಿರುತ್ತದೆ. ಭೂಮಿಗೆ ಸಂಬಂಧಪಟ್ಟ ಖಾತೆ, ಸರ್ವೆ, ಕಂದಾಯ ವಸೂಲಿ ಮತ್ತಿತರ ವಿಷಯಗಳನ್ನು ನಿರ್ಧರಿಸಲು ಮತ್ತು ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು ಹೊಂದಿರುವ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಲು ಮತ್ತು ಅಧಿಕಾರವನ್ನು ಆಡಳಿತಾತ್ಮಕ ರೂಪದಲ್ಲಿ ಚಲಾಯಿಸಲು ಈ ಮೇಲ್ಕಾಣಿಸಿದ ಕಾನೂನು ಸಹಾಯಕವಾಗಿರುತ್ತದೆ. ಇದರ ಪ್ರಕಾರ ಈ ಕಾನೂನಿನ ಕಲಂ 24 ಮತ್ತು 25ರ ಪ್ರಕಾರ ಪ್ರತಿಯೊಬ್ಬ ಅಧಿಕಾರಿಯು ತನ್ನ ಕಾರ್ಯವ್ಯಾಪ್ತಿಯೊಳಗಿನ ಅಧಿಕಾರವನ್ನು ನಿಷ್ಠೆಯಿಂದ ಚಲಾಯಿಸಲು ಮತ್ತು ನ್ಯಾಯ ಪರಿಪಾಲನೆಯ ದೃಷ್ಠಿಯಿಂದ ಸೂಕ್ತ ಆದೇಶವನ್ನು ಮಾಡಲು ವಿಶೇಷವಾದ ಅಧಿಕಾರವನ್ನು ಹೊಂದಿರುತ್ತಾರೆ. ಈ ಅಧಿನಿಯಮದ ಕಲಂ 127 ರ ಪ್ರಕಾರ ರಾಜ್ಯದೊಳಗಿನ ಪ್ರತಿಯೊಂದು ಗ್ರಾಮದಲ್ಲಿನ ಕೃಷಿ ಭೂಮಿಗೆ ಸಂಬಂಧಪಟ್ಟಂತೆ ಪಹಣಿ ಪತ್ರ (ರೆಕಾರ್ಡ್ ಆಫ್ ರೈಟ್ಸ್) ಎಂಬ ದಾಖಲೆಯನ್ನು ನಿರ್ವಯಿಸಬೇಕಾಗಿದ್ದು ಇದು ಕಂದಾಯ ದಾಖಲೆಗಳ ಪೈಕಿ ಅತ್ಯಂತ ಪ್ರಮುಖವಾದ ದಾಖಲೆಯಾಗಿದ್ದು ಈ ದಾಖಲೆಯಲ್ಲಿ ಭೂಮಿಯ ಸರ್ವೆ ನಂಬ್ರ, ಸಬ್ ಡಿವಿಜನ್ ನಂಬ್ರ, ಭೂಮಿಯ ಒಟ್ಟು ವಿಸ್ತೀರ್ಣ, ಸರಕಾರ ನಿಗದಿಸಿದ ಭೂ ಕಂದಾಯ, ಭೂ ಮಾಲಿಕ ಮತ್ತು ಸ್ವಾಧೀನಗಾರನ ಹೆಸರು ಮತ್ತು ವಿಳಾಸ ಮಾಲಿಕತ್ವ ಅಥವಾ ಸ್ವಾಧೀನತೆಯ ಸ್ವರೂಪ ಮತ್ತು ರೀತಿ, ಮಣ್ಣಿನ ನಮೂನೆ, ಬೆಳೆಯ ವಿವರ ಇತ್ಯಾದಿಗಳನ್ನು ಕಡ್ಡಾಯವಾಗಿ ನಮೂದಿಸಬೇಕಾಗಿರುತ್ತದೆ. ಮೇಲ್ಕಾಣಿಸಿದ ಕಾನೂನಿನ ಕಲಂ 128ರ ಪ್ರಕಾರ ಯಾವುದೇ ಒಬ್ಬ ತಾನು ಸ್ವಾಧೀನತೆ ಹೊಂದಿರುವ ಭೂಮಿಯ ಮೇಲೆ ಹಕ್ಕನ್ನು ಹೊಂದಿದ ಸಂದರ್ಭದಲ್ಲಿ ಈ ರೀತಿಯಾಗಿ ಹಕ್ಕನ್ನು ಹೊಂದಿದ ದಿನಾಂಕದಿಂದ ಮೂರು ತಿಂಗಳೊಳಗಾಗಿ ಸಂಬಂಧಪಟ್ಟ ಗ್ರಾಮದ ಕಂದಾಯ ಅಧಿಕಾರಿಗೆ ತನ್ನ ಹಕ್ಕಿನ ವಿವರವನ್ನು ಬಾಯ್ದೆರೆಯಾಗಿ ಅಥವಾ ಲಿಖಿತವಾಗಿ ತಿಳಿಸಬೇಕಾಗುತ್ತದೆ. ಆ ನಂತರ ಸಂಬಂಧಪಟ್ಟ ಗ್ರಾಮದ ಕಂದಾಯ ಅಧಿಕಾರಿಯು ಈ ಕುರಿತು ಸೂಕ್ತ ವರದಿಯನ್ನು ಸಂಬಂಧಪಟ್ಟ ತಹಶೀಲ್ದಾರರಿಗೆ ಸಲ್ಲಿಸಬೇಕಾಗುತ್ತದೆ. ಸದ್ರಿ ವರದಿಯಲ್ಲಿ ಹಕ್ಕನ್ನು ಹೊಂದಿದ ವ್ಯಕ್ತಿಯ ಹೆಸರು, ವಿಳಾಸ, ಹಕ್ಕಿನ ಸ್ವರೂಪ ಇತ್ಯಾದಿಯನ್ನು ತಿಳಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಯಾವುದಾದರೂ ವ್ಯಕ್ತಿಯಿಂದ ಅಡ್ಡಿ ಅಥವಾ ಆಕ್ಷೇಪವನ್ನು ಗ್ರಾಮದ ಕಂದಾಯ ಅಧಿಕಾರಿಯು ಪಡೆದಲ್ಲಿ ಅದನ್ನು ಸಹಾ ತನ್ನ ವರದಿಯಲ್ಲಿ ತಿಳಿಸಬೇಕಾಗುತ್ತದೆ. ಈ ರೀತಿಯಾಗಿ ವರದಿಯನ್ನು ಪಡೆದ ತಹಶೀಲ್ದಾರರು ಸಂಬಂಧಪಟ್ಟ ಜಮೀನಿನ ಕಂದಾಯ ಖಾತೆ ಬದಲಾವಣೆ ಕುರಿತು ಸೂಕ್ತ ತನಿಖೆ ನಡೆಸಿ ಆದೇಶ ಮಾಡಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ಯಾರಿಂದಾದರೂ ಯಾವುದೇ ರೀತಿಯ ಆಕ್ಷೇಪಣೆಯನ್ನು ತಹಶೀಲ್ದಾರರು ನೇರವಾಗಿ ಅಥವಾ ತನ್ನ ಅಧೀನದಲ್ಲಿರುವ ಕಂದಾಯ ಅಧಿಕಾರಿಗಳ ಮೂಲಕ ಪಡೆದಲ್ಲಿ ಇಂತಹ ಪ್ರಕರಣವನ್ನು ವಿವಾದಿತ ಪ್ರಕರಣವೆಂದು ಪರಿಗಣಿಸಿ ಉಭಯೇತರರಿಗೆ ನೋಟೀಸು ನೀಡಿ ವಿಚಾರಣೆಯ ನಂತರ ಸೂಕ್ತ ಆದೇಶವನ್ನು ಮಾಡಬಹುದಾಗಿದೆ. ಸದ್ರಿ ಆದೇಶದ ವಿರುದ್ಧ ಸಂಬಂಧಪಟ್ಟ ಉಪವಿಭಾಗಾಧಿಕಾರಿಯವರ ಸಮಕ್ಷಮದಲ್ಲಿ ಪ್ರಶ್ನಿಸುವ ಅವಕಾಶ ಹಾಗೂ ಉಪವಿಭಾಗಾಧಿಕಾರಿಯವರು ಮಾಡುವ ಆದೇಶದ ವಿರುದ್ಧ ಜಿಲ್ಲಾಧಿಕಾರಿಯವರಲ್ಲಿ ಪ್ರಶ್ನಿಸುವ ಅವಕಾಶ ಮೇಲ್ಕಾಣಿಸಿದ ಕಾನೂನಿನಲ್ಲಿ ಇರುತ್ತದೆ. ಯಾವುದೇ ಒಬ್ಬ ವ್ಯಕ್ತಿ ಒಂದು ನೋಂದಾಯಿತ ದಸ್ತಾವೇಜಿನ ಮೂಲಕ ಹಕ್ಕನ್ನು ಹೊಂದಿದ ಸಂದರ್ಭದಲ್ಲಿ ಅದನ್ನು ಕಂದಾಯ ಅಧಿಕಾರಿಗಳು ತಾವೇ ಸ್ವತಹ ಸಂಬಂಧಪಟ್ಟ ವ್ಯಕ್ತಿಯ ಹೆಸರಿನಲ್ಲಿ ಖಾತಾ ತಬ್ದೀಲಿ ಮಾಡುವ ಜವಬ್ದಾರಿಯನ್ನು ಹೊಂದಿರುತ್ತಾರೆ. ಈ ಸಂದರ್ಭದಲ್ಲಿ ಸಂಬಂಧಪಟ್ಟ ವ್ಯಕ್ತಿಯು ತನ್ನ ಹಕ್ಕನ್ನು ಕಂದಾಯ ಅಧಿಕಾರಿಗಳಿಗೆ ತಿಳಿಸಲೇಬೇಕೆನ್ನುವ ಕಡ್ಡಾಯವಾದ ನಿಯಮವಿರುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿ ತಾನು ಮರಣ ಶಾಸನ ಅಂದರೆ ವೀಲುನಾಮೆ ಮೂಲಕ ಒಂದು ಭೂಮಿ ಅಥವಾ ಸ್ಥಿರಾಸ್ತಿಯ ಮೇಲೆ ಹಕ್ಕು ಹೊಂದಿದ ಸಂದರ್ಭದಲ್ಲಿ ಆತ ತನ್ನ ಹೆಸರಿನಲ್ಲಿರುವ ವೀಲನ್ನು ಸಂಬಂಧಪಟ್ಟ ವ್ಯಾಪ್ತಿಯ ಸಿವಿಲ್ ನ್ಯಾಯಲಯದಲ್ಲಿ ಹಾಜರುಪಡಿಸಿ ವೀಲುನಾಮೆಯ ಮೂಲಕ ತಾನು ಹೊಂದಿರುವ ಹಕ್ಕಿನ ಕುರಿತು ಸೂಕ್ತ ಆದೇಶವನ್ನು ಪಡಕೊಂಡು ಅನಂತರ ಅದನ್ನು ಕಂದಾಯ ಅಧಿಕಾರಿಗಳಿಗೆ ಖಾತಾ ತಬ್ದೀಲಿಯಾಗಿ ಹಾಜರುಪಡಿಸಬೇಕಾಗಿರುತ್ತದೆ. ಕಾರಣ ಮರಣ ಶಾಸನ ಅಥವಾ ವೀಲುನಾಮೆಯ ನೈಜತ್ವದ ಅಥವಾ ಸಿಂಧುತ್ವದ ಕುರಿತು ತನಿಖೆ ಮಾಡುವ ಅಥವಾ ನಿರ್ಧರಿಸುವ ಅಧಿಕಾರವನ್ನು ಯಾವುದೇ ಕಂದಾಯ ಅಧಿಕಾರಿ ಹೊಂದಿರುವುದಿಲ್ಲ. ಇದು ಸಿವಿಲ್ ನ್ಯಾಯಾಲಯದ ವ್ಯಾಪ್ತಿಯೊಳಪಟ್ಟಿರುತ್ತದೆ. ಅದೇ ರೀತಿಯಾಗಿ ಯಾವುದೇ ಒಂದು ಭೂಮಿಯ ಕುರಿತಂತೆ ವಾರೀಸುತನದ ಮಾಲಿಕತ್ವದ ಕುರಿತು ಪಕ್ಷಕಾರರೊಳಗೆ ವಿವಾದವು ಉಂಟಾದಾಗ ಅಥವಾ ಮಾಲಿಕತ್ವದ ವಿಚಾರದಲ್ಲಿ ಯಾವುದೇ ವಿವಾದವು ಸಿವಿಲ್ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿಯಿರುವ ಸಂದರ್ಭದಲ್ಲಿ ಕಂದಾಯ ಅಧಿಕಾರಿಯು ಸಿವಿಲ್ ನ್ಯಾಯಾಲಯದ ತೀರ್ಮಾನದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ.






















