ಟವರ್ ನಿರ್ಮಾಣ ಸ್ಥಗಿತಗೊಳಿಸಿ ವೈಜ್ಞಾನಿಕವಾಗಿ ಯೋಜನೆ ರೂಪಿಸುವಂತೆ ಒತ್ತಾಯ
ಬೆಳಗಾವಿ : ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ನಂದಿಕೂರು ವಿದ್ಯುತ್ ಲೈನ್ ಯೋಜನೆ ಕುರಿತು ಪ್ರಸ್ತಾವಿಸಿದರು. ಕೇರಳಕ್ಕೆ ನಂದಿಕೂರಿನಿಂದ ಅವೈಜ್ಞಾನಿಕವಾಗಿ ವಿದ್ಯುತ್ ಲೈನ್ ಎಳೆಯಲಾಗುತ್ತಿದೆ. ಇದರಿಂದ ಇನ್ನಾ ಗ್ರಾಮಸ್ಥರಿಗೆ ದೊಡ್ಡ ಪ್ರಮಾಣದಲ್ಲಿ ತೊಂದರೆಯಾಗುತ್ತಿದೆ. ಕೂಡಲೇ ಟವರ್ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿ ವೈಜ್ಞಾನಿಕವಾಗಿ ನೆಲದಡಿಯಲ್ಲಿ ವಿದ್ಯುತ್ ಲೈನ್ ಕಾಮಗಾರಿ ನಡೆಸಬೇಕೆಂದು ಡಿ. 12ರಂದು ಅಧಿವೇಶನದಲ್ಲಿ ಮಂಜುನಾಥ ಭಂಡಾರಿ ಅವರು ಇಂಧನ ಸಚಿವರನ್ನು ಒತ್ತಾಯಿಸಿದರು.
ಇನ್ನಾ ಗ್ರಾಮದಲ್ಲಿ ಟವರ್ ನಿರ್ಮಾಣವನ್ನು ವಿರೋಧಿಸಿ ಗ್ರಾಮಸ್ಥರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ವಿದ್ಯುತ್ ತಂತಿ ಹಾದು ಹೋದಲ್ಲಿ ಕೃಷಿ ಭೂಮಿಗೆ ತೊಂದರೆಯಾಗಲಿದೆ. ವೈಜ್ಞಾನಿಕವಾಗಿ, ಆಧುನಿಕ ತಂತ್ರಜ್ಞಾನದೊಂದಿಗೆ ಯೋಜನೆ ರೂಪಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ ಎಂದು ಮಂಜುನಾಥ ಭಂಡಾರಿ ಅವರು ಸದನದ ಗಮನ ಸೆಳೆದರು.






















