ವಕ್ಫ್ ಕಾಯಿದೆ 1995

ಸಾಂಸ್ಕೃತಿಕ ಮತ್ತು ಐತಿಹಾಸಿಕ ತಾಣಗಳ ಸಂರಕ್ಷಣೆಗೆ ಕೊಡುಗೆ ನೀಡುವಾಗ ಇಸ್ಲಾಮಿಕ್ ಕಾನೂನಿಗೆ ಅನುಸಾರವಾಗಿ ಸಾಮಾಜಿಕ ಸೇವೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿರುವ ವಕ್ಫ್ ಕಾಯಿದೆ 1995ನ್ನು ಕೇಂದ್ರ ಸರಕಾರವು ದೇಶದಾದ್ಯಂತ ಜಾರಿಗೆ ತಂದಿದ್ದು 2013ರರಲ್ಲಿನ ತಿದ್ದುಪಡಿಯೊಂದಿಗೆ ಅದು ಚಾಲ್ತಿಯಲ್ಲಿರುತ್ತದೆ. ವಕ್ಫ್ ಎಂಬ ಮೂಲ ಪದವು ಅರೇಬಿಕ್ ಭಾಷೆಯದ್ದಾಗಿದ್ದು ವಕ್ಫ್ ಅನ್ನು ಬಹುವಚನದಲ್ಲಿ ಔಕಾಫ್ ಎಂಬುದಾಗಿ ನ್ಯಾಯ ಶಾಸ್ತ್ರದಲ್ಲಿ ಉಚ್ಛರಿಸಲಾಗುತ್ತದೆ. ಇದು ವಿಶಿಷ್ಟವಾಗಿ ಆಸ್ತಿಗಳನ್ನು ಮರುಪಡೆಯುವ ಉದ್ದೇಶವಿಲ್ಲದೆ ಮುಸ್ಲಿಂ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಕಟ್ಟಡ, ಜಮೀನು ಅಥವಾ ಇತರ ಸೊತ್ತುಗಳನ್ನು ದಾನ ಮಾಡುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಈ ರೀತಿಯಾಗಿ ದಾನ ಮಾಡುವ ದಾನಿಗಳನ್ನು ವಕಿಫ್ ಎಂದು ಕರೆಯಲಾಗುತ್ತದೆ. ದಾನವಾಗಿ ಪಡೆಯುವ ಆಸ್ತಿ ಅಥವಾ ಸ್ವತ್ತನ್ನು ಇಸ್ಲಾಮಿಕ್ ಕಾನೂನಿಗೆ ಅನುಸಾರವಾಗಿ ವಕ್ಫ್ ಆಗಿ ದಾನ ಮಾಡಿದ ನಂತರ ಅದನ್ನು ಮಾರಾಟ ಮಾಡಲು, ವರ್ಗಾಯಿಸಲು ಅಥವಾ ಉಡುಗೊರೆಯಾಗಿ ನೀಡಲು ಅವಕಾಶ ಇರುವುದಿಲ್ಲ.

ವಕ್ಫ್ ಕಾಯಿದೆ 1995ರ ಪ್ರಕಾರ ಕೇಂದ್ರ ಸರಕಾರವು ಅಧಿಕೃತ ಗಜೆಟ್‌ನಲ್ಲಿ ಅಧಿಸೂಚನೆಯ ಮೂಲಕ ಕೇಂದ್ರ ಸರಕಾರ, ರಾಜ್ಯ ಸರಕಾರಗಳಿಗೆ ವಕ್ಫ್ ಕಾಯಿದೆಯ ಪ್ರಕಾರ ರಚಿಸಲ್ಪಡುವ ವಿವಿಧ ಮಂಡಳಿಗಳ ಕಾರ್ಯನಿರ್ವಹಣೆ ಮತ್ತು ಸರಿಯಾದ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸಲಹೆ ನೀಡುವ ಉದ್ದೇಶಕ್ಕಾಗಿ ಕೇಂದ್ರ ವಕ್ಫ್ ಕೌನ್ಸಿಲ್ ಎಂಬ ಕೌನ್ಸಿಲ್‌ನ್ನು ಸ್ಥಾಪಿಸಬೇಕಾಗಿರುತ್ತದೆ. ಕೇಂದ್ರ ಸರಕಾರದ ಕೇಂದ್ರ ವಕ್ಫ್ ಕೌನ್ಸಿಲ್‌ನಲ್ಲಿ ವಕ್ಫ್ ಉಸ್ತುವಾರಿ ಕೇಂದ್ರ ಸಚಿವರು ಅಧ್ಯಕ್ಷರಾಗಿ ಹಾಗೂ ಕೇಂದ್ರ ಸರಕಾರವು ನೇಮಿಸುವ ಮುಸ್ಲಿಂ ಜನಾಂಗದ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ.

ಈ ಕಾನೂನಿನ ಪ್ರಕಾರ ಪ್ರತಿಯೊಂದು ರಾಜ್ಯ ಸರಕಾರಗಳು ತಮ್ಮ ತಮ್ಮ ಅಧಿಕೃತ ಗಜೆಟ್ ಅಧಿಸೂಚನೆ ಮೂಲಕ ವಕ್ಫ್ ಮಂಡಳಿಯನ್ನು ಸ್ಥಾಪಿಸಬೇಕಾಗಿರುತ್ತದೆ. ವಕ್ಫ್ ಮಂಡಳಿಯ ಸದಸ್ಯರುಗಳ ಅಧಿಕಾರದ ಅವಧಿಯು 5 ವರ್ಷಗಳ ವರೆಗಿನದ್ದಾಗಿರುತ್ತದೆ. ಆದರೆ ಯಾವುದೇ ಸಕಾರಣಕ್ಕಾಗಿ ರಾಜ್ಯ ಸರಕಾರವು ಮಂಡಳಿಯ ಅಧ್ಯಕ್ಷರನ್ನು ಅಥವಾ ಅದರ ಯಾವುದೇ ಸದಸ್ಯರನ್ನು ಯಾವುದೇ ಸಂದರ್ಭದಲ್ಲಿ ಅನರ್ಹಗೊಳಿಸಿ ತೆಗೆದು ಹಾಕುವ ಅಧಿಕಾರವನ್ನು ಹೊಂದಿರುತ್ತದೆ. ಮಂಡಳಿಯ ಸದಸ್ಯರ ಪದಚ್ಯುತಿ, ರಾಜಿನಾಮೆ, ಮರಣ ಅಥವಾ ಇತರ ಯಾವುದೇ ಕಾರಣದಿಂದ ತೆರವಾದಾಗ ಅವರ ಸ್ಥಾನಕ್ಕೆ ಹೊಸ ಸದಸ್ಯರನ್ನು ನೇಮಿಸಬಹುದಾಗಿದೆ. ವಕ್ಫ್ ಮಂಡಳಿಗೆ ರಾಜ್ಯ ಸರಕಾರವು ಮುಸ್ಲಿಂ ಜನಾಂಗಕ್ಕೆ ಸೇರಿದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯೊಬ್ಬರನ್ನು ಮಂಡಳಿಯ ಪೂರ್ಣಾವಧಿಯ ತನಕ ಅಧಿಕೃತ ಗೆಜೆಟ್ ಅಧಿಸೂಚನೆಯ ಮೂಲಕ ನೇಮಿಸಬೇಕಾಗುತ್ತದೆ. ಅದೇ ರೀತಿಯಾಗಿ ಸರಕಾರವು ಮಂಡಳಿಯ ಕಾರ್ಯ ನಿರ್ವಹಣೆಗಾಗಿ ಇತರ ಅಧಿಕಾರಿಗಳನ್ನು ಮತ್ತು ಇತರ ನೌಕರರನ್ನು ಸೇವಾ ಷರತ್ತುಗಳ ನಿಯಮಾವಳಿಗೆ ಅನುಸಾರವಾಗಿ ನೇಮಿಸಬಹುದಾಗಿದೆ. ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯು ಮೇಲ್ಕಾಣಿಸಿದ ಕಾನೂನಿನ ನಿಬಂಧನೆ ಮತ್ತು ನಿಯಮಗಳ ಅನುಸಾರವಾಗಿ ಮತ್ತು ಮಂಡಳಿಯ ನಿರ್ದೇಶನಗಳಿಗೆ ಒಳಪಟ್ಟು ಔಕಾಫ್ ಮತ್ತು ವಕ್ಫ್ ಆಸ್ತಿಗಳ ಸ್ವರೂಪ ಮತ್ತು ವ್ಯಾಪ್ತಿಯನ್ನು ತನಿಖೆ ಮಾಡುವ, ವಕ್ಫ್ ಆಸ್ತಿಗಳ ಪಟ್ಟಿ ಮತ್ತು ಖಾತೆಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ತಪಾಸಣೆ ಮಾಡುವ ಮತ್ತು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನಗಳನ್ನು ನೀಡುವ ಮತ್ತಿತರ ಅಧಿಕಾರಗಳನ್ನು ಹೊಂದಿರುತ್ತಾರೆ.















































error: Content is protected !!
Scroll to Top