ಕಾರ್ಕಳ : ಎಂಪಿಎಂ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಸುರೇಶ್ ರೈ ಅವರು ನ. 6ರಂದು ಅಧಿಕಾರ ಸ್ವೀಕರಿಸಿದರು. ಅವರು ತೇಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ 32 ವರ್ಷ ಕಾರ್ಯ ನಿರ್ವಹಿಸಿದ್ದರು. ಎಂಪಿಎಂ ಕಾಲೇಜಿನಲ್ಲಿ ಈ ಮೊದಲು ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ಕಿರಣ್ ಅವರು ಹಳೆಯಂಗಡಿ ಪದವಿ ಕಾಲೇಜಿಗೆ ವರ್ಗಾವಣೆಗೊಂಡಿದ್ದರಿಂದ ಅವರಿಂದ ತೆರವಾದ ಸ್ಥಾನಕ್ಕೆ ಡಾ. ಸುರೇಶ್ ರೈ ನೇಮಕಗೊಂಡಿದ್ದಾರೆ.
ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸ್ವಾಗತ
ಎಂಪಿಎಂ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಜೇಶ್ ಆಚಾರ್ಯ ಹೂ ಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈ ಅವರು ಈ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದವರು ಎಲ್ಲಾ ರೀತಿಯ ಕಾರ್ಯ ಚಟುವಟಿಕೆಯಲ್ಲಿ ಕಾಲೇಜಿನ ಒಂದು ಭಾಗವಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ. ಮುಂದೆಯೂ ಸಹ ಇದೇ ರೀತಿ ಕಾಲೇಜಿನ ಕಾರ್ಯದಲ್ಲಿ ತೋಡಗಿಕೊಳ್ಳಿ ಎಂದು ಹೇಳಿದರು. ಈ ಸಂದರ್ಭ ಸಂಘದ ಜೊತೆ ಕಾರ್ಯದರ್ಶಿ ಅಕ್ಷತಾ ರಾವ್, ಮಂಜೇಶ್ ಶೆಟ್ಟಿ ಸಾಣೂರು ಉಪಸ್ಥಿತರಿದ್ದರು.




















