ಹೆಬ್ರಿ : ಹೆಬ್ರಿ ತಾಲೂಕಿನ ನಾಡ್ಪಾಲು, ಚಾರ ಪರಿಸರದ ಎಲ್ಲೆಡೆಗಳಲ್ಲಿ ಕಾಡಾನೆ ದಾಳಿಯು ನಿರಂತರವಾಗಿದ್ದು, ರೈತರು ಬೆಳೆದ ಕೃಷಿಯನ್ನೆಲ್ಲಾ ನಾಶ ಮಾಡುತ್ತಿದೆ. ಶುಕ್ರವಾರ ರಾತ್ರಿ ಚಾರ ಪರಿಸರದಲ್ಲಿ ಆನೆ ದಾಳಿ ಮಾಡಿದ್ದು, ತೋಟಗಳಿಗೆ ಹಾನಿ ಮಾಡಿದೆ. ನಿರಂತರವಾದ ಆನೆ ದಾಳಿ ಜನರಲ್ಲಿ ಆತಂಕ ಹೆಚ್ಚಿಸಿದೆ.
ನಾಡ್ಪಾಲು ಪರಿಸರದಲ್ಲಿ ಬೀಡುಬಿಟ್ಟಿರುವ ಕಾಡಾನೆಯನ್ನು ಕಾಡಿಗೆ ಅಟ್ಟುವ ಬಗ್ಗೆ ನೆಲ್ಲಿಕಟ್ಟೆಯ ಕೋಟೆಬೆಟ್ಟು ಎಂಬಲ್ಲಿ ಪ್ರಗತಿಪರ ನಾಗರಿಕ ಸೇವಾ ಸಮಿತಿ, ಕಿಸಾನ್ ಸಂಘ, ರೈತ ಸಂಘ ಮತ್ತು ನಾಡ್ಪಾಲು ಗ್ರಾಮಸ್ಥರಿಂದ ಜೂ. 19ರಂದು ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಸಮಸ್ಯೆ ಪರಿಹರಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿದ್ದರು. ಇದಲ್ಲದೆ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲೂ ಕಾಡಾನೆ ಹಾವಳಿ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಆದರೆ ಅಧಿಕಾರಿಗಳು ಯಾವುದೇ ರೀತಿಯಾದ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮುತ್ತಿಗೆಯ ಎಚ್ಚರಿಕೆ
ಹೆಬ್ರಿ ಹಾಗೂ ನಾಡ್ಪಾಲು ಗ್ರಾಮದಲ್ಲಿ ದಿನನಿತ್ಯ ಆನೆ ಕಾಣಿಸುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ಚಾರ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರಾದ ಎಚ್. ಬಿ ಸುರೇಶ್, ಎಚ್. ಜನಾರ್ದನ್ ಶನಿವಾರ ಆನೆ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

























