ಉಡುಪಿ : ಬ್ಯಾಂಕ್ ವ್ಯವಹಾರ ಕುರಿತಂತೆ ಬ್ಯಾಂಕ್ ಮ್ಯಾನೆಜರ್‌ಗಳು ಹಾಗೂ ಸಿಬ್ಬಂದಿ ಜನಸಾಮಾನ್ಯರೊಂದಿಗೆ ಪ್ರಾದೇಶಿಕ ಭಾಷೆಯಲ್ಲಿ ವ್ಯವಹರಿಸಬೇಕು. ಇದರಿಂದ ಬ್ಯಾಂಕ್ ವ್ಯವಹಾರ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅಭಿಪ್ರಾಯಪಟ್ಟರು.
ಅವರು ಸೆ. 25ರಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಕೃತ ಬ್ಯಾಂಕ್ ಹೆಸರು ಹಾಗೂ ಸ್ಥಳವನ್ನು ಬ್ಯಾಂಕ್ ಬೋರ್ಡುಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಅಳವಡಿಸಬೇಕು. ಗ್ರಾಹಕರೊಂದಿಗೆ ಸಂವಹನ ಮಾಡಲು ಅನುಕೂಲವಾಗುವಂತೆ ಸ್ಥಳೀಯ ವ್ಯಕ್ತಿಗಳನ್ನು ನೇಮಿಸಬೇಕೆಂದು ಸಿಇಒ ತಿಳಿಸಿದರು.

ಯೋಜನೆ ಫಲಾನುಭವಿಗಳನ್ನಾಗಿಸಿ
ಸಾರ್ವಜನಿಕರ ಜೀವನಮಟ್ಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಈ ಕುರಿತು ಬ್ಯಾಂಕ್ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜನಸಾಮಾನ್ಯರಿಗೆ ವ್ಯವಹಾರ ಚಟುವಟಿಕೆಗಳ ಕುರಿತು ಅರಿವು ಮೂಡಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಜನರನ್ನು ಯೋಜನೆಯ ಫಲಾನುಭವಿಗಳನ್ನಾಗಿಸಲು ಕ್ರಮ ವಹಿಸಬೇಕೆಂದು ಸಿಇಒ ಅವರು ಸೂಚಿಸಿದರು.
58,352 ಕೋಟಿ ರೂ. ವ್ಯವಹಾರ
ಜಿಲ್ಲೆಯ ಬ್ಯಾಂಕ್ಗಳಲ್ಲಿ ಕಳೆದ ಸಾಲಿನಲ್ಲಿ 52, 676 ಕೋಟಿ ರೂ. ವ್ಯವಹಾರ ನಡೆದಿದ್ದು, ಪ್ರಸಕ್ತ ಸಾಲಿನಲ್ಲಿ 58,352 ಕೋಟಿ ರೂ. ವ್ಯವಹಾರ ನಡೆದಿದೆ. 5,676 ಕೋಟಿ ರೂ. ಹೆಚ್ಚಾಗಿ ಶೇ.10.78 ರಷ್ಟು ಬೆಳೆವಣಿಗೆಯಾಗಿದೆ. ಜಿಲ್ಲೆಯಲ್ಲಿ ಆದ್ಯತಾ ವಲಯಗಳಿಗೆ 2703.09 ಕೋಟಿ ರೂ., ಸಾಲ ವಿತರಣೆ ಮಾಡಿ ಶೇ. 30.74 ಹಾಗೂ ಆದ್ಯತೇತರ ವಲಯಗಳಿಗೆ 1677.82 ಕೋಟಿ ರೂ. ಸಾಲ ವಿತರಣೆ ಮಾಡಿ, ಶೇ. 43.65 ರಷ್ಟು ಸಾಧನೆ ಮಾಡಲಾಗಿದೆ ಎಂದರು.
ಕೆನರಾ ಬ್ಯಾಂಕ್‌ನ ರೀಜನಲ್ ಮ್ಯಾನೆಜರ್ ಶೀಬ ಸಹಜನ್ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಬ್ಯಾಂಕಿಂಗ್ ಠೇವಣಿ ಅನುಪಾತವು ಶೇ. 46.94 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ. 46.92 ರಷ್ಟು ಕಡಿಮೆಯಾಗಿ 0.02 ರಷ್ಟು ಹಿನ್ನಡೆಯಾಗಿದೆ. ಸಿ.ಡಿ ಅನುಪಾತದಲ್ಲಿ ಜಿಲ್ಲೆಯು ಶೇ. 50 ಕ್ಕಿಂತ ಕಡಿಮೆ ಇರುವುದು ಅತ್ಯಂತ ಕಳವಳಕಾರಿಯಾದ ವಿಷಯವಾಗಿದ್ದು, ಇದನ್ನು ಹೆಚ್ಚಿಸಲು ಮುಂದಿನ ದಿನಗಳಲ್ಲಿ ಎಲ್ಲಾ ಬ್ಯಾಂಕ್ ನವರು ಕಾರ್ಯಪ್ರವೃತ್ತರಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ., ಆರ್.ಬಿ.ಐ ಎಕ್ಸಿಕ್ಯೂಟಿವ್ ಇಳಾ ಸಾಹು, ನಬಾರ್ಡ್‌ನ ಡಿ.ಡಿ.ಎಂ. ಸಂಗೀತಾ ಕಾರ್ಥಾ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಾಜೇಶ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

























