ಅಕ್ರಮವಾಗಿ ಮರಳು ಸಾಗಾಟ – ಬೆಂಗಾವಲು ಕಾರು ಚಾಲಕ ಪರಾರಿ

ಕಾರ್ಕಳ : ಮರಳು ಸಾಗಾಟದ ಲಾರಿಗೆ ಬೆಂಗಾವಲಾಗಿ ಸಾಗುತ್ತಿದ್ದ ಕಾರನ್ನು ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದಾಗ ಚಾಲಕ ಕಾರಿನೊಂದಿಗೆ ಪರಾರಿಯಾದ ಘಟನೆ ಸಾಣೂರು ಗ್ರಾಮದ ಮುರತ್ತಂಗಡಿಯಲ್ಲಿ ನಡೆದಿದೆ. ಮೊಹಮ್ಮದ್ ಶಂಶೀರ್ ಎಂಬಾತ ಮಂಗಳೂರಿನ ಕಣ್ಣೂರು ಹೊಳೆಯಿಂದ ಲತೀಫ್‌ ಕಳವು ಮಾಡಿ ನೀಡಿದ ಮರಳನ್ನು (KA-19-AE-0844) ಟಿಪ್ಪರ್‌ ಲಾರಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸೆ. 24ರಂದು ಕಾರ್ಕಳ ತಾಲೂಕು ಸಾಣೂರು ಗ್ರಾಮದ ಮುರತಂಗಡಿ ಎಂಬಲ್ಲಿ ಸಾಗಾಟ ಮಾಡುತ್ತಿದ್ದು, ಲಾರಿಗೆ ಬೆಂಗಾವಲಾಗಿದ್ದ (KA-19-MH-5338) ಕಾರನ್ನು ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದ್ದರು. ಈ ವೇಳೆ ಕಾರು ಚಾಲಕ ಬಂಗ್ಲೆಗುಡ್ಡೆ ಆಸೀಫ್‌ ಮತ್ತು ಕಾರಿನಲ್ಲಿದ್ದ ಪುಲ್ಕೇರಿಯ ರಾಜೇಶ್‌ ಕಾರು ಸಮೇತ ಪರಾರಿಯಾಗಿರುತ್ತಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವ ಬೆದರಿಕೆ – ದೂರು ದಾಖಲು

ಹೆಬ್ರಿ : ಶಿವಪುರ ಗ್ರಾಮದ ಗದ್ದುಗೆ ಅಮ್ಮನವರ ದೇವಸ್ಥಾನದ ಬಳಿ ಶ್ರಮದಾನ ಮಾಡುತ್ತಿರುವಾಗ ಗೋಪಾಲ ಮತ್ತು ವಸಂತಿ ಎಂಬವರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯೊಡ್ಡಿರುವುದಾಗಿ ಶಿವಪುರದ ಸುಧಾಕರ (51) ಅವರು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮೊದಲು ವಸಂತಿ ಅವರು ಮಂಜುನಾಥ, ರಾಘವೇಂದ್ರ, ವಸಂತ, ಸುಧಾಕರ, ಅಮ್ಮಣ್ಣಿ, ಗುಲಾಬಿ ಅವರ ವಿರುದ್ದ ಹಲ್ಲೆ, ಬೆದರಿಕೆಯ ದೂರು ದಾಖಲಿಸಿದ್ದು, ಇದೀಗ ಸುಧಾಕರ ಅವರು ಪ್ರತಿ ದೂರು ದಾಖಲಿಸಿದ್ದಾರೆ.

















































error: Content is protected !!
Scroll to Top