ಕಾರ್ಕಳ : ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಮಂಗಳೂರು ವಿವಿ ಘಟಕ 2024ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿಗೆ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್ ಭಾಜನರಾಗಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ ಜಿಲ್ಲೆಗಳ ಸಾಧಕ ಪ್ರಾಧ್ಯಾಪಕರ ಶೈಕ್ಷಣಿಕ ಸಾಧನೆ ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು ಈ ಬಾರಿ ಒಟ್ಟು 9 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆ. 15ರಂದು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆಯುವ ಪ್ರೇರಣಾ ದಿವಸ್ 2024 ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (NAAC- National Assessment and Accreditation Council) ಅಧ್ಯಕ್ಷ ಪ್ರೊ. ಅನಿಲ್ ಸಹಸ್ರಬುದ್ಧೆ ಪ್ರಶಸ್ತಿ ಪ್ರದಾನ ಮಾಡಲಿರುವರು.
ಕೋಟ್ಯಾನ್ ಕುರಿತು
ಕಾರ್ಕಳದ ನಿವಾಸಿಯಾಗಿರುವ ಕೋಟ್ಯಾನ್ ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿ ಬಳಿಕ ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. 1991ರಲ್ಲಿ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು 2003ರಲ್ಲಿ ಮಂಗಳೂರು ವಿವಿಯಿಂದ ಪಿಎಚ್ಡಿ ಪದವಿ ಪಡೆದಿರುತ್ತಾರೆ. 10 ವರ್ಷಗಳ ಕಾಲ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರುವ ಕೋಟ್ಯಾನ್ ಅವರು 2016ರಿಂದ ಪ್ರಾಂಶುಪಾಲರಾಗಿರುತ್ತಾರೆ.
ಕೋಟ್ಯಾನ್ ಕಾಳಜಿ
ಶ್ರೀ ಭುವನೇಂದ್ರ ಕಾಲೇಜಿಗೆ ಸೇರಿದ ಯಾವೊಬ್ಬ ವಿದ್ಯಾರ್ಥಿಯೂ ಆರ್ಥಿಕ ಕಾರಣಕ್ಕಾಗಿ ಶಿಕ್ಷಣವನ್ನು ಮೊಟಕುಗೊಳಿಸದಂತೆ ನೋಡಿಕೊಂಡ ಹೆಗ್ಗಳಿಕೆ ಡಾ. ಮಂಜುನಾಥ್ ಕೋಟ್ಯಾನ್ ಅವರದ್ದು. ಕಡುಬಡತನದಲ್ಲೇ ಕಲಿತಿರುವ ಕೋಟ್ಯಾನ್ ಅವರು ಬಡತನದಿಂದಾಗಿ ತಮ್ಮ ಕಾಲೇಜಿನ ವಿದ್ಯಾರ್ಥಿಯ ಕಲಿಕೆಗೆ ತೊಂದರೆಯಾಗದಂತೆ ಆಸ್ಥೆ ವಹಿಸಿರುವುದು ಉಲ್ಲೇಖನೀಯ.































































