ನಮ್ಮ ದೇಶದ ಸಂವಿಧಾನದ ಪ್ರಕಾರ ಮಹಿಳೆಯರು ಹೊಂದಿರತಕ್ಕಂತಹ ವಿವಿಧ ಸಂವಿಧಾನಿಕ ಹಕ್ಕನ್ನು ರಕ್ಷಿಸುವ ಸಲುವಾಗಿ 13-09-2005ರಂದು ಕೇಂದ್ರ ಸರಕಾರವು “ಮಹಿಳೆಯರ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005” (Protection of Women from Domestic Violence Act, 2005) ಎಂಬ ವಿಶೇಷ ಕಾನೂನನ್ನು ಜಾರಿಗೆ ತಂದಿರುತ್ತದೆ. ಮಾತ್ರವಲ್ಲದೆ ಇತ್ತೀಚೆಗೆ ಭಾರತೀಯ ನ್ಯಾಯ ಸಂಹಿತೆ 2023 ಎಂಬ ಹೊಸ ಅಧಿನಿಯಮವನ್ನು 01-07-2024 ರಿಂದ ದೇಶದಾದ್ಯಂತ ಜಾರಿಗೆ ತರುವ ಸಂದರ್ಭದಲ್ಲಿ ಸಹಾ ಕೇಂದ್ರ ಸರಕಾರವು ವಿವಾಹಿತ ಮಹಿಳೆಯರ ವಿರುದ್ಧ ಯಾವುದೇ ದೌರ್ಜನ್ಯ ಮತ್ತು ಅಪರಾಧವನ್ನು ತಡೆಗಟ್ಟುವ ಉದ್ದೇಶದಿಂದ ವಿವಾಹಕ್ಕೆ ಸಂಬಂಧಿಸಿದಂತೆ ಹಾಗೂ ವಿವಾಹಿತ ಮಹಿಳೆಯರ ವಿರುದ್ಧದ ಅಪರಾಧಿಕ ಬಲಪ್ರಯೋಗ ಮತ್ತು ಹಲ್ಲೆಯು ಒಂದು ವರ್ಷಕ್ಕಿಂತ ಕಡಿಮೆಯಿಲ್ಲದ ಆದರೆ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುವ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಮಹಿಳೆಯ ವಿರುದ್ಧ ಲೈಂಗಿಕ ಕಿರುಕುಳ ಅಂದರೆ ಆಕೆಗೆ ಇಷ್ಟವಾಗದ ದೈಹಿಕ ಸಂಪರ್ಕ ಮತ್ತು ಸನ್ನೆಗಳನ್ನು ಮಾಡುವ, ಲೈಂಗಿಕ ಸಮ್ಮತಿಗಾಗಿ ಒತ್ತಾಯಿಸುವ, ಆತಳ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲ ಚಿತ್ರಗಳನ್ನು ತೋರಿಸುವ, ಲೈಂಗಿಕ ಅರ್ಥಛಾಯೆ ಬರುವಂತಹ ಮಾತುಗಳನ್ನಾಡುವ ಯಾವುದೇ ಪುರುಷನು ಒಂದು ವರ್ಷದಿಂದ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಯಾವುದೇ ಮಹಿಳೆಯನ್ನು ವಿವಸ್ತ್ರಗೊಳಿಸುವ ಉದ್ದೇಶದಿಂದ ಆಕೆಯ ಮೇಲೆ ಹಲ್ಲೆ ಮಾಡುವ ಅಥವಾ ಅಪರಾಧಿಕ ಬಲ ಪ್ರಯೋಗಿಸುವ ವ್ಯಕ್ತಿಯು ಮೂರು ವರ್ಷಗಳಿಗಿಂತ ಕಡಿಮೆಯಿಲ್ಲದ ಆದರೆ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅದೇ ರೀತಿಯಾಗಿ ಮಹಿಳೆಯ ವಿರುದ್ಧದ ವಿವಿಧ ಅಪರಾಧಗಳು ಅಂದರೆ ಮಹಿಳೆಯು ತನಗೆ ಇಷ್ಟವಾಗುವುದಿಲ್ಲ ಎಂಬ ಸ್ಪಷ್ಟ ಇಂಗಿತದ ಸುಳಿವು ನೀಡಿದಾಗಿಯೂ ಆಕೆಯನ್ನು ಹಿಂಬಾಲಿಸುವುದು, ಮಹಿಳೆಯ ಮಾನಕ್ಕೆ ಕುಂದು ಉಂಟುಮಾಡುವ ಉದ್ದೇಶದಿಂದ ಆಕೆಯ ವಿರುದ್ಧ ಅಸಹ್ಯ ಪದ ಬಳಕೆ ಅಥವಾ ಸನ್ನೆಯ ಕೃತ್ಯವನ್ನು ನಡೆಸುವುದು, ವರದಕ್ಷಿಣೆಯ ಕಿರುಕುಳದಿಂದ ಆಕೆಯ ಮರಣಕ್ಕೆ ಕಾರಣವಾಗುವುದು. ಯಾವುದೇ ಪುರುಷನು ಒಬ್ಬ ಮಹಿಳೆಗೆ ತಾನು ಆತಳನ್ನು ವಿವಾಹವಾಗಿರುವುದಾಗಿ ನಂಬಿಸಿ ಮೋಸ ಮಾಡಿ ಆತನೊಂದಿಗೆ ವಾಸಿಸುವಂತೆ ಮಾಡುವುದು, ಗಂಡನು ಅಥವಾ ಹೆಂಡತಿಯು ಜೀವಂತ ಇರುವಾಗಲೇ ಅವರಿಬ್ಬರ ಪೈಕಿ ಯಾರಾದರೊಬ್ಬರು ಬೇರೆ ವ್ಯಕ್ತಿಯೊಂದಿಗೆ ಮರುಮದುವೆಯಾಗುವುದು, ಕಾನೂನುಬದ್ಧವಾಗಿ ವಿವಾಹ ನೆರವೇರದೆಯೇ ಮೋಸದಿಂದ ವಿವಾಹ ಸಮಾರಂಭ ನೆರವೇರಿಸುವುದು, ವಿವಾಹಿತ ಮಹಿಳೆಯನ್ನು ಅಪರಾಧಿಕ ಉದ್ದೇಶದಿಂದ ಪುಸಲಾಯಿಸಿ ತನ್ನೊಂದಿಗೆ ಕರೆದುಕೊಂಡು ಹೋಗುವುದು ಅಥವಾ ಬಂಧಿಯಾಗಿಟ್ಟುಕೊಳ್ಳುವುದು, ಮಹಿಳೆಯ ವಿರುದ್ಧ ಪತಿ ಅಥವಾ ಆತನ ಸಂಬಂಧಿಕರು ಕ್ರೌರ್ಯ ನಡೆಸುವುದು. ಒತ್ತಾಯ ಪೂರ್ವಕವಾಗಿ ಮದುವೆಯಾಗುವ ಉದ್ದೇಶಕ್ಕಾಗಿ ಮಹಿಳೆಯನ್ನು ಅಪಹರಣ ಮಾಡುವುದು ಅಥವಾ ಅಪಹರಣಕ್ಕಾಗಿ ಪ್ರೇರೇಪಿಸುವುದು, ಮಹಿಳೆಯ ಸಮ್ಮತಿಯಿಲ್ಲದೇ ಗರ್ಭಪಾತವನ್ನುಂಟು ಮಾಡುವುದು ಅಥವಾ ಇದರಿಂದಾಗಿ ಮಹಿಳೆಯ ಮರಣಕ್ಕೆ ಕಾರಣೀಕರ್ತರಾಗುವುದು, ಮುಂತಾದ ಅಪರಾಧಗಳು ಮಹಿಳೆಯ ವಿರುದ್ಧ ಶಿಕ್ಷಾರ್ಹ ಅಪರಾಧಗಳಾಗಿದ್ದು ಸದರಿ ಅಪರಾಧದ ಕೃತ್ಯದಲ್ಲಿ ಭಾಗಿಯಾದವರಿಗೆ ನೀಡಬೇಕಾಗುವ ಶಿಕ್ಷೆಯ ಪ್ರಮಾಣವನ್ನು ಭಾರತೀಯ ನ್ಯಾಯ ಸಂಹಿತೆ 2023 ರ ಕಲಂ 74 ರಿಂದ 90ರಲ್ಲಿ ಕೂಲಂಕುಷವಾಗಿ ವಿವರಿಸಿರುತ್ತಾರೆ.
“ಮಹಿಳೆಯರ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005” ಕಾಯ್ದೆಯ ಪ್ರಕಾರ ಯಾವುದೇ ವಿವಾಹಿತ ಮಹಿಳೆಯು ಆಕೆಯ ಗಂಡ ಅಥವಾ ಗಂಡನ ಸಂಬಂಧಿಕರೊಂದಿಗೆ ವಾಸವಾಗಿರುವಂತ ಸಂದರ್ಭದಲ್ಲಿ ಗಂಡ ಅಥವಾ ಗಂಡನ ಸಂಬಂಧಿಕರು ನೇರವಾಗಿ ಅಥವಾ ಪರೋಕ್ಷವಾಗಿ ಆಕೆಗೆ ಮಾನಸಿಕವಾಗಿ ಅಂದರೆ ಚುಚ್ಚು ಮಾತಿನ ಮೂಲಕ ಅಥವಾ ನಿಂದನಾತ್ಮಕವಾದ ಮಾತಿನ ಮೂಲಕ ಅಥವಾ ದೈಹಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಅಥವಾ ಲೈಂಗಿಕವಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಹಿಂಸೆ ಅಥವಾ ಕಿರುಕುಳ ನೀಡಿದ ಸಂದರ್ಭದಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯು ನೇರವಾಗಿ ಅಥವಾ ವಕೀಲರ ಮೂಲಕ ಅಥವಾ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನಾಧಿಕಾರಿಯವರ ಮುಖಾಂತರ ಅಥವಾ ಸರಕಾರದಿಂದ ಮಾನ್ಯತೆ ಹೊಂದಿರುವ ಯಾವುದೇ ಸಮಾಜ ಸೇವಾ ಸಂಸ್ಥೆ ಮುಖಾಂತರ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ನೊಂದ ಮಹಿಳೆಯು ವಾಸ ಮಾಡುತ್ತಿರುವ ಮನೆಯ ಅಥವಾ ಆತಳು ನೌಕರಿ ಮಾಡುತ್ತಿರುವ ಕಛೇರಿಯ ವ್ಯಾಪ್ತಿಗೆ ಸಂಬಂಧಪಟ್ಟ ಪ್ರದೇಶದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಲಿಖಿತ ದೂರನ್ನು ನೀಡಿ ಸೂಕ್ತ ರಕ್ಷಣೆ ಮತ್ತು ದೌರ್ಜನ್ಯದಿಂದ ಆಕೆಗೆ ಉಂಟಾದ ಯಾವುದೇ ರೀತಿಯ ನಷ್ಟ ಮತ್ತು ತೊಂದರೆಗಳ ವಿರುದ್ಧ, ಸೂಕ್ತ ಪರಿಹಾರವನ್ನು ಕೇಳಿ ಪಡೆಯಬಹುದಾಗಿದೆ. ಇದಲ್ಲದೇ ದೌರ್ಜನ್ಯದಿಂದ ಆಕೆಗೆ ಉಂಟಾದ ಮಾನಸಿಕ, ಭಾವನಾತ್ಮಕ, ದೈಹಿಕ ಮತ್ತು ಆರ್ಥಿಕ ಒತ್ತಡಕ್ಕೆ ಕಾರಣೀಕರ್ತರಾದವರ ವಿರುದ್ಧ ನ್ಯಾಯಾಲಯದ ಮೂಲಕ ಸೂಕ್ತ ಪರಿಹಾರವನ್ನು ಕೇಳಬಹುದಾಗಿದೆ. ಈ ರೀತಿಯ ಕೌಟುಂಬಿಕ ದೌರ್ಜನ್ಯ ದೂರಿನ ವಿರುದ್ಧ ತನಿಖೆಯನ್ನು ನಡೆಸುವ ನ್ಯಾಯಾಲಯವು ಸಂದರ್ಭಕ್ಕನುಸಾರವಾಗಿ ಅಗತ್ಯವೆಂದು ಕಂಡುಬಂದಲ್ಲಿ ‘ಗೌಪ್ಯ ವಿಚಾರಣೆ’ (in camera proceedings) ಮೂಲಕ ದೂರು ನೀಡಿದ ಮಹಿಳೆಯ ವಿಚಾರಣೆಯನ್ನು ದೂರಿನಲ್ಲಿ ಉಲ್ಲೇಖಿಸುವ ವ್ಯಕ್ತಿಗಳ ಸಮಕ್ಷಮ ತನಿಖೆ ನಡೆಸಲು ಅವಕಾಶವಿರುತ್ತದೆ. ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯು ತಾನು ಶಾಂತಿಯುತವಾಗಿ ಮತ್ತು ನೆಮ್ಮದಿಯಿಂದ ಸ್ವತಂತ್ರವಾಗಿ ವಾಸಿಸಲು ಇಚ್ಚಿಸಿದಲ್ಲಿ ಆತಳು ನ್ಯಾಯಾಲಯದಿಂದ ಸೂಕ್ತ ರಕ್ಷಣಾ ಆದೇಶ ಪಡೆಯಬಹುದಾಗಿದೆ. ಮಾತ್ರವಲ್ಲದೇ ಆಕೆಯ ಪ್ರತ್ಯೇಕವಾದ ವಾಸದ ಕುರಿತು ವಾಸ್ತವ್ಯದ ವ್ಯವಸ್ಥೆಯನ್ನು ಮಾಡಿಕೊಡುವಂತೆ ಆಕೆಯ ವಿರುದ್ಧ ಕೌಟುಂಬಿಕ ದೌರ್ಜನ್ಯ ನಡೆಸುವಲ್ಲಿ ಭಾಗಿಯಾದ ಆಕೆಯ ಪತಿ ಮತ್ತು ಆತನೊಂದಿಗೆ ವಾಸವಾಗಿರುವ ಆತನ ರಕ್ತ ಸಂಬಂಧಿಕರಿಗೆ ಸೂಕ್ತ ನಿರ್ದೇಶನವನ್ನು ನೀಡುವ ಅಧಿಕಾರವನ್ನು ನ್ಯಾಯಾಧೀಶರು ಹೊಂದಿರುತ್ತಾರೆ. ಮಾತ್ರವಲ್ಲದೇ ಆಕೆಯ ಮತ್ತು ಮಕ್ಕಳ ಪೋಷಣೆಯ ಬಗ್ಗೆ ಮಾಸಿಕ ಅಥವಾ ಏಕಗಂಟಿನ ಜೀವನಾಂಶವನ್ನು ಮತ್ತು ಪರಿಹಾರವನ್ನು ನೀಡುವಂತೆ ಆದೇಶಿಸಿ ಕೌಟುಂಬಿಕ ದೌರ್ಜನ್ಯ ನಡೆಸಿದವರಿಗೆ ಸೂಕ್ತ ಶಿಕ್ಷೆಯನ್ನು ಸಹಾ ನೀಡುವ ಅಧಿಕಾರವನ್ನು ನ್ಯಾಯಾಲಯವು ಹೊಂದಿರುತ್ತದೆ.









