ಆ. 20 ರಿಂದ ಮತದಾರರ ಪಟ್ಟಿ ಪರಿಷ್ಕರಣೆ

ಉಡುಪಿ : ಭಾರತ ಚುನಾವಣಾ ಆಯೋಗವು ಅರ್ಹತಾ ದಿನಾಂಕ 2025 ಜ. 1 ರಂತೆ ಭಾವಚಿತ್ರ ಸಹಿತ ಮತದಾರರ ಪಟ್ಟಿಗಳ ಪರಿಷ್ಕರಣೆ ವೇಳಾಪಟ್ಟಿಯನ್ನು ಹೊರಡಿಸಿದೆ. ಪೂರ್ವ ಪರಿಷ್ಕರಣೆ ಚಟುವಟಿಕೆಗಳ ಸಮಯದಲ್ಲಿ ರಾಜ್ಯದ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುತ್ತಾರೆ. ಈ ಸಮಯದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿ, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರು ತೆಗೆದು ಹಾಕುವಿಕೆ ಮತ್ತು ಮುಂಬರುವ ಅರ್ಹತಾ ದಿನಾಂಕಗಳಂತೆ 18 ವರ್ಷ ತುಂಬುವ ಯುವ ಮತದಾರರ ಹೆಸರು ಸೇರ್ಪಡೆ ಕುರಿತು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ವಿಶೇಷ ಅಭಿಯಾನ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಸಾರ್ವಜನಿಕರು ವಿಶೇಷ ಅಭಿಯಾನಗಳ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಹಾಗೂ ಅವಶ್ಯವಿರುವ ತಿದ್ದುಪಡಿ, ಸೇರ್ಪಡೆ ಹಾಗೂ ತೆಗೆದು ಹಾಕುವಿಕೆಗಳಿಗೆ ಅರ್ಜಿಗಳನ್ನು ಸಲ್ಲಿಸುವಂತೆ ಮುಖ್ಯ ಚುನಾವಣಾಧಿಕಾರಿಗಳು ಮತದಾರರಲ್ಲಿ ಮನವಿ ಮಾಡಿದ್ದಾರೆ.

ಅರ್ಜಿ ನಮೂನೆ 6 ಮತ್ತು8 ಸಲ್ಲಿಸುವಾಗ ಸ್ವಯಂ ಪ್ರೇರಿತವಾಗಿ ಆಧಾರ್ ಸಂಖ್ಯೆಗಳನ್ನು ಒದಗಿಸಬಹುದಾಗಿದೆ. ಎಲ್ಲಾ ರೀತಿಯ ಚುಣಾವಣಾ ಸಂಬಂಧಿತ ಸೇವೆಗಳಿಗಾಗಿ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ Voter Helpline application ಮೂಲಕ ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಆ. 20ರಿಂದ ಮನೆ ಮನೆ ಭೇಟಿ
ಆ. 20ರಿಂದ ಅ. 18ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಭೇಟಿ ಮತ್ತು ಪರಿಶೀಲನೆ ನಡೆಯಲಿದೆ. ಈ ಸಂದರ್ಭದಲ್ಲಿ ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ/ಮರು ಹೊಂದಾಣಿಕೆ ಸೇರಿದಂತೆ ಮತದಾರರ ಪಟ್ಟಿ/ಮತದಾರರ ಗುರುತಿನ ಚೀಟಿಗಳಲ್ಲಿನ ಲೋಪದೋಷಗಳನ್ನು ತೆಗೆದುಹಾಕುವುದು. ಅಗತ್ಯವಿರುವ ಕಡೆ ಮತದಾರರ ಪಟ್ಟಿಯಲ್ಲಿನ ಗುಣಮಟ್ಟವಿಲ್ಲದ ಭಾವಚಿತ್ರಗಳನ್ನು ಬದಲಾಯಿಸಿ ಉತ್ತಮ ಗುಣಮಟ್ಟದ ಭಾವಚಿತ್ರಗಳನ್ನು ಖಾತ್ರಿಪಡಿಸುವುದು. ವಿಭಾಗ/ಭಾಗಗಳ ಮರುಹೊಂದಾಣಿಕೆ ಹಾಗೂ ಪ್ರಸ್ತಾಪಿತ ವಿಭಾಗ/ಭಾಗಗಳ ಮತಗಟ್ಟೆಗಳ ಸ್ಥಳವನ್ನು ಅಂತಿಮಗೊಳಿಸುವಿಕೆ ಮತ್ತು ಮತಗಟ್ಟೆಗಳ ಪಟ್ಟಿಗಳಿಗೆ ಅನುಮೋದನೆ ಪಡೆದುಕೊಳ್ಳುವುದು. ನ್ಯೂನತೆಗಳ ಗುರುತಿಸುವಿಕೆ ಮತ್ತು ಅಂತಹ ನ್ಯೂನತೆಗಳನ್ನು ನಿವಾರಿಸಲು ಕಾರ್ಯತಂತ್ರ ಮತ್ತು ಕಾಲಾವಧಿಯನ್ನುಅಂತಿಮಗೊಳಿಸುವುದು ಮತ್ತು ನಿಯಂತ್ರಣ ಕೋಷ್ಟಕದ ನವೀಕರಣ ನಡೆಯಲಿದೆ.

ಅ. 19ರಿಂದ 28ರ ವರೆಗೆ ನಮೂನೆ 1 ರಿಂದ 8 ರ ತಯಾರಿ ಹಾಗೂ ಅರ್ಹತಾ ದಿನಾಂಕ 2025 ಜ. 1 ರಂತೆ ಸಮಗ್ರ ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಅ. 29ರಂದು ಸಮಗ್ರ ಕರಡು ಮತದಾರರ ಪಟ್ಟಿಯ ಪ್ರಕಟಣೆ, ಸಾರ್ವಜನಿಕರು ತಮ್ಮ ಲೋಪದೋಷಗಳ ಕುರಿತಾಗಿ ಅ. 29 ರಿಂದ ನ. 28ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಡಿ. 24ರೊಳಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿಯಾಗಲಿದೆ. ಜ. 1 ರೊಳಗೆ ಮತದಾರರ ಪಟ್ಟಿಗಳ ಗುಣಮಟ್ಟ ಪರಿಶೀಲನೆ ಹಾಗೂ ಅಂತಿಮ ಪ್ರಕಟಣೆಗಾಗಿ ಆಯೋಗದ ಅನುಮತಿ ಪಡೆಯುವುದು, ದತ್ತಾಂಶವನ್ನು ನವೀಕರಿಸುವುದು ಮತ್ತು ಪೂರಕಗಳ ಮುದ್ರಣ ಮಾಡಲಾಗುವುದು. ಜ. 6ರಂದು ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆ ಮಾಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























































































































error: Content is protected !!
Scroll to Top