ಕಾರ್ಕಳ : ಸಾಣೂರು ರಾಮ ಮಂದಿರದಿಂದ ಬಳಿ ಕೋಳಿ ಫಾರ್ಮ್ ಎದುರು ನಿನ್ನೆ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 9 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಮಣಿಪಾಲದ ಆಸ್ಪತ್ರೆಯಲ್ಲಿ ತೀರಿಕೊಂಡಿದ್ದಾನೆ.
ಬೆಳುವಾಯಿಯ ಆಶ್ರಫ್ ಎಂಬವರು ಸ್ನೇಹಿತನ ಆಲ್ಟೋ ಕಾರಿನಲ್ಲಿ ಪತ್ನಿ ಸಾಜಿದಾ ಬಾನು, ಮಕ್ಕಳಾದ ಹನಸುಲ್ತಾನ ಮತ್ತು ಹಮ್ದಾನ್ ಅವರೊಂದಿಗೆ ಕಾರ್ಕಳದಿಂದ ಬೆಳುವಾಯಿ ಕಡೆಗೆ ಹೋಗುತ್ತಿರುವಾಗ ಸಾಣೂರು ಕೋಳಿಫಾರ್ಮ್ ಬಳಿ ಎದುರಿನಿಂದ ವಿಪರೀತ ವೇಗದಲ್ಲಿ ಬಂದ ಓಮ್ನಿ ಕಾರು ಡಿಕ್ಕಿ ಹೊಡೆದಿದೆ. ಆಲ್ಟೋದಲ್ಲಿದ್ದ ನಾಲ್ವರೂ ಗಾಯಗೊಂಡಿದ್ದು, ಸಾಜಿದಾ ಬಾನು ಮತ್ತು ಮಗನನ್ನು ಮಣಿಪಾಲದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಒಯ್ಯಲಾಗಿತ್ತು. ಈ ಪೈಕಿ ಮಗ ಚಿಕಿತ್ಸೆ ಫಲಿಸದೆ ತೀರಿಕೊಂಡಿದ್ದಾನೆ.
ಆಶ್ರಫ್ ಮತ್ತು ಮಗಳಿಗೆ ಕಾರ್ಕಳದ ಸಿಟಿ ನರ್ಸಿಂಗ್ ಹೋಮ್ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮೂಡುಬಿದಿರೆ ಕಡೆಯಿಂದ ಕಾರ್ಕಳಕ್ಕೆ ಬರುತ್ತಿದ್ದ ಕಾರಿನ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣ ಎಂದು ದೂರು ದಾಖಲಾಗಿದೆ. ಓಮ್ನಿ ಕಾರಿನಲ್ಲಿದ್ದವರಿಗೂ ಗಾಯಗಳಾಗಿವೆ.
ಸಾಣೂರಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕ ಸಾವು


























