ಪ್ಯಾರಿಸ್‌ ಒಲಿಂಪಿಕ್ಸ್‌ ಮುಕ್ತಾಯ : ಭಾರತಕ್ಕೆ ದಕ್ಕಿದ್ದು 6 ಪದಕ

ಪ್ಯಾರಿಸ್‌: ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾನುವಾರ ರಾತ್ರಿ ಅದ್ದೂರಿಯಾಗಿ ತೆರೆ ಬಿದ್ದಿದೆ. ಈ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಸಾಧನೆ ಮಾತ್ರ ತೀರಾ ನಿರಾಶದಾಯಕವಾಗಿದೆ. ಭಾರತ ಐದು ಕಂಚು ಮತ್ತು ಒಂದು ಬೆಳ್ಳಿ ಸೇರಿ ಆರು ಪದಕಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ಗಿಂತಲೂ ಪ್ಯಾರಿಸ್‌ ಒಲಿಂಪಿಕ್ಸ್‌ ಭಾರತದ ಪಾಲಿಗೆ ಕಳಪೆಯಾಯಿತು. ಇಷ್ಟು ಮಾತ್ರವಲ್ಲದೆ ಕೆಲವೊಂದು ವಿವಾದಗಳಿಗೂ ಈ ಒಲಿಂಪಿಕ್ಸ್‌ ಕಾರಣವಾಗಿ ಕಹಿಯನ್ನೂ ಉಣಿಸಿದೆ.

ಕುಸ್ತಿಪಟು ವಿನೇಶ್‌ ಫೋಗಟ್‌ ಬರೀ 100 ಗ್ರಾಂ ಹೆಚ್ಚು ದೇಹ ತೂಕ ಹೊಂದಿದ ಕಾರಣ ಸ್ಪರ್ಧೆಯಿಂದ ಅನರ್ಹಗೊಂಡ ವಿವಾದ ಇನ್ನೂ ಪರಿಹಾರ ಕಂಡಿಲ್ಲ. ಇದರ ವಿರುದ್ಧ ಭಾರತ ಮೇಲ್ಮನವಿ ಸಲ್ಲಿಸಿದ್ದು, ಅದರ ತೀರ್ಪು ನಾಳೆ ಬರಲಿದೆ. ಒಂದು ವೇಳೆ ಫೋಗಟ್‌ ಪರವಾಗಿ ತೀರ್ಪು ಬಂದರೆ ಭಾರತಕ್ಕೊಂದು ಬೆಳ್ಳಿ ದಕ್ಕುತ್ತದೆ. ಆಗ ಪದಕ ಪಟ್ಟಿಯಲ್ಲಿ ಭಾರತ ತುಸು ಮೇಲೇರಬಹುದು.

ಈ ಸಲದ ಒಲಿಂಪಿಕ್ಸ್‌ನಲ್ಲಿ ಅಮೆರಿಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸ್ಪರ್ಧೆಯ ಕೊನೆಯ ದಿನದಂದು ಅಮೆರಿಕ ತನ್ನ ಸಾಂಪ್ರದಾಯಿಕ ಎದುರಾಳಿ ಚೀನವನ್ನು ಅಲ್ಪ ಅಂತರದಿಂದ ಹಿಂದೆ ಹಾಕಿ ಅಗ್ರಸ್ಥಾನ ಅಲಂಕರಿಸಿದೆ. ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ನ ಅಂತಿಮ ಪಂದ್ಯದಲ್ಲಿ ಆತಿಥೇಯ ರಾಷ್ಟ್ರ ಫ್ರಾನ್ಸ್ ವಿರುದ್ಧ ಅಮೆರಿಕ 67-66 ರೋಚಕ ಜಯ ಸಾಧಿಸಿ ಚಿನ್ನದ ಪದಕ ಗೆದ್ದುಕೊಂಡಿತು. ಇದರೊಂದಿಗೆ ಅಮೆರಿಕ ಸತತವಾಗಿ ನಾಲ್ಕನೇ ಬಾರಿ ಒಲಿಂಪಿಕ್ಸ್‌ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

40 ಚಿನ್ನ, 44 ಬೆಳ್ಳಿ ಮತ್ತು 42 ಕಂಚು ಸೇರಿದಂತೆ 126 ಪದಕ ಅಮೆರಿಕದ ಸಾಧನೆ. ಚೀನ ತನ್ನ ಒಲಿಂಪಿಕ್ ಅಭಿಯಾನವನ್ನು 40 ಚಿನ್ನ ಸೇರಿ ಒಟ್ಟು 91 ಪದಕಗಳೊಂದಿಗೆ ಕೊನೆಗೊಳಿಸಿದೆ. ಒಲಿಂಪಿಕ್ಸ್‌ನುದ್ದಕ್ಕೂ ಅಮೆರಿಕ ಮತ್ತು ಚೀನದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಡೈವಿಂಗ್ ಮತ್ತು ಕಲಾತ್ಮಕ ಈಜುಗಳಂತಹ ಪೂಲ್ ಈವೆಂಟ್‌ಗಳಲ್ಲಿ ಚೀನ ಪ್ರಾಬಲ್ಯ ಹೊಂದಿತ್ತು. ಅಮೆರಿಕ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿ ಅಥ್ಲೆಟಿಕ್ಸ್‌ನಲ್ಲೇ 14 ಚಿನ್ನ, 11 ಬೆಳ್ಳಿ ಮತ್ತು 9 ಕಂಚು ಗೆದ್ದಿತು. ಎಂಟು ಚಿನ್ನ ಸೇರಿದಂತೆ 28 ಪದಕಗಳನ್ನು ಗೆದ್ದುಕೊಂಡಿರುವ ಅಮೆರಿಕ ಈಜುಕೊಳದಲ್ಲೂ ಶಕ್ತಿ ಪ್ರದರ್ಶಿಸಿತು.

ಭಾರತದ ಖಾತೆಗೆ ಆರು ಪದಕ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜಪಾನ್ 20 ಚಿನ್ನ ಸೇರಿ 45 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿತು. ಆಸ್ಟ್ರೇಲಿಯ 18 ಚಿನ್ನದ ಪದಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡರೆ, ಆತಿಥೇಯ ಫ್ರಾನ್ಸ್ 16 ಚಿನ್ನದ ಪದಕಗಳೊಂದಿಗೆ ಟಾಪ್ 5ರಲ್ಲಿ ಗುರುತಿಸಿಕೊಂಡಿತು. ಗ್ರೇಟ್ ಬ್ರಿಟನ್ 14 ಚಿನ್ನದ ಪದಕಗಳೊಂದಿಗೆ ಏಳನೇ ಸ್ಥಾನ ಗಳಿಸಿತು.

ಭಾರತ ಒಂದು ಬೆಳ್ಳಿ ಮತ್ತು ಐದು ಕಂಚಿನೊಂದಿಗೆ 71ನೇ ಸ್ಥಾನದಲ್ಲಿದೆ. ಪಾಕಿಸ್ಥಾನ ಗಮನಾರ್ಹ ಸಾಧನೆ ಮಾಡಿದೆ. ಅಥ್ಲೆಟಿಕ್ಸ್‌ನಲ್ಲಿ ತನ್ನ ಮೊದಲ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕದೊಂದಿಗೆ 62ನೇ ಸ್ಥಾನವನ್ನು ಗಳಿಸಿತು. ಈ ಬಾರಿ ಒಲಿಂಪಿಕ್ ಪದಕ ಪಟ್ಟಿಯಲ್ಲಿ ಪಾಕಿಸ್ಥಾನ ಭಾರತಕ್ಕಿಂತ ಮೇಲೇರಿದೆ ಎಂಬುದು ಗಮನಿಸಬೇಕಾದ ಸಂಗತಿ. ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಅರ್ಷದ್ ನದೀಮ್ ಗೆಲುವು ಸಾಧಿಸಿದ್ದು ಪಾಕಿಸ್ಥಾನಕ್ಕೆ ಐತಿಹಾಸಿಕ ಕ್ಷಣವಾಗಿದೆ. 100ಕ್ಕೂ ಹೆಚ್ಚು ದೇಶಗಳಿಗೆ ಪದಕ ಖಾತೆಯನ್ನೇ ತೆರೆಯಲು ಸಾಧ್ಯವಾಗಲಿಲ್ಲ.









































































































error: Content is protected !!
Scroll to Top