ವೀಲುನಾಮೆ

ವೀಲುನಾಮೆ ಎಂದರೆ ವ್ಯಕ್ತಿಯೊಬ್ಬ ತಾನು ಸಂಪಾದಿಸಿದ ತನ್ನ ಹೆಸರಿನಲ್ಲಿರುವ ಆಸ್ತಿ ಅಥವಾ ಸಂಪತ್ತು ತನ್ನ ಜೀವಿತಾವಧಿಯ ನಂತರ ಯಾರ ಹಕ್ಕಿಗೆ ಸೇರಬೇಕೆಂಬುದರ ಬಗ್ಗೆ ತನ್ನ ಮನಸ್ಸಿನ ಒಳಗಿನ ಇಚ್ಛೆ ಅಥವಾ ಸಂಕಲ್ಪವನ್ನು ತಾನು ಜೀವಂತವಾಗಿರುವಾಗಲೇ ಲಿಖಿತವಾಗಿ ಬರೆಸಿಡುವ ಸರಳವಾದ ದಾಖಲೆಯಾಗಿರುತ್ತದೆ. ಈ ರೀತಿಯ ದಾಖಲೆಯನ್ನು “ಮರಣ ಶಾಸನ ಪತ್ರ”, “ಉಯಿಲು” , “ಕೊಡಿಸಿಲ್” ಎಂಬುದಾಗಿ ಸಹಾ ಉಲ್ಲೇಖಿಸುತ್ತಾರೆ.

ಕೆಲವು ಸಂದರ್ಭಗಳಲ್ಲಿ ವ್ಯಕ್ತಿಯು ತಾನು ಕಷ್ಟಪಟ್ಟು ಸಂಪಾದಿಸಿದ ಎಲ್ಲಾ ಆಸ್ತಿ ಅಥವಾ ಸ್ವತ್ತುಗಳನ್ನು ತಾನು ಜೀವಂತವಾಗಿರುವಾಗಲೇ ಸಂಪೂರ್ಣವಾಗಿ ತಾನು ಹೊಂದಿರುವ ಅಪಾರವಾದ ನಂಬಿಕೆ, ಪ್ರೀತಿ ಮತ್ತು ವಿಶ್ವಾಸದಿಂದ ಇನ್ನೊಬ್ಬರ ಹೆಸರಿಗೆ ವರ್ಗಾಯಿಸಿದ ನಂತರ ಆತನು ನಿರಾಶ್ರಿತನಾಗಿ ತೀವ್ರ ತರದ ಸಮಸ್ಯೆಗಳನ್ನು ಎದುರಿಸುವ ನಿದರ್ಶನಗಳು ಸಮಾಜದಲ್ಲಿ ಕಂಡು ಬರುವುದುಂಟು. ಆದರೆ ವೀಲುನಾಮೆಯನ್ನು ಬರೆಸಿಡುವುದರಿಂದ ಆಸ್ತಿಯ ಅಥವಾ ಸ್ವತ್ತಿನ ಮಾಲಿಕನ ಮಾಲಿಕತ್ವ ಮತ್ತು ಸ್ವಾಧೀನತೆಗೆ ವ್ಯಕ್ತಿಯು ತನ್ನ ಜೀವಿತ ಕಾಲದಲ್ಲಿ ವೀಲಿನಲ್ಲಿ ಉಲ್ಲೇಖಿಸಿರುವ ಸ್ವತ್ತಿನ ಮೇಲೆ ತನ್ನ ಸ್ವಾಧೀನತೆಯನ್ನು ಕಳೆದುಕೊಳ್ಳುವುದಿಲ್ಲ. ಕಾರಣ ತನ್ನ ಜೀವಿತ ಕಾಲದಲ್ಲಿ ವ್ಯಕ್ತಿಯೊಬ್ಬ ಬರೆಸಿಡುವ ವೀಲು ನಾಮೆಯು ಆತನ ಜೀವಿತಾವಧಿಯ ನಂತರ ಮಾತ್ರ ಊರ್ಜಿತಕ್ಕೆ ಬರುತ್ತದೆ. ಮಾತ್ರವಲ್ಲದೇ ವೀಲುನಾಮೆ(ಉಯಿಲು)ಯನ್ನು ಬರೆಸಿಟ್ಟ ನಂತರ ಯಾವ ಸಂದರ್ಭದಲ್ಲಿಯೂ ಆ ವ್ಯಕ್ತಿಯು ತನ್ನ ಜೀವಿತಾವಧಿಯೊಳಗಾಗಿ ತಾನು ಬರೆಸಿಟ್ಟ ವೀಲುನಾಮೆಯನ್ನು ಯಾವುದೇ ರೀತಿಯಲ್ಲಿ ತಿದ್ದುಪಡಿ ಮಾಡುವ, ರದ್ದು ಪಡಿಸಿ ಬೇರೆ ಯಾವುದೇ ವೀಲುನಾಮೆಯನ್ನು ಬರೆಸಿಡುವ ಸಂಪೂರ್ಣವಾದ ಹಕ್ಕನ್ನು ಹೊಂದಿರುತ್ತಾನೆ.

ಯಾವುದೇ ಒಂದು ವೀಲುನಾಮೆ ಕಾನೂನುಬದ್ಧವಾಗಿ ಸಾಬೀತಾಗಬೇಕಾದರೆ ಅದನ್ನು ಸಂಬಂಧಪಟ್ಟ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿ ಅದರಲ್ಲಿನ ಸಾಕ್ಷಿಗಳ ಹೇಳಿಕೆಯನ್ನು ನ್ಯಾಯಾಲಯಕ್ಕೆ ನೀಡಿ ಸಿವಿಲ್ ನ್ಯಾಯಾಲಯದಿಂದ ಸೂಕ್ತ ಆದೇಶವನ್ನು ಪಡೆಯಬೇಕಾಗುತ್ತದೆ. ವೀಲುನಾಮೆಯ ನೈಜತೆಯನ್ನು ನಿರ್ಧರಿಸುವ ಅಧಿಕಾರ ಯಾವುದೇ ಕಂದಾಯ ನ್ಯಾಯಾಲಯಕ್ಕಾಗಲೀ ಅಥವಾ ಕಂದಾಯ ಅಧಿಕಾರಿಗಳಿಗಾಗಲೀ ಇರುವುದಿಲ್ಲ. ಹೀಗಾಗಿ ಸಿವಿಲ್ ನ್ಯಾಯಾಲಯದಿಂದ ಸೂಕ್ತ ಆದೇಶವನ್ನು ಹೊಂದಿರದ ವೀಲುನಾಮೆಯ ಆಧಾರದಲ್ಲಿ ಯಾವುದೇ ಒಂದು ಖಾತೆ ಬದಲಾವಣೆ ಮಾಡುವ ಅಧಿಕಾರ ಕಂದಾಯ ನ್ಯಾಯಾಲಯಕ್ಕಾಗಲೀ ಅಥವಾ ಕಂದಾಯ ಅಧಿಕಾರಿಗಳಿಗಾಗಲೀ ಇರುವುದಿಲ್ಲ. ಕಾನೂನಿನಡಿಯಲ್ಲಿ ವೀಲುನಾಮೆಯನ್ನು ಅಪ್ರಾಪ್ತ ವಯಸ್ಕನಲ್ಲದ ಅಂದರೆ 18 ವರ್ಷ ವಯಸ್ಸನ್ನು ದಾಟಿದ ಮತ್ತು ಮಾನಸಿಕ ಸ್ವಾಸ್ಥ್ಯ ಹೊಂದಿರುವ ಹಾಗೂ ಸ್ವಂತ ನಿರ್ಧಾರ ಹೊಂದುವ ಯಾವುದೇ ವ್ಯಕ್ತಿ ಬರೆಸಿಡಬಹುದಾಗಿದೆ. ಕಿವುಡ, ಮೂಗ ಅಥವಾ ಕುರುಡ ವ್ಯಕ್ತಿ ತಾನು ಮಾಡುತ್ತಿರುವ ವೀಲುನಾಮೆ ಬಗ್ಗೆ ಸಾಕಷ್ಟು ತಿಳುವಳಿಕೆ ಹೊಂದಿದ್ದಲ್ಲಿ ಅಂತಹ ವ್ಯಕ್ತಿಯೂ ಕೂಡ ಜೀವಿತಾವಧಿಯಲ್ಲಿ ತನ್ನ ಆಸ್ತಿಗೆ ಸಂಬಂಧಿಸಿದಂತೆ ವೀಲುನಾಮೆಯನ್ನು ಬರೆಸಿಡಬಹುದು. ಯಾವುದೇ ವ್ಯಕ್ತಿ ಕೆಲವು ಸಮಯ ಮಾತ್ರ ಮಾನಸಿಕವಾಗಿ ಅಸ್ವಸ್ಥನಾಗಿದ್ದು ಮತ್ತೆ ಕೆಲವು ಸಮಯದಲ್ಲಿ ಸ್ವಸ್ಥನಾಗಿರುತ್ತಾನೆಯೋ ಅಂತಹ ವ್ಯಕ್ತಿ ಮಾನಸಿಕವಾಗಿ ಸ್ವಸ್ಥನಾಗಿದ್ದ ಸಮಯದಲ್ಲಿ ಮಾತ್ರ ವೀಲುನಾಮೆಯನ್ನು ಬರೆಸಿಡಬಹುದು. ಯಾವುದೇ ವ್ಯಕ್ತಿಯು ತಾನು ಸೇವಿಸುವ ಅಮಲು ಪದಾರ್ಥ ಅಥವಾ ಯಾವುದೇ ರೀತಿಯ ಅನಾರೋಗ್ಯದಿಂದಾಗಿ ಅಥವಾ ಇತರ ಯಾವುದೇ ಕಾರಣದಿಂದಾಗಿ ಸ್ವಂತ ನಿರ್ಧಾರ ಹೊಂದುವ ಸ್ಥಿತಿಯಲ್ಲಿದ್ದಾಗ ವೀಲುನಾಮೆಯನ್ನು ಬರೆಸಿಡುವಂತಿಲ್ಲ. ಬೇರೆ ವ್ಯಕ್ತಿಗಳ ಬೆದರಿಕೆಗೆ, ಒತ್ತಡಕ್ಕೆ, ಮರಳು ಮಾತಿಗೆ ಅಥವಾ ಮೋಸಕ್ಕೆ ಒಳಗಾಗಿದ್ದ ಸಂದರ್ಭಲ್ಲಿ ಮಾಡಿದ ವೀಲುನಾಮೆ ಕಾನೂನು ಪ್ರಕಾರ ಅಂಗಿಕಾರವಾಗುವುದಿಲ್ಲ.

ವೀಲುನಾಮೆ ಮಾಡಲು ಕಾನೂನಿನನ್ವಯ ಅಪ್ರಾಪ್ತ ವಯಸ್ಕರ ಅಥವಾ ಬುದ್ದಿಭ್ರಮಣೆಯಾದವರ ಪರವಾಗಿ ಅವರ ಪಾಲಕರು ಅಥವಾ ಪೋಷಕರು ವೀಲುನಾಮೆಯನ್ನು ಮಾಡುವಂತಿಲ್ಲ. ವೀಲುನಾಮೆ ಬರವಣಿಗೆಯಲ್ಲಿಯೇ ಇರಬೇಕು. ವೀಲುನಾಮೆಯನ್ನು ತನಗೆ ತಿಳಿದಿರುವ ಯಾವುದೇ ಭಾಷೆಯಲ್ಲಿ ಮತ್ತು ಯಾವುದೇ ಶೈಲಿಯಲ್ಲಿ ಬರೆಯಬಹುದು. ವೀಲುನಾಮೆಯನ್ನು ಕಡ್ಡಾಯವಾಗಿ ಛಾಪಾ ಕಾಗದದ(ಸ್ಟ್ಯಾಂಪ್ ಪೇಪರ್) ಮೇಲೆಯೇ ಬರೆಯಬೇಕೆಂಬ ಕಡ್ಡಾಯವಾದ ನಿಯಮ ಇರುವುದಿಲ್ಲ. ಸಾಧಾರಣ ಕಾಗದದ ಮೇಲೆ ಸಹ ಬರೆಯಬಹುದು. ಆದರೆ ವೀಲುನಾಮೆಯ ಪ್ರತಿ ಪುಟದ ಮೇಲೆ ವೀಲುನಾಮೆ ಬರೆದಾತ ತನ್ನ ಸಹಿಯನ್ನು ಮಾಡಬೇಕು ಅಥವಾ ತನ್ನ ಹೆಬ್ಬೆರಳಿನ ಗುರುತನ್ನು ಹಾಕಬೇಕು. ವೀಲುನಾಮೆ ದಸ್ತಾವೇಜಿಗೆ ಕನಿಷ್ಠ ಇಬ್ಬರು ವ್ಯಕ್ತಿಗಳು ಸಾಕ್ಷಿಗಳಾಗಿ ಸಹಿ ಮಾಡಬೇಕು ಮತ್ತು ಈ ಸಾಕ್ಷಿದಾರರು ವೀಲು ಬರೆಸಿಡುವ ವ್ಯಕ್ತಿ ವೀಲುನಾಮೆಗೆ ಸಹಿ ಅಥವಾ ಹೆಬ್ಬೆಟ್ಟು ಗುರುತು ಮಾಡಿದ್ದನ್ನು ಪ್ರತ್ಯಕ್ಷವಾಗಿ ನೋಡಿರಬೇಕು. ವೀಲುನಾಮೆ ಮೂಲಕ ಯಾವುದೇ ವಿಧದ ಪ್ರಯೋಜನವನ್ನು ಪಡೆಯುವ ವ್ಯಕ್ತಿ ವೀಲುನಾಮೆಗೆ ಸಾಕ್ಷಿಯಾಗಿ ಸಹಿ ಮಾಡುವಂತಿಲ್ಲ. ವೀಲುನಾಮೆಯಲ್ಲಿ ಅದಕ್ಕೆ ಸಂಬಂಧಪಟ್ಟ ಆಸ್ತಿಗಳ ಮತ್ತು ಅವುಗಳ ಮೇಲೆ ಹಕ್ಕು ಹೊಂದುವ ವ್ಯಕ್ತಿಗಳ ವಿವರವನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ನಮೂದಿಸಬೇಕು. ವೀಲುನಾಮೆ ಮಾಡುವ ವ್ಯಕ್ತಿ ತನ್ನ ವೀಲುನಾಮೆನಲ್ಲಿ ವಿವರಿಸಿದ ಆಸ್ತಿಗಳ ಮೇಲೆ ಸಂಪೂರ್ಣವಾದ ಹಕ್ಕನ್ನು ಹೊಂದಿರಬೇಕು. ಒಂದು ವೇಳೆ ಆತ ತನ್ನ ಜಂಟಿ ಹಕ್ಕಿನ ಆಸ್ತಿಯ ಕುರಿತು ವೀಲುನಾಮೆ ಬರೆಸಿರುವ ಸಂದರ್ಭದಲ್ಲಿ ಆತನ ಅಂಶದ ಹಕ್ಕಿನ ಕುರಿತು ಅಂತಹ ದಾಖಲೆಯನ್ನು ಬರೆದಿಡಬಹುದು. ಮುಸ್ಲಿಂ ಧರ್ಮಕ್ಕೆ ಸೇರಿದ ವ್ಯಕ್ತಿಯು (ಮಹಮ್ಮದೀಯನು) ತನ್ನ ಒಟ್ಟು ಆಸ್ತಿಯ ಮೂರನೇ ಒಂದು ಭಾಗಕ್ಕೆ ಸಂಬಂಧಿಸಿದಂತೆ ಮಾತ್ರ, ವೀಲುನಾಮೆ ಮಾಡುವ ಹಕ್ಕುಳ್ಳವನಾಗಿರುತ್ತಾನೆ. ವೀಲುನಾಮೆಯನ್ನು ಕಡ್ಡಾಯವಾಗಿ ನೋಂದಣಿ (ರಿಜಿಸ್ಟ್ರೇಷನ್) ಮಾಡಿಸಬೇಕೆಂಬ ನಿಯಮ ಇರುವುದಿಲ್ಲ. ಆದರೆ ನೋಂದಣಿ (ರಿಜಿಸ್ಟ್ರೇಷನ್) ಮಾಡುವುದರಿಂದ ಅಂತಹ ನೋಂದಾಯಿತ ವೀಲುನಾಮೆ ಬಗ್ಗೆ ಅನುಮಾನ ಬಹುಮಟ್ಟಿಗೆ ಕಡಿಮೆಯಾಗುತ್ತದೆ. ಮಾತ್ರವಲ್ಲದೇ ವೀಲುನಾಮೆಯ ಮೂಲಪ್ರತಿ ಕಳೆದು ಹೋದ ಸಂದರ್ಭದಲ್ಲಿ ಅದರ ಧೃಢೀಕೃತ ನಕಲನ್ನು ಸಂಬಂಧಪಟ್ಟ ನೋಂದಣಾಧಿಕಾರಿ ಕಚೇರಿಯಿಂದ ಪಡೆದು ವೀಲುನಾಮೆಯನ್ನು ಜಾರಿಗೆ ತರಬಹುದು.















































error: Content is protected !!
Scroll to Top