ವಿದ್ಯಾರ್ಥಿಗಳು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾದಾಗ ಗುರುವಿಗೆ ಹೆಮ್ಮೆ : ಡಾ. ಸುಧಾಕರ್ ಶೆಟ್ಟಿ

ಕಾರ್ಕಳ: ನಮ್ಮಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆದು, ಉನ್ನತ ಸ್ಥಾನವನ್ನು ಅಲಂಕರಿಸಬೇಕು. ಮುಂದೊಂದು ದಿನ ಅವರನ್ನು ಭೇಟಿಯಾಗಲು ನಾವು ಅವರಿಂದ ಅನುಮತಿ ಪಡೆದುಕೊಳ್ಳುವಂತಾಗಬೇಕು. ತಾನು ಕಲಿಸಿದ ವಿದ್ಯಾರ್ಥಿ ಈ ರೀತಿಯಲ್ಲಿ ಗಣ್ಯ ವ್ಯಕ್ತಿಯಾಗಿ ಶಿಕ್ಷಕನಿಗೆ ಹೆಮ್ಮೆ ಎನಿಸಬೇಕು, ಜೀವನದಲ್ಲಿ ಇದಕ್ಕಿಂತ ದೊಡ್ಡ ಸಾರ್ಥಕ್ಯ ಇನ್ನೊಂದಿಲ್ಲ ಎಂದು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಸುಧಾಕರ್ ಶೆಟ್ಟಿ ಹೇಳಿದ್ದಾರೆ.

ಕಾರ್ಕಳದ ಎಸ್‌ವಿಟಿ ವನಿತಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ 26 ವರ್ಷ ಕಾರ್ಯನಿರ್ವಹಿಸಿ ನಿವೃತ್ತರಾದ ರಾಮದಾಸ್ ಪ್ರಭು ಅವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಬದುಕು ಎಂಬುದು ಹಚ್ಚಿಟ್ಟ ದೀಪದಂತೆ. ಶುದ್ಧ ಚಾರಿತ್ರ್ಯ , ಸನ್ನಡತೆಯೊಂದಿಗೆ ಬದುಕನ್ನು ಸುಂದರವಾಗಿ ರೂಪಿಸಿಕೊಂಡರೆ ನಾವು ಪಡೆದ ಶಿಕ್ಷಣಕ್ಕೆ ಅರ್ಥ ಬರುತ್ತದೆ. ಕುಂಬಾರ ಮಡಿಕೆ ಮಾಡುವಾಗ ಅದರ ಹೊರಗೆ ಒಂದು ಕೈಯಿಂದ ಸರಿಯಾಗಿ ಪೆಟ್ಟು ಕೊಟ್ಟು ತಟ್ಟುತ್ತಾನೆ. ಅದೇ ಸಮಯದಲ್ಲಿ ಇನ್ನೊಂದು ಕೈಯಲ್ಲಿ ಅದನ್ನು ಆದರಿಸಿ ಹಿಡಿದಿರುತ್ತಾನೆ. ಶಿಕ್ಷಕರೂ ಹೀಗೆಯೇ ಇರುತ್ತಾರೆ, ಮಕ್ಕಳನ್ನು ದಂಡಿಸಿದರೂ ಅದರ ಉದ್ದೇಶ ಅವರು ಒಳ್ಳೆಯವರಾಗಬೇಕೆಂದು. ಇಂತಹ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಆದರ್ಶಪ್ರಾಯವಾಗಬೇಕು ಎಂದರು.

ರಾಮದಾಸ್ ಪ್ರಭು ಅವರನ್ನು ಮೈಸೂರು ಪೇಟ ತೊಡಿಸಿ, ಚಿನ್ನದ ಉಂಗುರ ಹಾಕಿ ಸನ್ಮಾನಿಸಲಾಯಿತು. ಪದವಿ ಪೂರ್ವ ವಿಭಾಗದ ಉಪನ್ಯಾಸಕರಾದ ಪ್ರಭಾತ್ ರಂಜನ್ ಹಾಗೂ ಪದ್ಮಪ್ರಭ ಇಂದ್ರ ಇತರ ಉಪನ್ಯಾಸಕರು ಕಾಫಿ ಪುಡಿಯಿಂದ ತಯಾರಿಸಿದ ರಾಮದಾಸ್ ಪ್ರಭು ಹಾಗೂ ಅವರ ಪತ್ನಿ ರೇಷ್ಮಾ ಅವರ ವಿಶೇಷವಾದ ಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಅರಸಿನ ಕುಂಕುಮದ ಬೆಳ್ಳಿಯ ತಟ್ಟೆ ನೀಡಿದರು.
ರಾಮದಾಸ್ ಪ್ರಭು ತಾನು ಸಂಸ್ಥೆಗೆ ಸೇರಿದ ಸಂದರ್ಭದ ಅನುಭವಗಳನ್ನು ಹಂಚಿಕೊಂಡು 1 ಲಕ್ಷ ರೂ. ದೇಣಿಗೆಯನ್ನು ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.
ಎಸ್‌ವಿ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷ ಕಮಲಾಕ್ಷ ಕಾಮತ್, ಕೋಶಾಧಿಕಾರಿ ಐ. ರವೀಂದ್ರನಾಥ ಪೈ, ಕಾರ್ಯದರ್ಶಿ ಕೆ. ಪಿ. ಶೆಣೈ, ಎಸ್‌ವಿ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಉಷಾ ನಾಯಕ್, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್, ಮಾಲಿನಿ ಕೆ. ಬಂಡಿವಡ್ಡರ್, ಹಳೆ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷೆ ಉಷಾ ಜೆ. ಶೆಣೈ, ಅಧ್ಯಕ್ಷೆ ಮಾಲತಿ ಎಂ. ವಸಂತರಾಜ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಕಳ ಶ್ರೀ ವೆಂಕಟರಮಣ ದೇವಳದ ಒಂದನೇ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಭಾಷಾ ಉಪನ್ಯಾಸಕ ಪದ್ಮಪ್ರಭ ಇಂದ್ರ ಸನ್ಮಾನ ಪತ್ರ ವಾಚಿಸಿದರು. ದೇವದಾಸ್ ಕೆರೆಮನೆ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.
ನೂತನ ಪ್ರಾಂಶುಪಾಲ ನೇಮಿರಾಜ್ ಶೆಟ್ಟಿ ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಸುಮಂಗಲ ಪ್ರಭು ವಂದಿಸಿದರು. ಪ್ರೌಢಶಾಲಾ ವಿಭಾಗದ ಆಂಗ್ಲ ಭಾಷಾ ಶಿಕ್ಷಕ ಸುನಿಲ್ ಕುಮಾರ್ ಶೆಟ್ಟಿ ನಿರೂಪಿಸಿದರು.











































































error: Content is protected !!
Scroll to Top