ಇಂದಿನಿಂದ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ
ಮೈಸೂರು : ಮುಡಾ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಅಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಇಂದಿನಿಂದ 7 ದಿನ ಪಾದಯಾತ್ರೆ ನಡೆಸಲಿದ್ದು, ಇದರ ಯಶಸ್ಸಿಗೆ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮೈಸೂರಿನಲ್ಲಿ ಇಂದು ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದರು. ಮೈಸೂರು ಚಲೋ ಪಾದಯಾತ್ರೆಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಯಶಸ್ವಿಯಾಗಲೆಂದು ಪಾರ್ಥಿಸಿದರು.
ಬೃಹತ್ ಹೋರಾಟಕ್ಕೆ ಯಶಸ್ವಿ ಸಿಗಬೇಕು. ಚಾಮುಂಡಿಗೆ ಪೂಜೆ ಸಲ್ಲಿಸಿ ಪಾದಯಾತ್ರೆಯಲ್ಲಿ ಭಾಗಿಯಾಗುತ್ತೇನೆ. ಕಾಂಗ್ರೆಸ್ ಹಗರಣಗಳ ವಿರುದ್ಧದ ಹೋರಾಟ ಯಶಸ್ವಿಯಾಗಬೇಕು. ನಮ್ಮ ಕಾರ್ಯಕರ್ತರು ಪಾದಯಾತ್ರೆಗೆ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ನಮ್ಮ ನಿರೀಕ್ಷೆಗೂ ಮೀರಿ ಜನ ಬರುತ್ತಿದ್ದಾರೆ. ಪಾದಯಾತ್ರೆ ಯಶಸ್ಸಿಗೆ ಮೈಸೂರು ಭಾಗದ ಜನರ ಬೆಂಬಲವೂ ಬೇಕು. ಈ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ. ಅಹಿಂದ ಹೆಸರಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರ ಹಿಡಿದಿದೆ. ಆದರೆ ಅಹಿಂದ ವರ್ಗಗಳಿಗೆ ಅನ್ಯಾಯ ಮಾಡಿದ್ದಾರೆ. ಮುಖ್ಯಮಂತ್ರಿಗಳು ಚರ್ಚೆಯಿಂದ ಓಡಿಹೋಗಿದ್ದಾರೆ ಎಂದು ವಿಜಯೇಂದ್ರ ಮಾಧ್ಯಮದವರೊಂದಿಗೆ ಮಾತನಾಡಿ ಹೇಳಿದರು.
ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಸಮಾವೇಶ ನಡೆಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಪ್ರತಿಪಕ್ಷಗಳ ಆರೋಪ ಸತ್ಯ ಇದೆ ಅಂತ ಒಪ್ಪಿಕೊಂಡಿದ್ದಾರೆ. ಈ ಬೆದರಿಕೆ, ಕುತಂತ್ರಕ್ಕೆ ನಾವು ಬಗ್ಗುವ ಪ್ರಶ್ನೆಯೇ ಇಲ್ಲ. ಕುತಂತ್ರದಿಂದ ಹೋರಾಟ ಮಣಿಸುವ ದುರುದ್ದೇಶ ನಡೆಯಲ್ಲ. ಡಿ.ಕೆ. ಶಿವಕುಮಾರ್ ಅಧಿಕಾರ ಶಾಶ್ವತ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಇದಕ್ಕೆಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದರು.

ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣ ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಭಾಗಿಯಾಗಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೂಡಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ವಿಪಕ್ಷಗಳು ಆಗ್ರಹಿಸುತ್ತಿವೆ. 10 ಗಂಟೆ ಸುಮಾರಿಗೆ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.





































