ಕಂಚಿನ ಮಿಂಚು ಹರಿಸಿರುವ ಹುಡುಗಿಗೆ ಚಿನ್ನ ಗೆಲ್ಲುವ ಉಜ್ವಲ ಅವಕಾಶ
ಪ್ಯಾರಿಸ್ : ಒಲಿಂಪಿಕ್ಸ್ನಲ್ಲಿ ಈಗಾಗಲೇ ಎರಡು ಕಂಚಿನ ಪದಕಗಳನ್ನು ಗೆದ್ದಿರುವ ಮನು ಭಾಕರ್ ಇಂದು ಮತ್ತೆ ಕಣಕ್ಕಿಳಿಯಲಿದ್ದು, ಈ ಸಲ ಚಿನ್ನಕ್ಕೆ ಗುರಿಯಿಡುತ್ತಾರಾ ಎಂಬ ಕುತೂಹಲ ಗರಿಗೆದರಿದೆ. ದೇಶಾದ್ಯಂತ ಜನರು ಮನು ಚಿನ್ನ ಗೆಲ್ಲಲಿ ಎಂದು ಹಾರೈಸುತ್ತಿದ್ದಾರೆ. ಇಂದು ಭಾರತದ ಕ್ರೀಡಾಪಟುಗಳು ಶೂಟಿಂಗ್, ಬಿಲ್ಲುಗಾರಿಕೆ, ಗಾಲ್ಫ್ ಮತ್ತು ಸೈಲಿಂಗ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ ಶುರುವಾಗಲಿರುವ 25 ಮೀ. ಪಿಸ್ತೂಲ್ ಶೂಟಿಂಗ್ ಫೈನಲ್ನಲ್ಲಿ ಭಾರತೀಯ ಶೂಟರ್ ಮನು ಭಾಕರ್ ಕಣಕ್ಕಿಳಿಯುತ್ತಿದ್ದು, ಪದಕದ ನಿರೀಕ್ಷೆಯಿದೆ.
ಶೂಟಿಂಗ್ ಸ್ಪರ್ಧೆಯ ಫೈನಲ್ನಲ್ಲಿ ಮನು ಭಾಕರ್ ಕಣಕ್ಕಿಳಿಯುತ್ತಿದ್ದಾರೆ. 25 ಮೀ. ಪಿಸ್ತೂಲ್ ಮಹಿಳೆಯರ ಅರ್ಹತಾ ಸುತ್ತಿನಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಮನು, ಅಂತಿಮ ಹಣಾಹಣಿಯಲ್ಲಿ 7 ಮಂದಿ ವಿರುದ್ಧ ಸ್ಪರ್ಧಿಸಲಿದ್ದಾರೆ. ಅರ್ಹತಾ ಸುತ್ತಿನಲ್ಲಿ ಮನು ಭಾಕರ್ 290 ಅಂಕಗಳನ್ನು ಕಲೆಹಾಕಿದರೆ, ಮೊದಲ ಸ್ಥಾನ ಪಡೆದ ಹಂಗೇರಿಯ ವೆರೋನಿಕಾ ಮೇಜರ್ 292 ಪಾಯಿಂಟ್ಸ್ ಗಳಿಸಿದ್ದರು. ಮನು ಹಾಗೂ ವೆರೋನಿಕಾ ನಡುವಣ ವ್ಯತ್ಯಾಸ ಕೇವಲ 2 ಅಂಕಗಳು ಮಾತ್ರ. ಹೀಗಾಗಿ ಫೈನಲ್ ರೌಂಡ್ನಲ್ಲಿ ಮನು ಭಾಕರ್‌ಗೆ ಚಿನ್ನ ಗೆಲ್ಲಲು ಉಜ್ವಲ ಅವಕಾಶಗಳಿವೆ. ಗಾಲ್ಫ್, ಬಿಲ್ಲುಗಾರಿಕೆ ಸೇರಿದಂತೆ ಇತರ ಸ್ಪರ್ಧೆಗಳಲ್ಲೂ ಭಾರತೀಯ ಕ್ರೀಡಾಪಟುಗಳು ಕಣಕಿಳಿಯಲಿದ್ದಾರೆ.





































