ಏಕ್ಸ್ ಎಫೆಕ್ಟ್ ಬಾಡಿಸ್ಟ್ರೇಯನ್ನು ಕೋರ್ಟಿಗೆಳೆದ ಯುವಕ!

ದಿಲ್ಲಿ : ಹಿಂದುಸ್ಥಾನ್‌ ಯೂನಿಲಿವರ್‌ ಕಂಪನಿಯ ಏಕ್ಸ್‌ ಎಫೆಕ್ಟ್‌ ಎಂಬ ಬಾಡಿ ಸ್ಪ್ರೇ ಈಗ ಸುದ್ದಿ ಮಾಡಿದೆ. ಹಾಗೆಂದು ಇದು ಅತ್ಯುತ್ತಮ ಉತ್ಪನ್ನ ಅಥವಾ ಅದರಿಂದ ಆರೋಗ್ಯಕ್ಕೆ ಸಮಸ್ಯೆಯಾಗಿದೆ ಎಂಬ ಕಾರಣಕ್ಕೆ ಸುದ್ದಿಯಾದದ್ದಲ್ಲ, ಬದಲಾಗಿ ದಿಲ್ಲಿಯ ಯುವಕನೊಬ್ಬ ಈ ಬಾಡಿ ಸ್ಪ್ರೇ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದಾನೆ.

ದಿಲ್ಲಿಯ ವೈಭವ್ ಬೇಡಿ (26) ಎಂಬ ಯುವಕ ಕಳೆದ ಹಲವಾರು ವರ್ಷಗಳಿಂದ ಏಕ್ಸ್ ಎಫೆಕ್ಟ್ ಬಾಡಿಸ್ಟ್ರೇ ಬಳಸುತ್ತಿದ್ದಾನೆ. ಈ ಬಾಡಿ ಸ್ಪ್ರೇ ಬಳಸಲು ಕಾರಣ ಅದರ ಜಾಹೀರಾತು. ಜಾಹೀರಾತನ್ನು ನಂಬಿ, ಕಳೆದ ಏಳು ವರ್ಷಗಳಿಂದ ಏಕ್ಸ್ ಪರ್ಫ್ಯೂಮ್ ಬಳಸುತ್ತಿದ್ದಾನೆ. ಜಾಹೀರಾತಿನಲ್ಲಿ ನೀವು ನಿತ್ಯ ಏಕ್ಸ್ ಎಫೆಕ್ಟ್‌ ಪರ್ಫ್ಯೂಮ್ ಬಳಸಿದರೆ ಹೆಣ್ಣುಗಳು ನಿಮ್ಮತ್ತ ಆಕರ್ಷಣೆಗೊಂಡು ನಿಮ್ಮ ವಶವಾಗುತ್ತಾರೆ ಎಂದು ತೋರಿಸಲಾಗುತ್ತದೆ. ಆದರೆ ಇಷ್ಟೆಲ್ಲ ವರ್ಷ ಏಕ್ಸ್ ಎಫೆಕ್ಟ್‌ ಬಳಸಿದರೂ ಈವರೆಗೂ ಒಂದೇ ಒಂದು ಹೆಣ್ಣು ಅವನತ್ತ ಆಕರ್ಷಿತಳಾಗಿಲ್ಲ. ಹೆಣ್ಣು ಮಕ್ಕಳಿರುವ ಕಾಲೇಜು, ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ತಿರುಗಾಡಿದರೂ ಅವರ ಬಾಡಿ ಸ್ಪ್ರೇಯಿಂದ ಯಾವ ಯುವತಿಯೂ ಅವನತ್ತ ಆಕರ್ಷಿತಳಾಗಲಿಲ್ಲ. ಕೆಲವೆಡೆ ಅವನನ್ನು ಕೆಕ್ಕರಿಸಿ ನೋಡಿದರಂತೆ. ಒಂದು ದಿನ ಏಕ್ಸ್ ಸ್ಪ್ರೇ, ಎಕ್ಸ್ ಪರ್ಫ್ಯೂಮ್, ಏಕ್ಸ್ ರೋಲ್ ಆನ್, ಏಕ್ಸ್ ಆಫ್ಟರ್ ಶೇವ್, ಏಕ್ಸ್ ಬಾಡಿ ವಾಶ್, ಏಕ್ಸ್ ಶಾಂಪೂ ಎಲ್ಲ ಹಾಕಿಕೊಂಡು ಮನೆಯಲ್ಲಿ ಕಸ ಗುಡಿಸುತ್ತಿದ್ದ ಕೆಲಸದವಳ ಎದುರು ಬೆತ್ತಲಾಗಿ ನಿಂತಾಗ ಅವಳು ಕೈಯಲ್ಲಿದ್ದ ಪೊರಕೆಯಿಂದ ಅವನ ಮೈಮೇಲೆ ಎಕ್ಸ್ ಗುರುತುಗಳು ಏಳುವಂತೆ ಬಾರಿಸಿದಳು.

ಈಗ ವೈಭವ್ ತಾನು ಕಳೆದ ಏಳು ವರ್ಷಗಳಿಂದ ಬಳಸಿದ ಏಕ್ಸ್ ಸ್ಪ್ರೇ, ಎಕ್ಸ್ ಪರ್ಫ್ಯೂಮ್, ಏಕ್ಸ್ ರೋಲ್ ಆನ್, ಏಕ್ಸ್ ಆಫ್ಟರ್ ಶೇವ್, ಏಕ್ಸ್ ಬಾಡಿ ವಾಶ್, ಏಕ್ಸ್ ಶಾಂಪೂ, ಏಕ್ಸ್ ಆಂಟಿ-ಪರ್ಸ್ಪಿರಂಟ್, ಹೇರ್ ಜಲ್ ಎಲ್ಲದರ ಖಾಲಿ ಬಾಟಲಿ, ಟಿನ್, ಶ್ಯಾಷೆ ಮೊದಲಾದವುಗಳನ್ನು ಸಾಕ್ಷ್ಯಾಧಾರವಾಗಿ ಕೊಟ್ಟು, ಕಂಪೆನಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾನೆ.

ಕಾಲೇಜು ದಿನಗಳಿಂದ ಈವರೆಗೆ ಏಳು ವರ್ಷಗಳಿಂದ ಏಕ್ಸ್ ಪ್ರೊಡಕ್ಟ್ ಗಳನ್ನು ಉಪಯೋಗಿಸುತ್ತಿದ್ದೇನೆ. ಆದರೆ ಈವರೆಗೂ ಒಬ್ಬಳೇ ಒಬ್ಬಳು ಹೆಣ್ಣು ನನ್ನ ಬಳಿ ಬಂದಿಲ್ಲ. ಟಿವಿ ಜಾಹೀರಾತಲ್ಲಿ ತೋರಿಸುವಂತೆಯೇ ನಾನು ಏಕ್ಸ್ ಎಫೆಕ್ಟ್ ಪರ್ಫ್ಯೂಮನ್ನು ಸ್ಪ್ರೇ ಮಾಡಿಕೊಂಡು ಹೆಣ್ಣುಗಳ ಎದುರು ಹೋಗಿ ನಿಂತರೂ ಒಬ್ಬಳೂ ನನ್ನತ್ತ ಆಕರ್ಷಿಸಿತಳಾಗಿಲ್ಲ. ಕೊನೆಗೆ ತನ್ನ ಗಂಡನೊಂದಿಗೆ ಜಗಳವಾಡಿ ಒಂದು ವರ್ಷದಿಂದ ಅವನಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ನನ್ನ ಮನೆಗೆಲಸದವಳ ಎದುರು ಹೋಗಿ ನಿಂತರೆ ಅವಳಿಂದ ಸಿಕ್ಕಿದ್ದು ಪೊರಕೆ ಏಟು.

ನಾನು ಕಂಪನಿಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇನೆ. ನಾನು ಅವುಗಳನ್ನು ಯಾವತ್ತೂ ಕೂಲ್ ಆಂಡ್ ಡ್ರೈ, ನೇರವಾಗಿ ಬಿಸಿಲು ಬೀಳದ ಜಾಗದಲ್ಲಿ ಇರಿಸಿದ್ದೇನೆ. ಮಕ್ಕಳ ಕೈಗೆ ಸಿಗದಂತೆ ಎಚ್ಚರಿಕೆ ವಹಿಸಿದ್ದೇನೆ. ಐದು ವರ್ಷದ ನನ್ನ ಅಳಿಯ ಅದನ್ನೊಮ್ಮೆ ಮುಟ್ಟಿದಾಗ ಅವನಿಗೆ ಹೊಡೆದಿದ್ದೇನೆ. ರೂಲರನ್ನು ಉಪಯೋಗಿಸಿ ಬಾಟಲಿಯ ನೋಝಲ್ ನನ್ನ ಕಂಕುಳದಿಂದ ಕರಾರುವಕ್ಕಾಗಿ 15 ಸೆಂಟಿಮೀಟರ್ ದೂರದಲ್ಲಿಟ್ಟುಕೊಂಡು ಸ್ಪ್ರೇ ಮಾಡಿಕೊಳ್ಳುತ್ತಿದ್ದೆ. ಇಷ್ಟೆಲ್ಲ ಮಾಡಿದ ಮೇಲೂ ನನಗೆ ಯಾವ ಹೆಣ್ಣೂ ಸಿಕ್ಕಿಲ್ಲ. ನನಗಾಗಿರುವ ಮೋಸ, ನಷ್ಟ, ಮಾನಸಿಕ ನೋವಿಗೆ ಕಂಪನಿಯಿಂದ ಸೂಕ್ತ ಪರಿಹಾರ ಕೊಡಿಸಬೇಕು ಎಂದು ತನ್ನ ಮನವಿಯಲ್ಲಿ ಹೇಳಿದ್ದಾನೆ.

ವೈಭವ್ ಬೇಡಿ ಅಷ್ಟೊಂದು ಬಾಟಲಿ, ಶ್ಯಾಷೆ, ಪೌಚ್‌ಗಳನ್ನು ಚೀಲದಲ್ಲಿಟ್ಟುಕೊಂಡು ದಿಲ್ಲಿಯ ಕಾರ್ಕಾರ್ಡೂಮಾ ಕೋರ್ಟಿಗೆ ಬಂದು ಒಬ್ಬ ವಕೀಲನ ಹತ್ತಿರ ಹೋದಾಗ ಅವನು ವೈಭವ್ ಬೇಡಿ ಒಬ್ಬ ಪರ್ಫ್ಯೂಮ್ ಮಾರಾಟಗಾರ ಅಂತ ಭಾವಿಸಿದ್ದರು. ನಂತರ ಅವರು ಬಂದ ಉದ್ದೇಶ ತಿಳಿದ ನಂತರ ಕೇಸನ್ನು ಕೈಗೆತ್ತಿಕೊಂಡರು. ಈಗ ಕೋರ್ಟು ಹಿಂದೂಸ್ಥಾನ್ ಯೂನಿಲಿವರ್ ಕಂಪನಿಗೆ ನೋಟಿಸ್ ಜಾರಿ ಮಾಡಿದೆ.







































































error: Content is protected !!
Scroll to Top