ಮಳೆಗಾಲಕ್ಕೆ ಆರೋಗ್ಯಕರ ಕಷಾಯಗಳು

ಮಳೆಗಾಲದಲ್ಲಿ ನೆಗಡಿ, ಕೆಮ್ಮು, ಜ್ವರ, ತ್ವಚೆಯ ಸಮಸ್ಯೆ ಬರುವುದು ಸಾಮಾನ್ಯ. ಕಷಾಯ ಸೇವನೆಯಿಂದ ಇದನ್ನು ತಡೆಗಟ್ಟಬಹುದು. ಆಯುರ್ವೇದಲ್ಲಿ ಅನೇಕ ಗಿಡಮೂಲಿಕೆಗಳನ್ನು ಬಳಸಿ ಮಾಡಿದ ಕಷಾಯ ದೊರೆಯುತ್ತದೆ. ಅದನ್ನು ರೋಗ ಲಕ್ಷಣಗಳನ್ನು ಪರಿಶೀಲಿಸಿ ಆಯುರ್ವೇದಾಚಾರ್ಯರು ನೀಡುತ್ತಾರೆ. ಇವತ್ತು ಚಿಕ್ಕಪುಟ್ಟ ಕಾಯಿಲೆಗಳನ್ನು ತಡೆಯಲು ಹಾಗೂ ಆರೋಗ್ಯವನ್ನು ವೃದ್ಧಿಸಲು ಮನೆಯಲ್ಲಿಯೇ ಸಿಗುವಂತಹ ಸಾಮಗ್ರಿಗಳನ್ನು ಬಳಸಿ ತಯಾರಿಸಿದ ಕಷಾಯಗಳ ಬಗ್ಗೆ ತಿಳಿದುಕೊಳ್ಳೋಣ.

ಕಷಾಯ ಒಳ್ಳೆಯದು ಎಂದು ವಿಪರೀತ ಸೇವಿಸಬೇಡಿರಿ. ವಾರಕ್ಕೆ ಮೂರು ದಿನ ಸೇವಿಸಿದರೆ ಸಾಕು. ಕಾಲು ಲೋಟಕ್ಕಿಂತ ಅಧಿಕ ಸೇವಿಸಬೇಡಿ. ಮಾಡಿದ ತಕ್ಷಣ ಬಿಸಿ ಇರುವಾಗಲೇ ಸೇವಿಸಿ.
ಮಳೆಗಾಲದಲ್ಲಿ ಕುಡಿಯಬಹುದಾದ ಕಷಾಯಗಳು
ಶುಂಠಿ ಕಷಾಯ – ಒಂದು ಲೋಟ ನೀರಿಗೆ ಚಿಕ್ಕ ಶುಂಠಿಯ ತುಂಡು, ಅರ್ಧ ಚಮಚ ಕರಿಮೆಣಸು, ನಾಲ್ಕೈದು ಎಲೆ ತುಳಸಿಯನ್ನು ಹಾಕಿ ಕಾಲು ಭಾಗ ಬರುವವರೆಗೆ ಕುದಿಸಿ ಸೋಸಿ ಬಿಸಿ ಇರುವಾಗಲೇ ಸೇವಿಸಿ. ಇದು ಅಜೀರ್ಣದ ಸಮಸ್ಯೆ ಮೈಕೈ ನೋವಿಗೆ ಒಳ್ಳೆಯದು.

ಮೆಂತ್ಯೆ ಅರಶಿನ ಕಷಾಯ – ಒಂದು ಲೋಟ ನೀರಿಗೆ ಅರ್ಧ ಚಮಚ ಮೆಂತೆ ಹುಡಿ ಅರ್ಧ ಚಮಚ ಅರಿಶಿನ ಹುಡಿ ಹಾಕಿ ಸರಿಯಾಗಿ ಕಾಲು ಭಾಗ ಬರುವವರೆಗೆ ಕುದಿಸಿ ಸೋಸಿ ಬಿಸಿಯಾಗಿ ಸೇವಿಸಿ.

ದಾಸವಾಳದ ಕಷಾಯ – ಒಂದು ಲೋಟ ನೀರಿಗೆ ನಾಲ್ಕೈದು ದಾಸವಾಳದ ಹೂವಿನ ಎಸಳು ಹಾಗು ಕಾಲು ಚಮಚ ಏಲಕ್ಕಿ ಪುಡಿಯನ್ನು ಹಾಕಿ ಕಾಲು ಭಾಗ ಬರುವವರೆಗೆ ಕುದಿಸಿ ಸೋಸಿ ಸೇವಿಸಿರಿ. ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದು.

ಕೊತ್ತಂಬರಿ ಜೀರಿಗೆ ಕಷಾಯ – ಒಂದು ಗ್ಲಾಸ್ ನೀರಿಗೆ ಒಂದು ಚಮಚ ಕೊತ್ತಂಬರಿ ಬೀಜ, ಅರ್ಧ ಚಮಚ ಜೀರಿಗೆ, ಕಾಲು ಚಮಚ ಮೆಂತೆ, ಕಾಲು ಚಮಚ ಕರಿಮೆಣಸು ಹಾಕಿ ಕುದಿಸಿರಿ. ಇದರ ಹುಡಿ ಕೂಡ ಮಾಡಿ ಇಟ್ಟುಕೊಳ್ಳಬಹುದು. ಕುದಿ ಬರುವಾಗ ಸ್ವಲ್ಪ ಬೆಲ್ಲವನ್ನು ಸೇರಿಸಿ. ಕಾಲು ಗ್ಲಾಸ್ ಬರುವವರೆಗೆ ಇದನ್ನು ಕುದಿಸಿ ನಂತರ ಸೋಸಿ ಬಿಸಿಯಾಗಿ ಸೇವಿಸಿ. ಸೇವಿಸುವಾಗ ಸ್ವಲ್ಪ ಹಾಲನ್ನು ಕೂಡ ಬೆರೆಸಬಹುದು. ಈ ಕಷಾಯವು ನೆಗಡಿ, ಕೆಮ್ಮು ಗಂಟಲು ಕೆರೆತ ಕಡಿಮೆ ಮಾಡುತ್ತದೆ .

ತುಳಸಿ ಕಷಾಯ – ಎರಡು ಗ್ಲಾಸ್ ನೀರಿಗೆ ಆರು ತುಳಸಿಯ ಎಲೆಗಳು, ಎರಡು ಲವಂಗ, ಆರು ಕರಿಮೆಣಸು ಹಾಗು ಬೆಲ್ಲ ಹಾಕಿ ಕುದಿಸಿ. ಅರ್ಧ ಗ್ಲಾಸ್ ಬರುವವರೆಗೆ ಕುದಿಸಿ ಸೋಸಿ ಬಿಸಿಯಾಗಿ ಸೇವಿಸಿರಿ.

ಅಮೃತಬಳ್ಳಿ ಕಷಾಯ – ಅಮೃತಬಳ್ಳಿಯ ಕಾಂಡದ ನಾಲ್ಕೈದು ತುಂಡು ಒಂದು ಗ್ಲಾಸ್ ನೀರಿಗೆ ಹಾಕಿ ಕುದಿಸಿ. ಕಾಲು ಗ್ಲಾಸ್ ಬರುವವರೆಗೆ ಕುದಿಸಿ ಸೋಸಿ. ಇದಕ್ಕೆ ಬೆಲ್ಲ ಸೇರಿಸಬಹುದು. ಈ ಕಷಾಯವು ಜ್ವರವನ್ನು ಹೋಗಲಾಡಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ದೊಡ್ಡಪತ್ರೆ ಕಷಾಯ – ಒಂದು ಲೋಟ ನೀರಿಗೆ ನಾಲ್ಕೈದು ಎಲೆ ದೊಡ್ಡಪತ್ರೆ, ಕಾಲು ಚಮಚ ಅರಿಶಿಣ, ನಾಲ್ಕೈದು ತುಳಸಿ ಎಲೆ, ಚಿಕ್ಕ ಶುಂಠಿ ತುಂಡು ಹಾಕಿ ಕುದಿಸಿ ಕಾಲು ಗ್ಲಾಸ್ ಬರುವವರೆಗೆ ಕುದಿಸಿ ಸೋಸಿ ಬಿಸಿಯಾಗಿ ಸೇವಿಸಿ. ಇದು ಮಕ್ಕಳಿಗೆ ನೆಗಡಿ, ಕೆಮ್ಮು, ಜ್ವರ ಇದ್ದಾಗ ತುಂಬಾ ಒಳ್ಳೆಯದು.

ವೀಳ್ಯದೆಲೆ ಕಷಾಯ – ಒಂದು ಲೋಟ ನೀರಿಗೆ ಒಂದು ವೀಳ್ಯದೆಲೆ, ನಾಲ್ಕು ತುಳಸಿ ಎಲೆ, ಎರಡು ಲವಂಗ, ಚಿಟಿಕೆ ಏಲಕ್ಕಿ ಪುಡಿ, ಆರು ಕರಿಮೆಣಸು ಹಾಕಿ ಸರಿಯಾಗಿ ಕುದಿಸಿ. ಕಾಲು ಗ್ಲಾಸ್ ಬರುವವರೆಗೆ ಕುದಿಸಿ ಸೋಸಿ ಬಿಸಿಯಾಗಿ ಸೇವಿಸಿರಿ.
ಮೇಲೆ ಹೇಳಿರುವ ಕಷಾಯಗಳಲ್ಲಿ ಯಾವುದಾದರು ಒಂದು ಬಗೆಯ ಕಷಾಯ ಸೇವಿಸಿರಿ. ಎಲ್ಲಾ ಕಷಾಯವನ್ನು ಒಟ್ಟಿಗೆ ಸೇವಿಸಬೇಡಿ.









error: Content is protected !!
Scroll to Top