2015ರ ಬಳಿಕ ನಿರ್ಮಾಣವಾದ ರೆಸಾರ್ಟ್, ಹೋಮ್ಸ್ಟೇ, ಹೋಟೆಲ್, ಬಡಾವಣೆಗಳಿಗೆ ಕುತ್ತು
ಬೆಂಗಳೂರು: 300ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ವಯನಾಡಿನ ಭೀಕರ ಭೂಕುಸಿತ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರಕಾರ ಪಶ್ಚಿಮ ಘಟ್ಟದಲ್ಲಿ 2015ರ ನಂತರದ ಆಗಿರುವ ಅರಣ್ಯ ಒತ್ತುವರಿ ತೆರವಿಗೆ ಮುಂದಾಗಿದೆ. ಎಲ್ಲ ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾವಿ, ಉತ್ತರ ಕನ್ನಡ, ಹಾಸನ ಸೇರಿದಂತೆ ರಾಜ್ಯದ ವ್ಯಾಪ್ತಿಯ ಪಶ್ಚಿಮ ಘಟ್ಟದಲ್ಲಿ 2015ರಿಂದ ಆಗಿರುವ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
ಪಶ್ಚಿಮ ಘಟ್ಟದ ಎಲ್ಲ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ತೋಟ, ಹೋಂ ಸ್ಟೇ, ರೆಸಾರ್ಟ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅರಣ್ಯ ಒತ್ತುವರಿಯನ್ನು ತಕ್ಷಣದಿಂದಲೇ ತೆರವುಗೊಳಿಸಬೇಕು. ಒಂದು ತಿಂಗಳ ಒಳಗಡೆ ಕೈಗೊಂಡ ಕ್ರಮದ ವಿವರದೊಂದಿಗೆ ಕಡತದಲ್ಲಿ ವರದಿ ಸಲ್ಲಿಸಬೇಕೆಂದು ಸೂಚಿಸಿದ್ದಾರೆ.

ವಯನಾಡು ದುರಂತದ ಬಗ್ಗೆ ಪಶ್ಚಿಮ ಘಟ್ಟ ಉಳಿವಿನ ಬಗ್ಗೆ ಭಾರಿ ಚರ್ಚೆಯಗುತ್ತಿದೆ. ಪಶ್ಚಿಮ ಘಟ್ಟ ರಕ್ಷಣೆಗಾಗಿ ಮಾಧವ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ಸಲ್ಲಿಸಿರುವ ವರದಿಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. ಇಷ್ಟರ ತನಕ ಘಟ್ಟದ ಬುಡದಲ್ಲಿ ವಾಸವಾಗಿರುವವರಿಗೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಈ ವರದಿಯನ್ನು ಅನುಷ್ಠಾನಿಸಲು ವಿರೋಧಿಸುತ್ತಿದ್ದವರು ಕೂಡ ಈಗ ಅತಿಕ್ರಮಣದಿಂದಾಗಿಯೇ ಪಶ್ಚಿಮ ಘಟ್ಟದಲ್ಲಿ ಅನಾಹುತಗಳು ಸಂಭವಿಸುತ್ತಿವೆ ಎಂದು ಹೇಳುತ್ತಿದ್ದಾರೆ. ಪರಿಸರವಾದಿಗಳಂತೂ ಈ ಎರಡು ವರದಿಗಳನ್ನು ಅನುಷ್ಠಾನಿಸದ ಸರಕಾರಗಳನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದೆ ಇಂಥ ದುರಂತಗಳು ಸಂಭವಿಸುವುದನ್ನು ತಡೆಯುವ ಉದ್ದೇಶದಿಂದ ಸರಕಾರ ಪಶ್ಚಿಮ ಘಟ್ಟ ಒತ್ತುವರಿ ತೆರವಿಗೆ ಮುಂದಾಗಿದೆ.
ಪಶ್ಚಿಮ ಘಟ್ಟದ ಗುಡ್ಡಗಳು ಮತ್ತು ಶೋಲಾ ಅರಣ್ಯಗಳ ತಲೆ ಕಡಿದು ಕಾಫಿ ತೋಟ, ಮನೆ, ಹೋಂ ಸ್ಟೇ, ರೆಸಾರ್ಟ್ ಮಾಡುತ್ತಿರುವುದರಿಂದ ಹಾಗೂ ಬೇರಿನಿಂದ ಗಟ್ಟಿಯಾಗಿ ಮಣ್ಣು ಹಿಡಿದಿಡುವ ಬೃಹತ್ ಮರಗಳನ್ನು ಉರುಳಿಸಿ, ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸುವ ರಸ್ತೆಗಳಿಂದ ಇಂತಹ ದುರಂತ ಮರುಕಳಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಈಶ್ವರ್ ಖಂಡ್ರೆ ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಚಾರಣಕ್ಕೂ ಬೀಳಲಿದೆ ಕಡಿವಾಣ
ಗಿರಿ ಮತ್ತು ಘಟ್ಟ ಪ್ರದೇಶದಲ್ಲಿ ವಿಪರೀತ ವಾಹನಗಳ ಸಂಚಾರದಿಂದಲೂ ಅಪಾಯ ಎದುರಾಗುತ್ತಿದೆ. ವಾರಾಂತ್ಯದಲ್ಲಿ ಪ್ರವಾಸ, ಚಾರಣದ ಹೆಸರಲ್ಲಿ ಗಿರಿ ಮತ್ತು ಕಾನನ ಪ್ರದೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುವುದೂ ಇಂತಹ ದುರಂತಗಳಿಗೆ ಪೂರಕವಾಗಿದೆ ಎಂದು ಉಲ್ಲೇಖಿಸಿದ್ದು ಚಾರಣಕ್ಕೂ ಕಡಿವಾಣ ಬೀಳುವ ಸಾಧ್ಯತೆ ಇದೆ.





































