ವಿಪತ್ತು ನಿರ್ವಹಣಾ ಅಧಿನಿಯಮ 2005

ದೇಶದ ಯಾವುದೇ ಪ್ರದೇಶದಲ್ಲಿ ನೈಸರ್ಗಿಕವಾಗಿ, ಮಾನವ ಕೃತ್ಯ ಕಾರಣಗಳಿಂದಾಗಿ, ಆಕಸ್ಮಿಕವಾಗಿ ಅಥವಾ ನಿರ್ಲಕ್ಷತೆಯಿಂದಾಗಿ ಉಂಟಾಗುವ ಯಾವುದೇ ಆಪತ್ತು, ದುರಂತ, ದುರ್ಘಟನೆ ಇತ್ಯಾದಿ ಗಂಭೀರ ಘಟನೆಯ ಪರಿಣಾಮವಾಗಿ ಗಣನೀಯ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಉಂಟಾಗುವ ಜೀವಹಾನಿ, ಸ್ವತ್ತು, ಪರಿಸರ ಹಾನಿಯಾದ ಮತ್ತು ವಿಪತ್ತು ಬಾಧಿತ ಪ್ರದೇಶದ ಜನಸಮುದಾಯವು ಅದನ್ನು ನಿಭಾಯಿಸುವ ಸಾಮರ್ಥ್ಯವನ್ನು ಮೀರಿ ಬೃಹತ್ ಪರಿಣಾಮವನ್ನು ಉಂಟು ಮಾಡುವ ವಿವಿಧ ವಿಪತ್ತುಗಳ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ಅಥವಾ ನಿಯಂತ್ರಿಸುವ ಉದ್ದೇಶಕ್ಕಾಗಿ ಕೇಂದ್ರ ಸರಕಾರ 2005ರ ಡಿಸೆಂಬರ್‌ 23 ರಂದು “ವಿಪತ್ತು ನಿರ್ವಹಣಾ ಅಧಿನಿಯಮ 2005” ಎಂಬ ಕಾನೂನನ್ನು ದೇಶದಾದ್ಯಂತ ಜಾರಿಗೆ ತಂದಿರುತ್ತದೆ.

ಈ ಕಾನೂನಿನ ಮೂಲಕ ದೇಶದ ಯಾವುದೇ ಪ್ರದೇಶದಲ್ಲಿ ವಿಪತ್ತಿನ ಅಪಾಯವನ್ನು ಅಥವಾ ಅಪಾಯ ಸಂಭಾವ್ಯ ವಿಪತ್ತನ್ನು ತಡೆಗಟ್ಟುವುದಕ್ಕಾಗಿ, ಅಪಾಯದ ತೀವ್ರತೆಯನ್ನು ಉಪಶಮನಗೊಳಿಸುವುದಕ್ಕಾಗಿ ಸಾಮರ್ಥ್ಯವನ್ನು ಸಂವರ್ಧನೆಗೊಳಿಸುವ ಮೂಲಕ ಅಥವಾ ವಿಪತ್ತಿಗೆ ಕೂಡಲೇ ಸ್ಪಂದಿಸುವುದಕ್ಕಾಗಿ ಮತ್ತು ಯಾವುದೇ ವಿಪತ್ತಿನ ಪರಿಣಾಮಗಳ ತೀವ್ರತೆಯನ್ನು ನಿರ್ಧರಿಸುವುದಕ್ಕಾಗಿ, ವಿಪತ್ತಿನಿಂದ ತೊಂದರೆಗೊಳಗಾದವರನ್ನು ಸ್ಥಳಾಂತರಿಸುವುದಕ್ಕಾಗಿ ಮತ್ತು ಸೂಕ್ತ ರಕ್ಷಣೆ ಮತ್ತು ಪರಿಹಾರಗಳನ್ನು ನೀಡಿ ಅವರಿಗೆ ಪುನರ್ವಸತಿಗಳನ್ನು ಒದಗಿಸುವುದಕ್ಕಾಗಿ ಅಗತ್ಯವಾದ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಮತ್ತು ವಿವಿಧ ಸಂಘಟನೆ, ಸಮನ್ವಯ ಮತ್ತು ಅನುಷ್ಠಾನ ಕ್ರಮಗಳನ್ನು ನಿರಂತರವಾಗಿ ಮತ್ತು ಸಮಗ್ರವಾಗಿ ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಿರುತ್ತದೆ.
ಈ ಕಾನೂನಿನ ಪ್ರಕಾರ ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ವಿಪತ್ತು ಪ್ರಾಧಿಕಾರ, ರಾಜ್ಯ ಮಟ್ಟದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳನ್ನು ಸ್ಥಾಪಿಸಲಾಗಿದ್ದು ರಾಷ್ಟ್ರೀಯ ವಿಪತ್ತು ಪ್ರಾಧಿಕಾರದ ಅಧ್ಯಕ್ಷರಾಗಿ ದೇಶದ ಪ್ರಧಾನ ಮಂತ್ರಿ ಹಾಗೂ ಇತರ ಸದಸ್ಯರು, ಅಂತೆಯೇ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಲ್ಲಿ ರಾಜ್ಯದ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಇತರ ಸದಸ್ಯರು ಮತ್ತು ಹಾಗೆಯೇ ಜಿಲ್ಲಾ ವಿಪತ್ತು ಪ್ರಾಧಿಕಾರದಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಪ್ರಾಧಿಕಾರದ ಚುನಾಯಿತ ಪ್ರತಿನಿಧಿ, ಜಿಲ್ಲಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೋಲೀಸ್ ಅಧೀಕ್ಷಕ, ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಸೇರಿ ಇತರ ಸದಸ್ಯರು ಇರುತ್ತಾರೆ. ಈ ರಾಷ್ಟ್ರೀಯ ವಿಪತ್ತು ಪ್ರಾಧಿಕಾರವು ಅಗತ್ಯವಿದ್ದಾಗ ನಿರ್ದಿಷ್ಟ ಸಮಯ ಮತ್ತು ಸ್ಥಳದಲ್ಲಿ ವಿವಿಧ ವಿಪತ್ತುಗಳ ನಿರ್ವಹಣೆಯ ನೀತಿಗಳನ್ನು ರೂಪಿಸುವ ಬಗ್ಗೆ, ವಿವಿಧ ರಾಷ್ಟ್ರೀಯ ಯೋಜನೆಗಳನ್ನು ಅನುಮೋದಿಸುವ ಬಗ್ಗೆ, ಮತ್ತು ಅನುಮೋದಿಸಿದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹೊರಡಿಸಬಹುದಾದ ವಿವಿಧ ಮಾರ್ಗಸೂಚಿಗಳನ್ನು ರಾಜ್ಯ ಪ್ರಾಧಿಕಾರಗಳು ಅನುಸರಿಸುವಂತೆ ಮತ್ತು ಸರಕಾರದ ವಿವಿಧ ಇಲಾಖೆಗಳು, ತಮ್ಮ ಅಭಿವೃದ್ಧಿ ಯೋಜನೆಗಳಲ್ಲಿ ಮತ್ತು ಪರಿಯೋಜನೆಗಳಲ್ಲಿ ವಿಪತ್ತು ತಡೆಗಟ್ಟುವಿಕೆ ಅಥವಾ ವಿಪತ್ತುಗಳ ಪರಿಣಾಮಗಳನ್ನು ಉಪಶಮನಗೊಳಿಸಲು ಕೈಗೊಳ್ಳುವ ಕ್ರಮಗಳನ್ನು ಸಂಯೋಜಿಸುವುದಕ್ಕಾಗಿ ಅನುಸರಿಸಬೇಕಾದ ವಿವಿಧ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆ, ವಿಪತ್ತು ನಿರ್ವಹಣೆಗಾಗಿ ಕಾರ್ಯನೀತಿಯ ಮತ್ತು ಯೋಜನೆಯ ಜಾರಿ ಮತ್ತು ಅನುಷ್ಠಾನವನ್ನು ಸಮನ್ವಯಗೋಳಿಸುವ ಬಗ್ಗೆ, ಉಪಶಮನದ ಉದ್ದೇಶಕ್ಕಾಗಿ ಅಗತ್ಯವುಳ್ಳ ನಿಧಿಗಳ ಏರ್ಪಾಡಿಗಾಗಿ ಶಿಫಾರಸ್ಸು ಮಾಡುವ ಬಗ್ಗೆ, ವಿಪತ್ತುಗಳಿಂದ ಬಾಧಿತವಾಗಿರುವ ದೇಶದ ಜನರಿಗೆ ನೆರವು ಒದಗಿಸುವ ಬಗ್ಗೆ, ವಿಪತ್ತಿನ ತಡೆಗಟ್ಟುವಿಕೆಗಾಗಿ ಅಥವಾ ಉಪಶಮನಕ್ಕಾಗಿ, ಅಪಾಯ ಸಂಭಾವ್ಯ ವಿಪತ್ತುಗಳನ್ನು ಎದುರಿಸಲು ಸನ್ನದ್ಧವಾಗಿರುವುದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ವಿಪತ್ತು ನಿರ್ವಹಣಾ ಸಂಸ್ಥೆಯ ಕಾರ್ಯನಿರ್ವಹಣೆಗಾಗಿ ವಿಸ್ತೃತವಾದ ಕಾರ್ಯನೀತಿಗಳನ್ನು ರೂಪಿಸುವ ಬಗ್ಗೆ ಚರ್ಚಿಸಿ ವಿವಿಧ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯು ಹೊಂದಿರುತ್ತದೆ. ಅದೇ ರೀತಿಯಾಗಿ ವಿಪತ್ತಿನಿಂದ ಬಾಧಿತರಾದ ವ್ಯಕ್ತಿಗಳಿಗೆ ಒದಗಿಸಬೇಕಾದ ವಿವಿಧ ಪರಿಹಾರಗಳ ಅಂದರೆ ವಸತಿ, ಆಹಾರ, ಕುಡಿಯುವ ನೀರು, ವೈದ್ಯಕೀಯ ರಕ್ಷಣೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಪರಿಹಾರ ಶಿಬಿರಗಳಲ್ಲಿ ಒದಗಿಸಬೇಕಾದ ಕನಿಷ್ಟ ಅವಶ್ಯಕತೆಗಳನ್ನು, ವಿಧವೆಯರಿಗಾಗಿ ಮತ್ತು ಅನಾಥರಿಗೆ ಮಾಡಬೇಕಾದ ವಿಶೇಷ ಏರ್ಪಾಡಿಗಾಗಿ, ಜೀವ ಹಾನಿಯ ಕಾರಣದಿಂದಾಗಿ ಅನುಗ್ರಹ ಪೂರ್ವಕ ನೆರವನ್ನು ಮತ್ತು ಮನೆಗಳಿಗೆ ಉಂಟಾದ ಹಾನಿಗಾಗಿ ಮತ್ತು ಜೀವನೋಪಾಯ ಸಾಧನ ಮೂಲಗಳನ್ನು ಪೂರ್ವ ಸ್ಥಿತಿಗೆ ತರುವ ಬಗ್ಗೆ ನೆರವನ್ನು ಮತ್ತು ಅಗತ್ಯವಾಗಬಹುದಾದಂತಹ ಇತರ ಪರಿಹಾರಗಳನ್ನು ಒದಗಿಸುವುದಕ್ಕಾಗಿ ಸೂಕ್ತ ಮಾರ್ಗಸೂಚಿಗಳನ್ನು ನೀಡುವ ಅಧಿಕಾರವನ್ನು ಹೊಂದಿರುತ್ತದೆ. ಮಾತ್ರವಲ್ಲದೆ ವಿಪತ್ತಿನಿಂದ ಬಾಧಿತರಾದ ವ್ಯಕ್ತಿಗಳಿಗೆ ಸಂಬಂಧಪಟ್ಟಂತೆ ಸಾಲ ಮರುಪಾವತಿಯಲ್ಲಿ ರಿಯಾಯಿತಿಗಳನ್ನು ನೀಡುವ ಮತ್ತು ಅವರಿಗೆ ಹೊಸ ಸಾಲಗಳನ್ನು ಮಂಜೂರು ಮಾಡುವ ಅಧಿಕಾರವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಹೊಂದಿರುತ್ತದೆ.















































error: Content is protected !!
Scroll to Top