ಇರಾನ್ ಸರ್ಪಗಾವಲನ್ನು ಬೇಧಿಸಿ ಇಸ್ರೇಲ್ ಗೂಢಚಾರರು ನುಗ್ಗಿದ್ದು ಹೇಗೆ?
ನ್ಯೂಯಾರ್ಕ್: ಇಸ್ರೇಲ್ ತನ್ನ ಪರಮ ಶತ್ರುವಾಗಿರುವ ಹಮಾಸ್ ಉಗ್ರ ಸಂಘಟನೆಯ ಮುಖಂಡ ಇಸ್ಮಾಯಿಲ್ ಹನಿಯೆಯನ್ನು ಕೊಂದು ಸೇಡು ತೀರಿಸಿಕೊಂಡ ಘಟನೆ ಬಗ್ಗೆ ಈಗ ಜಗತ್ತಿನಾದ್ಯಂತ ಬಹಳ ಚರ್ಚೆಯಾಗುತ್ತಿದೆ. ಅಮೆರಿಕದಂಥ ದೇಶವೇ ಈ ಹತ್ಯೆಯನ್ನು ನೋಡಿ ಇಸ್ರೇಲ್ ಸಾಮರ್ಥ್ಯದ ಬಗ್ಗೆ ಅಚ್ಚರಿಪಟ್ಟಿದೆ. ಇಸ್ರೇಲ್ ಅಧಿಕೃತವಾಗಿ ಇಸ್ಮಾಯಿಲ್ ಹನಿಯೆ ಹತ್ಯೆ ಬಗ್ಗೆ ಇಷ್ಟರ ತನಕ ಯಾವುದೇ ಹೇಳಿಕೆ ನೀಡಿರದಿದ್ದರೂ ಇದು ಇಸ್ರೇಲ್ ಗೂಢಚಾರ ಪಡೆ ಮೊಸಾದ್‌ನ ಕಾರ್ಯಾಚರಣೆ ಎನ್ನುವುದರಲ್ಲಿ ಯಾರಿಗೂ ಎಳ್ಳಷ್ಟೂ ಅನುಮಾನ ಉಳಿದಿಲ್ಲ.
ಮಂಗಳವಾರ ನಡುರಾತ್ರಿ ಇಸ್ಮಾಯಿಲ್ ಹನಿಯೆ ತಂಗಿದ್ದ ಅತಿಥಿಗೃಹವನ್ನು ಸ್ಫೋಟಿಸಿ ಈ ಹತ್ಯೆ ನಡೆಸಲಾಗಿದೆ. ಸ್ಫೋಟದಲ್ಲಿ ಅವನ ಅಂಗರಕ್ಷಕನೂ ಸತ್ತಿದ್ದಾನೆ. ಆದರೆ ಗರಿಷ್ಠ ಭದ್ರತೆ ಇರುವ, ಇರಾನ್‌ನ ಇಸ್ಲಾಮಿಕ್ ರೆವುಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ ಪಡೆಯ ರಕ್ಷಣೆಯಲ್ಲಿದ್ದ ಇಸ್ಮಾಯಿಲ್ ಹನಿಯೆಯನ್ನು ಅಷ್ಟು ಸುಲಭವಾಗಿ ಸ್ಫೋಟದಲ್ಲಿ ಸಾಯಿಸಿದ್ದು ಹೇಗೆ ಎನ್ನುವುದು ಮಾತ್ರ ಇನ್ನೂ ಜಗತ್ತಿನ ಪಾಲಿಗೆ ನಿಗೂಢವಾಗಿ ಉಳಿದಿದೆ. ಆರಂಭದಲ್ಲಿ ಕ್ಷಿಪಣಿ ದಾಳಿ ಮಾಡಿ ಸಾಯಿಸಲಾಗಿತ್ತು ಎಂದು ಭಾವಿಸಲಾಗಿದ್ದರೂ ಕ್ಷಿಪಣಿ ಹಾರಿ ಬಂದಿರುವ ಯಾವ ಕುರುಹು ಕೂಡ ಸಿಕ್ಕಿಲ್ಲ.
ಹಾಗಾದರೆ ಹೇಗೆ ಈ ಹನಿಯಯನ್ನು ಇಷ್ಟು ಯೋಜನಾಬದ್ಧವಾಗಿ ಯಾವ ಸುಳಿವು ಸಿಗದಂತೆ ಹತ್ಯೆ ಮಾಡಲಾಯಿತು ಎನ್ನುವುದನ್ನು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಎಂಬ ಪತ್ರಿಕೆ ವಿವರಿಸಿದೆ. ಪತ್ರಿಕೆ ಹೇಳುವ ಪ್ರಕಾರ ಕೆಲವು ತಿಂಗಳು ಮೊದಲೇ ಮೊಸಾದ್ ಪಡೆ ಇರಾನ್‌ಗೆ ನುಸುಳಿ ಹನಿಯೆ ಹತ್ಯೆಗೆ ಹೊಂಚು ಹಾಕಿ ಕುಳಿತಿತ್ತು. ಹನಿಯೆ ಇರಾನ್‌ಗೆ ಬಂದಾಗ ಅವನಿಗೆ ಉಳಿದುಕೊಳ್ಳಲು ರಾಜಧಾನಿ ಟೆಹ್ರಾನ್‌ನ ಉತ್ತರಕ್ಕಿರುವ ಅತಿಥಿಗೃದಲ್ಲಿ ವ್ಯವಸ್ಥೆ ಮಾಡುವುದು ಮೊಸಾದ್‌ಗೆ ಗೊತ್ತಿತ್ತು.

ಇದು ಭದ್ರತಾ ಪಡೆಯವರ ಕಣ್ಣುತಪ್ಪಿಸಿ ಒಂದು ಸೊಳ್ಳೆಯೂ ಒಳ ನುಸುಳದಷ್ಟು ಸುರಕ್ಷಿತ ಬಂಗಲೆ. ಆದರೆ ಮೊಸಾದ್ ಗೂಢಚಾರರು ಹೇಗೋ ಇದರೊಳಗೆ ಪ್ರವೇಶ ಪಡೆದಿದ್ದರು. ಎರಡು ತಿಂಗಳು ಮೊದಲೇ ಬಂಗಲೆಯೊಳಗೆ ಪ್ರಬಲವಾದ ಬಾಂಬ್ ಬಚ್ಚಿಡಲಾಗಿತ್ತು. ಇಸ್ಮಾಯಿಲ್ ಹನಿಯೆ ಇದೇ ಅತಿಥಿಗೃಹದಲ್ಲಿ ತಂಗಿರುವುದನ್ನು ಖಚಿತಪಡಿಸಕೊಂಡ ಬಳಿಕ ರಿಮೋಟ್ ಕಂಟ್ರೋಲ್ ಮೂಲಕ ಬಾಂಬನ್ನು ಸ್ಫೋಟಿಸಲಾಗಿದೆ ಎಂಬ ಮಾಹಿತಿಯನ್ನು ಪತ್ರಿಕೆ ಬಹಿರಂಗಪಡಿಸಿದೆ. ಸ್ಫೋಟದ ಬಿರುಸಿಗೆ ಇಡೀ ಕಟ್ಟಡ ಅಲುಗಾಡಿದೆ, ಒಂದು ಗೋಡೆ ಕುಸಿದು ಬಿದ್ದಿದೆ ಮತ್ತು ಕಿಟಿಕಿ ಗಾಜುಗಳೆಲ್ಲ ಪಡಿಯಾಗಿವೆ. ಒಬ್ಬ ವ್ಯಕ್ತಿಯನ್ನು ಕೊಲ್ಲುವಷ್ಟು ಪ್ರಬಲ ಬಾಂಬನ್ನು ಒಳಗೆ ಅಡಗಿಸಿಡಲಾಗಿತ್ತು ಎನ್ನಲಾಗಿದೆ.ಒಟ್ಟಾರೆ ಹನಿಯೆ ಹತ್ಯೆ ಒಳ್ಳೆ ಇಂಗ್ಲಿಷ್ ಸಿನೆಮಾಗಳಷ್ಟೇ ರೋಚಕವಾಗಿ ನಡೆದುಹೋಗಿದೆ.























