ಕರಾವಳಿಯಲ್ಲಿ ಇನ್ನೂ ಮೂರು ದಿನ ಭಾರಿ ಮಳೆ

ಕಾರ್ಕಳ : ಕರಾವಳಿ ಭಾಗದಲ್ಲಿ ಇಂದೂ ಭಾರಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಗುಡ್ಡ ಕುಸಿತ, ಮರ ಉರುಳಿದ ಘಟನೆಗಳು ಸಂಭವಿಸಿವೆ. ಇನ್ನೂ ಮೂರು ದಿನ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದೆ. ಮುಂದಿನ ಮೂರು ದಿನ ಹೆಚ್ಚಿನ ಮಳೆಯಾಗಲಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದೆ. ಕಾರ್ಕಳ, ಹೆಬ್ರಿ, ಆಗುಂಬೆ, ಧರ್ಮಸ್ಥಳ, ಬೆಳ್ತಂಗಡಿ, ಉಪ್ಪಿನಂಗಡಿ, ಪುತ್ತೂರು, ಮಂಗಳೂರು, ಮಾಣಿ, ಕೋಟ, ಉಡುಪಿ, ಸುಳ್ಯ, ಶೃಂಗೇರಿ ಮತ್ತಿತರ ಭಾಗಗಳಲ್ಲಿ ಭಾರಿ ಮಳೆಯಾಗಿದೆ.

24 ಗಂಟೆಗಳಲ್ಲಿ ದಕ್ಷಿಣ ಕನ್ನಡದಲ್ಲಿ 107.3 ಮಿ. ಮೀ ಮಳೆಯಾಗಿದೆ. ಮೂಡುಬಿದಿರೆ ಮತ್ತು ಬೆಳ್ತಂಗಡಿಯಲ್ಲಿ ಕ್ರಮವಾಗಿ 198.4 ಮತ್ತು 150.1 ಮಿ. ಮೀ ಮಳೆಯಾಗಿದೆ. ಜಲಾನಯನ ಪ್ರದೇಶವಾದ ಬೆಳ್ತಂಗಡಿ ಮತ್ತು ಮೂಡುಬಿದಿರೆಯಲ್ಲಿ ಸುರಿದ ಮಳೆಯಿಂದಾಗಿ ನದಿಯು ಅನೇಕ ಪ್ರದೇಶಗಳಿಗೆ ಪ್ರವಾಹಕ್ಕೆ ಕಾರಣವಾಗಿದೆ. ಕನಿಷ್ಠ 10 ಸ್ಥಳಗಳಲ್ಲಿ 150 ಮಿ. ಮೀ ಗಿಂತ ಹೆಚ್ಚು ಮಳೆಯಾಗಿದೆ. ಮೂಡುಬಿದಿರೆ ಸಮೀಪದ ಶಿರ್ತಾಡಿಯಲ್ಲಿ ಅತಿ ಹೆಚ್ಚು 269 ಮಿ.ಮೀ ಮಳೆಯಾಗಿದೆ.

ಮೂಡುಬಿದಿರೆ ತಾಲೂಕಿನ ನೆಲ್ಲಿಕಾರ್ ಗ್ರಾಮದಲ್ಲಿ ಬುಧವಾರ ರಾತ್ರಿ ಮನೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಸಿ) ಮೂಲಗಳ ಪ್ರಕಾರ, ಮೃತ ಗೋಪಿ (56) ಮತ್ತು ಇತರ ಐವರು ಮಲಗಿದ್ದಾಗ ಮನೆ ಕುಸಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಗೋಪಿ ಅವರನ್ನು ಕಾರ್ಕಳದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಟುಂಬದ ಇತರ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.









































































































error: Content is protected !!
Scroll to Top