ನಮ್ಮ ದೇಶದಲ್ಲಿ ಈ ಹಿಂದೆ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂರು ಪ್ರಮುಖ ಕಾನೂನುಗಳು ಅಂದರೆ 1860ರಿಂದ ಬಳಕೆಯಲ್ಲಿದ್ದ ಭಾರತೀಯ ದಂಡ ಸಂಹಿತೆ (ಇಂಡಿಯನ್ ಪಿನಲ್ ಕೋಡ್), 1872ರಿಂದ ಬಳಕೆಯಲ್ಲಿದ್ದ ಭಾರತ ಸಾಕ್ಷ್ಯ ಅಧಿನಿಯಮ (ಇಂಡಿಯನ್ ಎವಿಡೆನ್ಸ್ ಆಕ್ಟ್) ಮತ್ತು 1973ರಿಂದ ಬಳಕೆಯಲ್ಲಿದ್ದ ದಂಡ ಪ್ರಕ್ರಿಯಾ ಸಂಹಿತೆ (ಕ್ರಿಮಿನಲ್ ಪ್ರೊಸೀಜರ್ ಕೋಡ್) ಈ ಮೂರು ಕಾನೂನುಗಳನ್ನು ಕೇಂದ್ರ ಸರಕಾರವು 2024ರ ಜು. 1 ರಿಂದ ಜಾರಿಗೆ ಬರುವಂತೆ ಬದಲಾಯಿಸಿ ಮೇಲ್ಕಾಣಿಸಿದ ಭಾರತೀಯ ದಂಡ ಸಂಹಿತೆ (ಇಂಡಿಯನ್ ಪಿನಲ್ ಕೋಡ್) ಯ ಬದಲು ಭಾರತೀಯ ನ್ಯಾಯ ಸಂಹಿತಾ 2023, ಭಾರತ ಸಾಕ್ಷ್ಯ ಅಧಿನಿಯಮ (ಇಂಡಿಯನ್ ಎವಿಡೆನ್ಸ್ ಆಕ್ಟ್) ರ ಬದಲು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಹಾಗೂ ದಂಡ ಪ್ರಕ್ರಿಯಾ ಸಂಹಿತೆ (ಕ್ರಿಮಿನಲ್ ಪ್ರೊಸೀಜರ್ ಕೋಡ್)ಯ ಬದಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಎಂಬ ಮೂರು ಕ್ರಿಮಿನಲ್ ಕಾನೂನುಗಳನ್ನು ದೇಶಾದ್ಯಂತ ಜಾರಿಗೆ ತಂದಿರುತ್ತದೆ.
ಈ ರೀತಿಯ ಕಾನೂನುಗಳ ಬದಲಾವಣೆಯ ಉದ್ದೇಶ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಿವಿಧ ಕ್ರಿಮಿನಲ್ ಅಪರಾಧಗಳನ್ನು ನಿಯಂತ್ರಿಸಿ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ದೇಶದ ನಾಗರಿಕರಿಗೆ ಸುರಕ್ಷೆಯನ್ನು ಒದಗಿಸುವ ದೃಷ್ಠಿಯಿಂದಾಗಿರುತ್ತದೆ. ಮೇಲ್ಕಾಣಿಸಿದ ಕಾನೂನುಗಳ ಪೈಕಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023ರ ಪ್ರಮುಖ ಅಂಶಗಳೇನೆಂದರೆ ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ಯಾವುದೇ ಅಪರಾಧಗಳಿಗೆ ಸಂಬಂಧಪಟ್ಟ ತನಿಖೆ ಸಂದರ್ಭದಲ್ಲಿ ಫೂರೆನ್ಸಿಕ್ ತಜ್ಞರು ಕಡ್ಡಾಯವಾಗಿ ಅಪರಾಧದ ಸ್ಥಳಗಳಿಗೆ ಭೇಟಿ ನೀಡಿ ಫೋರೆನ್ಸಿಕ್ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗುತ್ತದೆ. ಅಂತೆಯೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಪ್ರಯೋಗಗಳನ್ನು, ವಿಚಾರಣೆಗಳನ್ನು ಮತ್ತು ಪ್ರಕ್ರಿಯೆಗಳನ್ನು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನಡೆಸಬಹುದಾಗಿದೆ. ಈ ರೀತಿಯಾಗಿ ಪ್ರಕರಣದ ವಿಚಾರಣೆಯ ಸಂಧರ್ಭದಲ್ಲಿ ಆರೋಪಿಯು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡ ಸಂದರ್ಭದಲ್ಲಿ ಮತ್ತು ಆತನನ್ನು ವಾರಂಟ್ ಮೂಲಕ ಬಂಧಿಸುವ ಪ್ರಯತ್ನ ವಿಫಲವಾದಲ್ಲಿ ಆರೋಪಿತನ ಅನುಪಸ್ಥಿತಿಯಲ್ಲಿ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ನಡೆಸಿ ತೀರ್ಪನ್ನು ಪ್ರಕಟಿಸಬಹುದಾಗಿದೆ. ಬದಲಾದ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗೆ ಅಂದರೆ ಬಂಧಿಸಲ್ಪಟ್ಟ ಅಥವಾ ಬಂಧಿಸಲ್ಪಡದ ವ್ಯಕ್ತಿಯಿಂದ ಆತನ ಮಾದರಿ ಸಹಿ, ಕೈ ಬರಹ, ಬೆರಳಚ್ಚು ಮತ್ತು ಧ್ವನಿ ಮಾದರಿಗಳನ್ನು ನ್ಯಾಯಾಲಯಕ್ಕೆ ಒದಗಿಸುವಂತೆ ಸಂಬಂಧಪಟ್ಟ ನ್ಯಾಯಾಧೀಶರು ಆದೇಶಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಪ್ರಕರಣದ ವಿವಿಧ ಕಾರ್ಯವಿಧಾನಗಳಿಗೆ ಸಮಯವನ್ನು ಸೂಚಿಸಲಾಗಿದ್ದು ಪ್ರಕರಣಕ್ಕೆ ಸಂಬಂಧಪಟ್ಟ ಸಂತ್ರಸ್ತರನ್ನು ಪರೀಕ್ಷಿಸುವ ವೈದ್ಯರು ಕಡ್ಡಾಯವಾಗಿ ಏಳು ದಿನಗಳ ಒಳಗಾಗಿ ತನಿಖಾಧಿಕಾರಿಗೆ ತನ್ನ ವೈದ್ಯಕೀಯ ವರದಿಯನ್ನು ಸಲ್ಲಿಸಬೇಕಾಗಿರುತ್ತದೆ. ಪ್ರಕರಣದ ತನಿಖೆಯ ನಂತರ ವಕೀಲರು ತನ್ನ ವಾದವನ್ನು ಪೂರ್ಣಗೊಳಿಸಿದ ಮೂವತ್ತು ದಿನಗಳ ಒಳಗಾಗಿ ನ್ಯಾಯಾಲಯವು ತನ್ನ ತೀರ್ಪನ್ನು ನೀಡಬೇಕಾಗಿರುತ್ತದೆ. ಆದರೆ ಅವಶ್ಯಕವೆನಿಸಿದಲ್ಲಿ ಈ ಕಾಲಮಿತಿಯನ್ನು 60 ದಿವಸಗಳ ವರೆಗೆ ವಿಸ್ತರಿಸುವ ಅಧಿಕಾರವನ್ನು ನ್ಯಾಯಾಲಯವು ಹೊಂದಿರುತ್ತದೆ. ಅಕ್ರಮ ಗಣಿಗಾರಿಕೆ, ದುಡುಕು ಮತ್ತು ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಇತ್ಯಾದಿ ಅಪರಾದಗಳ ಕುರಿತು ಶಿಕ್ಷೆಯ ಮಟ್ಟವನ್ನು ಬದಲಾಯಿಸಿರುವುದರಿಂದ ಇಂತಹ ಅಪರಾಧಗಳಲ್ಲಿ ಭಾಗಿಯಾದ ವ್ಯಕ್ತಿಗಳಿಗೆ ಜಾಮೀನನ್ನು ನಿರಾಕರಿಸಬಹುದಾಗಿದೆ. ಅಂದರೆ ಆರೋಪಿತ ವ್ಯಕ್ತಿಗಳನ್ನು ಕಡ್ಡಾಯವಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆನ್ನುವ ನಿಯಮವಿರುವುದಿಲ್ಲ. ಪ್ರಕರಣದ ತನಿಖೆ ಸಂದರ್ಭ ದಾಖಲೆ ಅಥವಾ ವರದಿಯನ್ನು ಸಿದ್ದಪಡಿಸಿದ ತನಿಖಾಧಿಕಾರಿ ವರ್ಗಾವಣೆಯಿಂದಾಗಿ ಅಥವಾ ನಿವೃತ್ತಿಯಿಂದಾಗಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಲಭ್ಯವಿಲ್ಲದಿದ್ದರೆ ಆತನ ಉತ್ತರಾಧಿಕಾರಿಯನ್ನು ವಿಚಾರಿಸುವ ಮೂಲಕ ಪ್ರಕರಣವನ್ನು ತ್ವರಿತವಾಗಿ ವಿಲೇವಾರಿ ಮಾಡಬಹುದಾಗಿದೆ. ಕ್ರಿಮಿನಲ್ ಚಟುವಟಿಕೆಗಳ ಮೂಲಕ ನೇರವಾಗಿ ಅಥವಾ ಪರೋಕ್ಷವಾಗಿ ಆರೋಪಿತ ವ್ಯಕ್ತಿಯು ಹೊಂದಬಹುದಾದ ಯಾವುದೇ ಸ್ತಿರಾಸ್ಥಿಯನ್ನು ಸರಕಾರವು ತನ್ನ ವಶಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಾಹಣೆ ಮತ್ತು ಕಲ್ಯಾಣ ಕಾಯ್ದೆ 2007ರ ಪ್ರಕರಣದಲ್ಲಿ ಮಾಡಿದ ಆದೇಶ ಪ್ರಕಾರ ವಸೂಲು ಮಾಡಬೇಕಾಗಿರುವ ಹಣದ ವಸೂಲಾತಿಗಾಗಿ ಹಣ ಪಾವತಿಸಬೇಕಾಗಿರುವ ವ್ಯಕ್ತಿಯ ವಿರುದ್ಧ ವಾರಂಟನ್ನು ಹೊರಡಿಸಿ, ಆತನನ್ನು ಬಂಧಿಸಿ ಹಣ ಪಾವತಿ ಮಾಡುವ ತನಕ ಆತನಿಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.























