ಮೂಡುಬಿದಿರೆ : ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಜೂ. 20ರಂದು ಮೂಡುಬಿದಿರೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ಓರಿಯಂಟೇಶನ್ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಟ್ರಸ್ಟಿಗಳು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲ ಡಾ. ಎಸ್. ಎನ್. ವೆಂಕಟೇಶ್ ನಾಯಕ್, ವಿದ್ಯಾರ್ಥಿಗಳು ಎಸೆಸ್ಸೆಲ್ಸಿಯಲ್ಲಿ ಪಡೆದ ಅಂಕದ ಆಧಾರದ ಮೇಲೆ ಕಾಲೇಜುಗಳಿಗೆ ದಾಖಲಿಸಿಕೊಳ್ಳುವುದು ತಪ್ಪು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ದಾಖಲು ಮಾಡಿ ಉತ್ತಮ ಫಲಿತಾಂಶ ನೀಡುವುದು ದೊಡ್ಡ ಸಾಹಸವಲ್ಲ. ಎಲ್ಲಾ ರೀತಿಯ ವಿದ್ಯಾರ್ಥಿಗಳನ್ನು ದಾಖಲಿಸಿ ಎಲ್ಲರೂ ಉತ್ತಮ ಅಂಕಗಳಿಸುವಂತೆ ಮಾಡುವುದು ನಿಜವಾದ ಸಾಧನೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೂ ಉತ್ತಮ ತರಬೇತಿ ನೀಡಿದಲ್ಲಿ ಅವರು ಕೂಡ ಒಳ್ಳೆಯ ಅಂಕ ಪಡೆದು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಿದರು.
ನಾವು ಆರು ಜನ ಸೇರಿ ಈ ಕಾಲೇಜನ್ನು ಪ್ರಾರಂಭಿಸಿದ್ದೆವು. ನಾವೆಲ್ಲರೂ ಉಪನ್ಯಾಸಕರೇ ಹೊರತು ವ್ಯವಹಾರಗಾರರಲ್ಲ. ನಮ್ಮಲ್ಲಿಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದೇ ನಮ್ಮ ಉದ್ದೇಶವಾಗಿದೆ. ಯಾವತ್ತಿಗೂ ಎಸೆಸ್ಸೆಲ್ಸಿ ಅಂಕವನ್ನು ನೋಡಿ ದಾಖಲಾತಿ ಮಾಡಿಕೊಂಡಿಲ್ಲ ಎಲ್ಲ ರೀತಿಯ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಿ ಉತ್ತಮ ಫಲಿತಾಂಶ ಪಡೆದಿದ್ದೇವೆ ಎಂದು ವೆಂಕಟೇಶ್ ಅಭಿಪ್ರಾಯಪಟ್ಟರು.

ಟ್ರಸ್ಟಿ ಶರತ್ ಗೋರೆ ಮಾತನಾಡಿ, ವಿದ್ಯಾರ್ಥಿಗಳು ನಿರ್ಧಿಷ್ಟ ಗುರಿ ಹೊಂದಿರಬೇಕು. ನಂತರ ಸತತ ಪ್ರಯತ್ನದಿಂದ ಆ ಗುರಿಯನ್ನು ಮುಟ್ಟಲು ಪ್ರಯತ್ನಿಸಬೇಕು. ಹಾಗಿದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದ ಅವರು ನೀಟ್, ಜೆಇಇ, ಸಿಇಟಿ, ಎನ್ಡಿಎ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು ಮತ್ತು ಪರೀಕ್ಷೆಗಳು ಹೇಗೆ ನಡೆಯತ್ತವೆ ಎಂಬುದರ ಕುರಿತು ಮಾಹಿತಿ ನೀಡಿದರು.
ಟ್ರಸ್ಟಿ ಯೋಗೇಶ್ ಬೆಡೇಕರ್ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಮಾತನಾಡುತ್ತಾ ವಿದ್ಯಾರ್ಥಿಗಳು ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಒತ್ತು ಕೊಡಬೇಕು. ಮಾನಸಿಕ ಒತ್ತಡಗಳಿಗೆ ಒಳಗಾಗದಂತೆ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಕೊಳ್ಳಬಹುದು ಎಂದರು.
ಟ್ರಸ್ಟಿ ಚಂದ್ರಶೇಖರ ರಾಜೇ ಅರಸ್ ಮಾತನಾಡುತ್ತಾ ಸುಮಾರು 25 ವರ್ಷಗಳಿಂದಲೇ ಉತ್ತಮ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳು ಮೂಡುಬಿದಿರೆಯಲ್ಲಿ ಇವೆ. ಇವೆಲ್ಲದರ ನಡುವೆ ಕಳೆದೆರಡು ವರ್ಷದ ಹಿಂದೆ ಆರಂಭಿಸಿದ ನಮ್ಮ ಸಂಸ್ಥೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉತ್ತಮ ಕಾಲೇಜೆಂದು ಹೆಸರು ಮಾಡುತ್ತಿರುವುದು ಸಂತಾಸದಾಯಕ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿ ಸುಭಾಷ್ ಜಾ ವಹಿಸಿದ್ದರು. ವೇದಿಕೆಯಲ್ಲಿ ಟ್ರಸ್ಟಿ ಮೆಹಬೂಬ ಬಾಷಾರವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಅಪರ್ಣ ಕಾರ್ಯಕ್ರಮ ನಿರೂಪಿಸಿ, ಆಶಿಕಾಕಿರಣ್ ವಂದಿಸಿದರು.
































































