ಮುಂದಿನ ತಿಂಗಳಿಂದ ಪ್ರಖರ ಹೆಡ್‌ಲೈಟ್‌ಗಳ ವಿರುದ್ಧ ಅಭಿಯಾನ
ಬೆಂಗಳೂರು: ವಾಹನಗಳ ಪ್ರಖರ ಬೆಳಕು ಬೀರುವ ಹೆಡ್‌ಲೈಟ್‌ಗಳ ವಿರುದ್ಧ ಕ್ರಮ, ಕೈಗೊಳ್ಳಲು ಸರಕಾರ ಆದೇಶಿಸಿದೆ. ಕಾರು, ಬೈಕ್ ಹಾಗೂ ಇತರ ವಾಹನಗಳಿಗೆ ಕಣ್ಣುಕುಕ್ಕುವ ಎಲ್ಇಡಿ ಲೈಟ್ ಹಾಕಿಸಿಕೊಳ್ಳುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಆದರೆ, ಇದರಿಂದ ಎದುರಿನಿಂದ ಬರುವ ವಾಹನಗಳೀಗೆ ಚಲಾಯಿಸುವವರಿಗೆ ವಿಪರೀತ ತೊಂದರೆಯಾಗಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಇದರ ವಿರುದ್ಧ ಕರ್ನಾಟಕ ಸಂಚಾರ ಪೊಲೀಸರು ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಮಾಲೀಕರ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದ್ದಾರೆ. ಜುಲೈನಲ್ಲಿ ವಿಶೇಷ ಕಾರ್ಯಾಚರಣೆಯೂ ನಡೆಯಲಿದೆ.
ರಸ್ತೆ ಅಪಘಾತಗಳು ಮತ್ತು ಅದರಿಂದಾಗುವ ಸಾವು-ನೋವುಗಳನ್ನು ತಪ್ಪಿಸಲು ಕೇಂದ್ರ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಲೈಟ್ಗಳನ್ನು ಮಾತ್ರ ವಾಹನಗಳಲ್ಲಿ ಅಳವಡಿಸಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ ಎಂದು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ನಾವು ವಾಹನಗಳಲ್ಲಿ ಎಲ್ಇಡಿ ಲೈಟ್ಗಳನ್ನು ನಿಷೇಧಿಸುತ್ತಿಲ್ಲ. ಆದರೆ, ವಾಹನಗಳಲ್ಲಿ ಕಣ್ಣುಕುಕ್ಕುವಂಥ ಲೈಟ್ಗಳನ್ನು ಬಳಸುತ್ತಿದ್ದರೆ ಮತ್ತು ವಾಹನಗಳಲ್ಲಿ ಅಳವಡಿಸಿರುವ ಲೈಟ್ಗಳು ಇತರ ಚಾಲಕರಿಗೆ ತೊಂದರೆಯನ್ನು ಉಂಟುಮಾಡುವಂತೆ ಇದ್ದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸುತ್ತಿದ್ದೇವೆ. ಎಲ್ಇಡಿ ಲೈಟ್ಗಳು ಇತರ ಚಾಲಕರಿಗೆ ಸಮಸ್ಯೆ ಉಂಟುಮಾಡುತ್ತವೆ. ಹೀಗಾಗಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅದು ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.
ವಾಹನಗಳಲ್ಲಿ ಕೇಂದ್ರ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ ನಮೂದಿಸಿರುವ ಮಾನದಂಡದಂತೆ ಲೈಟ್ಗಳನ್ನು ಅಳವಡಿಸುವ ಕುರಿತು ಸಚಾರಿ ಪೊಲೀಸರಿಗೆ ಆದೇಶ ಹೊರಡಿಸಲಾಗಿದೆ. ಭಾರಿ ಗಾತ್ರ ವಾಹನಗಳಾದ ಲಾರಿ, ಟ್ರಕ್, ಬಸ್ ಮುಂತಾದವುಗಳು ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣುಕುಕ್ಕುವ ಎಲ್‌ಇಡಿ ದೀಪಗಳನ್ನು ತಮ್ಮ ವಾಹನಗಳಲ್ಲಿ ಅಳವಡಿಸುತ್ತಿರುವುದರಿಂದ ಇತರ ವಾಹನ ಚಾಲಕರಿಗೆ ವಾಹನ ಚಲಾಯಿಸಲು ತೊಂದರೆಯಾಗುತ್ತದೆ. ಎಲ್ಲಾ ವಾಹನ ಮಾಲಕರು ತಮ್ಮ ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ನಮೂದಿಸಿರುವ ಮಾನದಂಡಂದಂತೆ ಹೆಡ್‌ಲೈಟ್‌ಗಳನ್ನೇ ಅಳವಡಿಸಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ವಾಹನ ಸವಾರರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಕಲಂ 177 ರಡಿ ಪ್ರಕರಣಗಳನ್ನು ದಾಖಲಿಸಬಹುದಾಗಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ವಾಹನಗಳಲ್ಲಿ ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣುಕುಕ್ಕುವ ಎಲ್‌ಇಡಿ ದೀಪಗಳನ್ನು ಅಳವಡಿಸಿರುವ ವಾಹನ ಚಾಲಕರ ವಿರುದ್ಧ ಜುಲೈ ತಿಂಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಪ್ರಕರಣಗಳನ್ನು ದಾಖಲಿಸಿ, ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕು ಎಂದೂ ಸೂಚನೆ ನೀಡಲಾಗಿದೆ.































