ತೀವ್ರ ಸೆಕೆಯಿಂದಾಗಿ 550ಕ್ಕೂ ಅಧಿಕ ಹಜ್‌ ಯಾತ್ರಿಕರು ಸಾವು

ಹೊಸದಿಲ್ಲಿ : ಈ ವರ್ಷದ ಹಜ್‌ ಯಾತ್ರೆ ಸಂದರ್ಭದಲ್ಲಿ ಭಾರಿ ಸೆಕೆಯಿಂದಾಗಿ 550ಕ್ಕೂ ಅಧಿಕ ಯಾತ್ರಿಕರು ಮೃತಪಟ್ಟಿದ್ದಾರೆಂದು ವರದಿಯೊಂದು ತಿಳಿಸಿದೆ. ಈಜಿಪ್ಟ್‌, ಜೋರ್ಡಾನ್‌, ಇಂಡೋನೇಷ್ಯಾ, ಇರಾನ್‌ ಮತ್ತು ಸೆನೆಗಲ್‌ ದೇಶದ ಹಜ್‌ ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಷ್ಣ ಮಾರುತ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ಈಜಿಪ್ಟಿಯನ್ನರೇ 323 ಮಂದಿಯಿದ್ದಾರೆ ಎಂದು ಸೌದಿ ಅರೆಬಿಯದ ಅಧ್ಯಯನ ವರದಿ ತಿಳಿಸಿದೆ.
ಈ ವರ್ಷ ಮರುಭೂಮಿ ದೇಶವಾದ ಸೌದಿಯಲ್ಲಿ ಉಷ್ಣತೆ ತೀವ್ರವಾಗಿ ಹೆಚ್ಚಳವಾಗಿದ್ದು, 51 ಸೆಲ್ಶಿಯಸ್‌ ಡಿಗ್ರಿ ದಾಟಿದೆ. ಹಜ್‌ ಯಾತ್ರೆಯ ವಿಧಿವಿಧಾನಗಳನ್ನು ನಡೆಸುವ ಪ್ರದೇಶಗಳಲ್ಲಿ 0.4 ಸೆಲ್ಶಿಯಸ್‌ ಡಿಗ್ರಿ ಉಷ್ಣತೆ ಹೆಚ್ಚಳವಾಗಿದೆ. ಇದು ಯಾತ್ರಿಕರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎನ್ನಲಾಗಿದೆ.
ಈಜಿಪ್ಟಿನ ಎಲ್ಲ 323 ಯಾತ್ರಿಕರು ಸೆಕೆಯಿಂದಾಗಿಯೇ ಸಾವಿಗೀಡಾಗಿದ್ದಾರೆ. ಜೋರ್ಡಾನಿನ 60ಕ್ಕೂ ಅಂದಿಕ ಮಂದಿ ಉಷ್ಣಾಘಾತಕ್ಕೆ ಬಲಿಯಾಗಿದ್ದಾರೆ. ಹಜ್‌ ಯಾತ್ರೆಯ ಕೇಂದ್ರ ಸ್ಥಳವಾಗಿರುವ ಮಕ್ಕಾದ ಗ್ರ್ಯಾಂಡ್‌ ಮಸ್ಜಿದ್‌ನಲ್ಲಿ ಸೋಮವಾರ 51.8 ಸೆಲ್ಶಿಯಸ್‌ ಡಿಗ್ರಿ ತಾಪಮಾನವಿತ್ತು. ಹಜ್‌ ಯಾತ್ರೆ ಸಂದರ್ಭದಲ್ಲಿ ಹಲವು ವಿದೇಶಿ ಯಾತ್ರಿಕರು ನಾಪತ್ತೆಯಾಗಿರುವ ಕುರಿತು ಕೂಡ ವರದಿಯಾಗಿದೆ. ಸೌದಿಯ ವಿವಿಧ ಆಸ್ಪತೆಗಳಲ್ಲಿ ಉಷ್ಣಾಘಾತಕ್ಕೆ ಒಳಗಾಗಿರುವ 2000ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಯಾತ್ರಿಕರಿಗೆ ಸ್ವಯಂಸೇವಕರು ಸೆಕೆಯಿಂದ ಪಾರಾಗಲು ತಣ್ಣಗಿನ ನೀರಿನ ಬಾಟಲಿ, ಚಾಕೊಲೇಟ್‌ ಇತ್ಯಾದಿಗಳನ್ನು ನೀಡುತ್ತಿದ್ದಾರೆ. ಅನೇಕ ಮಂದಿ ಬಿರುಬಿಸಿಲಿನ ಹೊಡೆತ ತಾಳಲಾಗದೆ ತಣ್ಣಗಿನ ನೀರನ್ನು ತಲೆಮೇಲೆ ಸುರಿದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಸೌದಿಯಂಥ ದೇಶದಲ್ಲಿ ದೀರ್ಘ ಸಮಯ ಜನ ಹವಾನಿಯಂತ್ರಣ ವ್ಯವಸ್ಥೆಯಿಂದ ಹೊರಗಿದ್ದರೆ ಅಸ್ವಸ್ಥರಾಗುತ್ತಾರೆ.



















































































error: Content is protected !!
Scroll to Top