ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನಾಗಪ್ರಸನ್ನ ದಾಖಲೆ
ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಒಂದು ದಿನದ ಕಲಾಪದ ಅವಧಿಯಲ್ಲಿ 608 ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಕರ್ನಾಟಕ ಹೈಕೋರ್ಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಬಾಕಿ ಪ್ರಕರಣಗಳ ವಿಲೇವಾರಿಯಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಜೂನ್ 18ರಂದು ಮಹತ್ವದ ಮೈಲುಗಲ್ಲು ಸಾಧಿಸಿದ್ದಾರೆ.
ಒಂದೇ ದಿನ 600 ಅರ್ಜಿಗಳ ವಿಚಾರಣೆ ನಡೆಸಿದ್ದಾರೆ. ಈ ಪೈಕಿ ಹಲವು ಪ್ರಕರಣಗಳಲ್ಲಿ ಮಧ್ಯಂತರ ಆದೇಶ ಪ್ರಕಟಿಸಿರುವ ನ್ಯಾಯಮೂರ್ತಿಗಳು ಕೆಲ ಅರ್ಜಿಗಳಲ್ಲಿ ಅಂತಿಮ ಆದೇಶವನ್ನೂ ನೀಡಿದ್ದಾರೆ. ಈ ಹಿಂದೆಯೂ ಬಾಕಿ ಪ್ರಕರಣಗಳ ವಿಲೇವಾರಿಯಲ್ಲಿ ನ್ಯಾಯಮೂರ್ತಿ ಎಂ..ನಾಗಪ್ರಸನ್ನ ಹಲವು ವಿಕ್ರಮಗಳನ್ನು ಸಾಧಿಸಿದ್ದಾರೆ.
2023ರ ಜೂ.12 ರಂದು ಒಂದೇ ದಿನ 522 ಪ್ರಕರಣಗಳ ವಿಚಾರಣೆ ನಡೆಸಿದ್ದರು. 2023ರ ಡಿ.20ರಂದು ಒಂದೇ ದಿನ 50 ತೀರ್ಪುಗಳನ್ನು ಪ್ರಕಟಿಸಿದ್ದರು. ಕೆಲ ತಿಂಗಳ ಹಿಂದೆ ಒಂದೇ ದಿನ 480 ಪ್ರಕರಣಗಳ ಪಟ್ಟಿ ಮಾಡಿಸಿ ಅಷ್ಟೂ ಪ್ರಕರಣಗಳ ವಿಚಾರಣೆ ನಡೆಸಿದ್ದರು. ಬಾಕಿ ಪ್ರಕರಣಗಳ ವಿಲೇವಾರಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ನ್ಯಾಯಮೂರ್ತಿಗಳು ಪ್ರಕರಣವನ್ನು ಶೀಘ್ರವಾಗಿ ಗ್ರಹಿಸಿ ತಕ್ಷಣ ಆದೇಶ ಪ್ರಕಟಿಸುವುದರಲ್ಲಿ ಸಿದ್ಧಹಸ್ತರೆಂದು ಹೈಕೋರ್ಟ್ ವಕೀಲರ ವಲಯದಲ್ಲಿ ಖ್ಯಾತಿ ಗಳಿಸಿದ್ದಾರೆ.
ಈಗ ಕ್ರಿಮಿನಲ್ ಪ್ರಕರಣ ರದ್ದು ಕೋರಿರುವ ಅರ್ಜಿಗಳ ವಿಚಾರಣೆಯ ಹೊಣೆ ಹೊತ್ತಿರುವ ನ್ಯಾಯಮೂರ್ತಿ ಇಂದು ಒಂದೇ ದಿನ 600 ಪ್ರಕರಣಗಳ ವಿಚಾರಣೆ ನಡೆಸುವ ಮೂಲಕ ತ್ವರಿತ ನ್ಯಾಯದಾನದ ಹಾದಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು 2019ರ ನವೆಂಬರ್ 26ರಂದು ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು 2021ರ ಸೆಪ್ಟಂಬರ್ 8ರಂದು ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.










































