ಮುದ್ರಾಡಿ : ಕಣ್ಣಿನ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ

ಹೆಬ್ರಿ : ಸದೃಢ ಆರೋಗ್ಯವಿದ್ದಾಗ ನೆಮ್ಮದಿಯ ಬದುಕು ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಆರೋಗ್ಯ ಶಿಬಿರಗಳಲ್ಲಿ ಪಾಲ್ಗೊಂಡು ಅದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ವೈದ್ಯ ಡಾ.ಎಂ.ಎಸ್.ರಾವ್ ಅಭಿಪ್ರಾಯಪಟ್ಟರು.
ಅವರು ಮುದ್ರಾಡಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.) ಹೆಬ್ರಿ ತಾಲೂಕು ಮಹಿಳಾ ಜ್ಞಾನವಿಕಾಸ ಮತ್ತು ಎಸ್. ಡಿ.ಎಂ. ಆಯುರ್ವೇದ ಆಸ್ಪತ್ರೆ ಕುತ್ಪಾಡಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕಣ್ಣಿನ ಮತ್ತು ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿ ಕುತ್ಪಾಡಿಯ ವೈದ್ಯೆ ಡಾ. ಗಾಯತ್ರಿ ಮಾತನಾಡಿ, ಪ್ರತಿಯೊಬ್ಬರೂ ವರ್ಷಕೊಮ್ಮೆಯಾದರು ಕಣ್ಣಿನ ತಪಾಸಣೆಯನ್ನು ಮಾಡಿಕೊಳ್ಳಬೇಕು. ಮಧುಮೇಹ ಕಾಯಿಲೆ ಹಾಗೂ ಧೂಮಪಾನ ಸೇವನೆ ಮಾಡುವವರಿಗೆ ಕಣ್ಣಿನ ಸಮಸ್ಯೆ ಬೇಗ ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ವೈದ್ಯರ ಸಲಹೆ ಪಡೆಯದೆ ಸ್ವಯಂಕೃತವಾಗಿ ಔಷಧಿ ತೆಗೆದುಕೊಳ್ಳುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ. ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಿ ಎಂದು ಹೇಳಿದರು.

ಕಿರಿಯ ಆರೋಗ್ಯ ಸಹಾಯಕಿ ಉಷಾ ಹೆಗ್ಡೆ ಮಾತನಾಡಿ, ಮಳೆಗಾಲ ಸಮೀಪಿಸುತ್ತಿರುವ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಂಡು ಯಾವುದೇ ರೀತಿಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಮಲೇರಿಯಾ ಸಹಿತ ವಿವಿಧ ಸಾಂಕ್ರಾಮಿಕ ರೋಗಗಳು ಹರಡದಂತೆ ಜಾಗೃತೆ ವಹಿಸಬೇಕು ಎಂದರು.

ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೈದ್ಯರಾದ ಶಬರೀಶ್, ಮುದ್ರಾಡಿ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಎಂ. ಮಂಜುನಾಥ್ ಪೂಜಾರಿ, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಗಣಪತಿ ಎಂ., ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ಮುದ್ರಾಡಿ ವಲಯಾಧ್ಯಕ್ಷ ರತ್ನಾಕರ ಪೂಜಾರಿ ಮಾತಿಬೆಟ್ಟು, ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ನಿವೃತ್ತ ಹಿರಿಯ ಆರೋಗ್ಯ ಅಧಿಕಾರಿ ಬಾಲಚಂದ್ರ ಎಂ., ಮುದ್ರಾಡಿ ವಲಯ ಮೇಲ್ವಿಚಾರಕಿ ಸುಮಲತಾ, ವರಂಗ ಮತ್ತು ಮಾತಿಬೆಟ್ಟು ಒಕ್ಕೂಟದ ಅಧ್ಯಕ್ಷರಾದ ರಮೇಶ್ ಕುಲಾಲ್ ಅಡ್ಕ ಮತ್ತು ಭೋಜು ಪೂಜಾರಿ ಮಾತಿಬೆಟ್ಟು, ಮಾಜಿ ವಲಯಾಧ್ಯಕ್ಷ ಸುಧಾಕರ್ ಶೆಟ್ಟಿ ಬಲ್ಲಾಡಿ, ಬಲ್ಲಾಡಿ ಒಕ್ಕೂಟದ ಮಾಜಿ ಅಧ್ಯಕ್ಷ ಹರೀಶ್ ಕುಲಾಲ್, ಸೇವಾ ಪ್ರತಿನಿಧಿಗಳಾದ ವನಿತಾ, ಸಂಧ್ಯಾ, ವಾಣಿ, ಚಿತ್ರಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 45 ವರ್ಷಗಳ ಕಾಲ ನಿಸ್ವಾರ್ಥ ಸೇವೆಗೈದ ಡಾ. ಎಂ. ಎಸ್. ರಾವ್ ಅವರನ್ನು ಗ್ರಾಮಾಭಿವೃದ್ಧಿ ಮತ್ತು ಜ್ಞಾನವಿಕಾಸ ಯೋಜನೆಯ ವತಿಯಿಂದ ಸನ್ಮಾನಿಸಲಾಯಿತು. ಸೇವಾಪ್ರತಿನಿಧಿ ಮಮತಾ ಸ್ವಾಗತಿಸಿದರು. ಹೆಬ್ರಿ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸುಮಾರು ನೂರಕ್ಕೂ ಹೆಚ್ಚು ಮಂದಿ ಕಣ್ಣಿನ ತಪಾಸಣೆ, ರಕ್ತದೊತ್ತಡ, ಮಧುಮೇಹ ಸಹಿತ ವಿವಿಧ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು.





























































































































error: Content is protected !!
Scroll to Top