ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟಿಗರ ಜೆರ್ಸಿಯಲ್ಲಿ ಕನ್ನಡದ ಕಂಪು
ಬೆಂಗಳೂರು : ಅಮೆರಿಕದಲ್ಲಿ ಜೂನ್ 1ರಿಂದ ಆರಂಭವಾಗಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟಿಗರ ಜೆರ್ಸಿಯಲ್ಲಿ ಭಾರತೀಯ ಭಾಷೆಯೊಂದನ್ನು ಪ್ರದರ್ಶಿಸಲಾಗುವುದು. ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ನ ಆಟಗಾರರು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಕೆಎಂಎಫ್ನ ನಂದಿನಿಯ ಲಾಂಛನವಿರುವ ಜೆರ್ಸಿಯನ್ನು ಧರಿಸಿ ಕಣಕ್ಕಿಳಿಯಲಿದ್ದಾರೆ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಲದ (ಕೆಎಂಎಫ್) ನಂದಿನಿ ಲಾಂಛನವಿರುವ ಟಿ20 ತಂಡದ ಜರ್ಸಿಯನ್ನು ಕ್ರಿಕೆಟ್ ಸ್ಕಾಟ್ಲೆಂಡ್ ಬುಧವಾರ ಜಂಟಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದೆ. 2024ರ T20 ವಿಶ್ವಕಪ್ನಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡುವುದಾಗಿ ಏಪ್ರಿಲ್ 21 ರಂದು ಕೆಎಂಎಫ್ ಘೋಷಿಸಿತ್ತು. ಬುಧವಾರ ಕೆಎಂಎಫ್ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಎರಡೂ ತಂಡಗಳ ಆಟಗಾರರು ನಂದಿನಿ ಲಾಂಛನವಿರುವ ಜೆರ್ಸಿಯನ್ನು ವಾಸ್ತವಿಕವಾಗಿ ಪ್ರದರ್ಶಿಸಿದರು.































































