ಜಾಮೀನಿಯ (ಬೈಲೇಬಲ್) ಅಪರಾಧದ ಪ್ರಕರಣದ ಆರೋಪ ಹೊಂದಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಸಂದರ್ಭದಲ್ಲಿ ಆತ ತನ್ನ ಬಿಡುಗಡೆಗಾಗಿ ಜಾಮೀನನ್ನು ನೀಡಲು ಸಿದ್ದನಾಗಿದ್ದರೆ, ಪೊಲೀಸರು ಆತನಿಂದ ಮತ್ತು ಸಂದರ್ಭಾನುಸಾರಕ್ಕೆ ಅನುಗುಣವಾಗಿ ಆತನ ಜಾಮೀನುದಾರನಿಂದ ಜಾಮೀನು (ಮುಚ್ಚಳಿಕೆ ಪತ್ರ) ಪಡಕೊಂಡು ಆತನನ್ನು ಪೊಲೀಸ್ ಠಾಣೆಯಲ್ಲಿಯೇ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿರುತ್ತದೆ. ಈ ರೀತಿಯಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ವ್ಯಕ್ತಿಗೆ ನಂತರ ನ್ಯಾಯಾಲಯದಿಂದ ಸಮನ್ಸ್ ಜ್ಯಾರಿಯಾದಾಗ ಸಮನ್ಸ್ನಲ್ಲಿ ನಿಗಧಿಪಡಿಸಿದ ದಿನಾಂಕದಂದು ಆತ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಪರವಾಗಿ ಪ್ರತ್ಯೇಕ ಜಾಮೀನು ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಒಂದು ವೇಳೆ ಯಾವುದೇ ಸಕಾರಣದಿಂದ ಪೊಲೀಸರು ಆರೋಪಿತ ವ್ಯಕ್ತಿಯನ್ನು ದಸ್ತಗಿರಿ ಮಾಡಿದ ನಂತರ ನೇರವಾಗಿ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಸಂದರ್ಭದಲ್ಲಿ ಆತ ತನ್ನ ಬಿಡುಗಡೆಗಾಗಿ ನ್ಯಾಯಾಲಯಕ್ಕೆ ಜಾಮೀನನ್ನು ನೀಡಲು ಸಿದ್ಧನಿದ್ದಲ್ಲಿ ನ್ಯಾಯಾಲಯವು ಆತನನ್ನು ಸ್ವಂತ ಜಾಮೀನಿನ ಮೇಲೆ ಅಥವಾ ಆತನ ಪರ ಜಾಮೀನುದಾರನಿಂದ ಸೂಕ್ತ ಜಾಮೀನು (ಮುಚ್ಚಳಿಕೆ ಪತ್ರ) ಪಡಕೊಂಡು ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿದೆ. ಮಾತ್ರವಲ್ಲದೇ ನ್ಯಾಯಾಲಯವು ಆರೋಪಿತ ವ್ಯಕ್ತಿಯ ಪರವಾಗಿ ಜಾಮೀನು ಪಡಕೊಳ್ಳುವ ಸಂದರ್ಭದಲ್ಲಿ ಜಾಮೀನುದಾರರ ಬದಲು ನಗದು ಠೇವಣಿಯನ್ನು ಪಡೆದು ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿರುತ್ತದೆ. ಜಾಮೀನು ನೀಡಬಹುದಾದಂತಹ ಜಾಮೀನಿಯ ಅಪರಾಧಗಳಲ್ಲಿ, ನ್ಯಾಯಾಧೀಶರು ಆರೋಪಿಗೆ ಜಾಮೀನು ನೀಡುವಾಗ ಪೋಲೀಸರ ಮುಂದೆ ಹಾಜರಾಗಬೇಕೆಂಬ ಷರತ್ತನ್ನು ವಿಧಿಸಲು ಬರುವುದಿಲ್ಲ. ಜಾಮೀನಿಯ ಅಪರಾಧದಲ್ಲಿ ಬಂಧಿಸಲ್ಪಟ್ಟ ಆರೋಪಿತ ವ್ಯಕ್ತಿ ತನ್ನ ಬಿಡುಗಡೆಗಾಗಿ ಜಾಮೀನು ನೀಡಲು ಸಿದ್ಧನಿರುವ ಸಂದರ್ಭದಲ್ಲಿ ಆತನ ಬಿಡುಗಡೆಗೆ ನಿರಾಕರಿಸಿದರೆ ಮತ್ತು ಆತನನ್ನು ಅನಾವಶ್ಯಕವಾಗಿ ಬಂಧನದಲ್ಲಿರಿಸಿಕೊಂಡರೆ ಆತನ ಬಂಧನವು ಅಕ್ರಮ ಮತ್ತು ಕಾನೂನು ಬಾಹಿರವಾದ ಬಂಧನವಾಗುತ್ತದೆ ಹಾಗೂ ಯಾವ ಪೋಲೀಸ್ ಅಧಿಕಾರಿ ಈ ರೀತಿಯಾಗಿ ಬಂಧನದಲ್ಲಿರಿಸಲು ಕಾರಣಕರ್ತನಾಗುತ್ತಾನೋ, ಆತ ಭಾರತ ದಂಡ ಸಂಹಿತೆಯ ಪ್ರಕರಣದ ಅನ್ವಯ ಅಕ್ರಮ ಬಂಧನದ ಶಿಕ್ಷಾರ್ಹ ಅಪರಾಧಕ್ಕೆ ಗುರಿಯಾಗಬೇಕಾಗುತ್ತದೆ.
ಜಾಮೀನಿಯವಲ್ಲದ (ನಾನ್ ಬೈಲೇಬಲ್) ಅಪರಾಧದ ಪ್ರಕರಣದ ಆರೋಪ ಹೊಂದಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಸಂದರ್ಭದಲ್ಲಿ ಆತನನ್ನು ಪೊಲೀಸ್ ಠಾಣೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡುವ ಅಧಿಕಾರವನ್ನು ಪೊಲೀಸರು ಹೊಂದಿರುವುದಿಲ್ಲ. ಇಂತಹ ಪ್ರಕರಣದಲ್ಲಿ ಪೊಲೀಸರು ಆರೋಪಿ ವ್ಯಕ್ತಿಯನ್ನು ಬಂಧಿಸಿದ ನಂತರ ಬಂಧನದ ವಿಧಿ ವಿಧಾನಗಳನ್ನು ಪೂರೈಸಿ ಆತನನ್ನು ಬಂಧಿಸಿದ ವಿಷಯವನ್ನು ಆತನ ರಕ್ತ ಸಂಬಂಧಿಕರಿಗೆ ತಿಳಿಸಿ, ನಂತರ ವಿಳಂಬ ಮಾಡದೇ ಗರಿಷ್ಟ 24 ಗಂಟೆಯ ಅವಧಿಯ ಒಳಗಾಗಿ ಆತನನ್ನು ಸಂಬಂಧಪಟ್ಟ ಸರಹದ್ದಿನ ನ್ಯಾಯಾಲಯಕ್ಕೆ ಹಾಜರು ಮಾಡಬೇಕಾಗಿರುತ್ತದೆ. ಒಂದು ವೇಳೆ ಬಂಧಿತ ವ್ಯಕ್ತಿ ಪ್ರಕರಣದ ವಿಚಾರಣೆಗಾಗಿ ಪೊಲೀಸರಿಗೆ ಬೇಕಾದಲ್ಲಿ, ಪೊಲೀಸರು ಈ ಕುರಿತು ನ್ಯಾಯಾಲಯಕ್ಕೆ ಅಭಿರಕ್ಷೆ (ರಿಮಾಂಡ್) ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದೇ ರೀತಿಯಾಗಿ ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರುಪಡಿಸಲ್ಪಟ್ಟ ಆರೋಪಿತ ವ್ಯಕ್ತಿಯು ಸಹ ತನ್ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಕೋರಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಜಾಮೀನಿಯವಲ್ಲದ (ನಾನ್ ಬೈಲೇಬಲ್) ಅಪರಾಧದ ಪ್ರಕರಣದಲ್ಲಿನ ಆರೋಪಿತ ವ್ಯಕ್ತಿಯ ಜಾಮೀನು ಅರ್ಜಿಯನ್ನು ಪರಿಗಣಿಸುವ ಅಥವಾ ತಿರಸ್ಕರಿಸುವ ನಿರ್ಧಾರವನ್ನು ಸಂಬಂಧಪಟ್ಟ ನ್ಯಾಯಾಧೀಶರು ತನ್ನ ವಿವೇಚನಕ್ಕೆ ಅನುಸಾರವಾಗಿ ಅಂದರೆ ಆರೋಪಿಯ ಮತ್ತು ಆತನ ಕೌಟುಂಬಿಕ ಹಿನ್ನಲೆ, ಆತನ ಮೇಲಿನ ಅಪರಾದದ ಸ್ವರೂಪ, ವಯಸ್ಸು, ಆರೋಗ್ಯಸ್ಥಿತಿ ಮತ್ತು ಇತರ ಸ್ಥಿತಿಗತಿಗಳನ್ನು ಅವಲೋಕಿಸಿ ಸೂಕ್ತ ಆದೇಶವನ್ನು ನೀಡುವ ಕಾನೂನುಬದ್ಧ ಅಧಿಕಾರವನ್ನು ಹೊಂದಿರುತ್ತಾರೆ.
ನ್ಯಾಯಾಲಯವು ಒಬ್ಬ ಆರೋಪಿತ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ ನಂತರ ಆತ ಪ್ರಕರಣದ ತನಿಖೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದಲ್ಲಿ, ನ್ಯಾಯಾಲಯವು ಆತನ ವಿರುದ್ಧ ಬಂಧನಕ್ಕಾಗಿ ವಾರೆಂಟ್ನ್ನು ಹೊರಡಿಸಿ ಪೊಲೀಸರ ಮೂಲಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕ್ರಮ ಕೈಗೊಳ್ಳಬಹುದು. ಮಾತ್ರವಲ್ಲದೇ ಆರೋಪಿತ ವ್ಯಕ್ತಿಯ ಪರ ಜಾಮೀನು ನೀಡಿದ ವ್ಯಕ್ತಿಯ ವಿರುದ್ಧ ಸಹ ಸೂಕ್ತ ಕಾನೂನು ಕ್ರಮ ಜರುಗಿಸಬಹುದು. ಆರೋಪಿತ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯವು ವಿಧಿಸಿರುವ ಜಾಮೀನಿನ ಷರತ್ತುಗಳನ್ನು ಆತ ಉಲ್ಲಂಘಿಸಿದ್ದಲ್ಲಿ ಅಥವಾ ಇನ್ನಿತರ ಸೂಕ್ತ ಕಾರಣಕ್ಕಾಗಿ ನ್ಯಾಯಾಲಯವು ಆರೋಪಿತ ವ್ಯಕ್ತಿಗೆ ನೀಡಿರುವ ಜಾಮೀನನ್ನು ರದ್ದುಪಡಿಸಿ ಆತನನ್ನು ದಸ್ತಗಿರಿ ಮಾಡಲು ಆದೇಶಿಸಬಹುದು ಮತ್ತು ಪ್ರಕರಣದ ತನಿಖೆ ಮುಗಿಯುವವರೆಗೆ ಅತನನ್ನು ನ್ಯಾಯಾಂಗ ಬಂಧನದಲ್ಲಿರಿಸಬಹುದಾಗಿದೆ.

ಸಾಮಾನ್ಯವಾಗಿ ಜಾಮೀನು ನಿರಾಕರಣೆ ಮಾಡುವ ಬದಲು ಜಾಮೀನು ನೀಡುವುದೇ ಕಾನೂನಿನ ಸಾಮಾನ್ಯ ನೀತಿಯಾಗಿರುತ್ತದೆ. ಶಿಕ್ಷೆಯ ಭಾಗವಾಗಿ ಜಾಮೀನನ್ನು ತಡೆಹಿಡಿಯಲಾಗದು. ಆರೋಪಿತ ವ್ಯಕ್ತಿಯು ಮರಣದಂಡನೆಗೆ ಅಥವಾ ಜೀವಾವಧಿಯ ಶಿಕ್ಷೆಗೆ ಗುರಿಯಾಗಬಹುದಾದಂತಹ ಅಪರಾಧಗಳನ್ನು ಎಸಗಿದ್ದಲ್ಲಿ ಆತನಿಗೆ ಜಾಮೀನು ನೀಡುವ ಬಗ್ಗೆ ಮೃದು ಧೋರಣೆ ತಳೆಯಕೂಡದು ಎಂಬುದು ಜಾಮೀನಿನ ಸಾಮಾನ್ಯ ನಿಯಮವಾಗಿರುತ್ತದೆ. ಆದರೆ ಆರೋಪಿತ ವ್ಯಕ್ತಿಯು 16 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಅಪ್ರಾಪ್ತನಾಗಿದ್ದಲ್ಲಿ, ಮಹಿಳೆಯಾಗಿದ್ದಲ್ಲಿ, ತೀವ್ರತರದ ಖಾಯಿಲೆಯಿಂದ ಬಳಲುತ್ತಿರುವ ರೋಗಿಯಾಗಿದ್ದಲ್ಲಿ ಅಥವಾ ಯಾವುದೇ ವಿಶೇಷ ಕಾರಣಕ್ಕಾಗಿ ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವುದು ನ್ಯಾಯೋಚಿತವಾದದ್ದು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟರೆ, ಆತನಿಗೆ ಷರತ್ತುಬದ್ಧ ಜಾಮೀನನ್ನು ನೀಡಬಹುದು. ಒಟ್ಟಾರೆ ಜಾಮೀನು ನಿರಾಕರಿಸಲು ಸಮರ್ಥನೀಯವಾಗಬಹುದಾದ ಇತರೆ ಯುಕ್ತ ಕಾರಣಗಳಿರುವ ಪ್ರಕರಣಗಳನ್ನು ಹೊರತುಪಡಿಸಿ ಇತರೆ ಪ್ರಕರಣಗಳಲ್ಲಿ ಜಾಮೀನು ನೀಡಬೇಕೆಂಬುವುದೇ ಕಾನೂನಿನ ಮೂಲತತ್ವವಾಗಿರುತ್ತದೆ.































































