ಎಡಪದವು – ಸರಣಿ ಅಪಘಾತ

ಏಳು ವಾಹನಗಳು ಡಿಕ್ಕಿ – ಮೂವರಿಗೆ ಗಾಯ

ಮೂಡುಬಿದಿರೆ : ಎಡಪದವಿನಲ್ಲಿ ಶುಕ್ರವಾರ ಅಪರಾಹ್ನ ಸರಣಿ ಅಪಘಾತ ಸಂಭವಿಸಿದ್ದು ಪರಿಣಾಮ ಲಾರಿ, ಟ್ಯಾಂಕ‌ರ್‌, ಖಾಸಗಿ ಬಸ್‌ ಸಹಿತ ಏಳು ವಾಹನಗಳು ಡಿಕ್ಕಿಯಾಗಿದೆ. ಮಂಗಳೂರು ಕಡೆಯಿಂದ ಆವೆ ಮಣ್ಣು ತುಂಬಿಕೊಂಡು ಮೂಡುಬಿದಿರಿಯತ್ತ ಸಾಗುತ್ತಿದ್ದ ಆಂಧ್ರ ಮೂಲದ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಎಡಪದವು ರಾಮ ಮಂದಿರದ ಬಳಿ ನಿಂತಿದ್ದ ಟ್ಯಾಂಕರ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕ‌ರ್ ಪಲ್ಟಿಯಾಗಿ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದೆ. ಬಳಿಕ ರಸ್ತೆ ಪಕ್ಕದ ಕಟ್ಟಡ ಮತ್ತು ಒಂದು ಎಟಿಎಂ ಕೇಂದ್ರಕ್ಕೆ ಗುದ್ದಿದೆ. ಮಂಗಳೂರಿನತ್ತ ಸಾಗುತ್ತಿದ್ದ ಅಡುಗೆ ಎಣ್ಣೆ ತುಂಬಿದ್ದ ಟೆಂಪೋ, ಮೂಡುಬಿದಿರೆ ಕಡೆಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಖಾಸಗಿ ಬಸ್, ಒಂದು ಸ್ವಿಫ್ಟ್ ಕಾರು ಮತ್ತು ಮೂರು ಬೈಕ್ ಗಳು ಸರಣಿ ಅಪಘಾತಕ್ಕೀಡಾಗಿದೆ. ಟ್ಯಾಂಕ‌ರ್ ಚಾಲಕ ಸಹಿತ ಮೂವರಿಗೆ ಗಂಭೀರ ಪ್ರಮಾಣದ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತಕ್ಕೆ ಕಾರಣವಾದ ಲಾರಿಯ ಚಾಲಕನನ್ನು ಹರಸಾಹಸಪಟ್ಟು ಹೊರತೆಗೆಯಲಾಗಿದೆ. ಅಡುಗೆ ಎಣ್ಣೆ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋದಲ್ಲಿದ್ದ ಅಡುಗೆ ಎಣ್ಣೆ ಪ್ಯಾಕೆಟ್ ಗಳು ರಸ್ತೆಗೆ ಚೆಲ್ಲಿದೆ. ರಸ್ತೆ ಬದಿಯ ಕಟ್ಟಡದಲ್ಲಿದ್ದ ಶೋ ರೂಮ್ ಮತ್ತು ಎಟಿಎಂ ಹಾನಿಗೀಡಾಗಿದೆ. ಮೂರು ಬೈಕ್ ಗಳು ಲಾರಿಯಡಿ ಸಿಲುಕಿ ನಜ್ಜುಗುಜ್ಜಾಗಿದೆ. ಟ್ರಾಫಿಕ್‌ ಜಾಮ್ ಉಂಟಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು ಪೊಲೀಸರು ಪ್ರಯಾಣಿಕರ ಸುಗಮ ಸಂಚಾರಕ್ಕೆ ನೆರವಾಗಿದ್ದಾರೆ.





























































































































error: Content is protected !!
Scroll to Top