ಕಾಂಗ್ರೆಸ್‌ನಿಂದ ಓಟ್ ಬ್ಯಾಂಕ್ ರಾಜಕಾರಣ – ರೇಷ್ಮಾ ಶೆಟ್ಟಿ
ಕಾರ್ಕಳ: ರಾಜ್ಯದ ಕಾಂಗ್ರೆಸ್ ಸರಕಾರದಿಂದ ವಿದ್ಯಾರ್ಥಿಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಹಿಂದೂ ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲದಂತಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಆರೋಪಿಸಿದ್ದಾರೆ. ಕಾರ್ಕಳ ಚುನಾವಣಾ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಎಂಬ ಹಿಂದೂ ಯುವತಿಯನ್ನು ಫಯಾಜ್ ಎಂಬಾತ ಕಾಲೇಜ್ ಆವರಣದಲ್ಲಿ ಭೀಕರವಾಗಿ ಹತ್ಯೆಗೈದರೂ ಆರೋಪಿಯ ಕುರಿತು ಮೌನ ವಹಿಸಿರುವ ಕಾಂಗ್ರೆಸ್ ಪಕ್ಷದ ನಿಜಬಣ್ಣ ಬಯಲಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ ಮಾತನಾಡಿ, ಹಿಂದೂಗಳ ಮೇಲೇ ದೌರ್ಜನ್ಯಗಳು ನಡೆದಾಗ ಕಾಂಗ್ರೆಸ್ ಸರಕಾರ ಮಕ್ಕಳಾಟಿಕೆ ಎಂದು ಸಮರ್ಥಿಸುತ್ತದೆ, ಅದು ಅವರ ವೈಯಕ್ತಿಕ ವಿಚಾರ ಎಂಬುದಾಗಿ ಸ್ಪಷ್ಟನೆ ನೀಡಲಾಗುತ್ತಿದೆ. ರಾಜ್ಯದಲ್ಲಿ ದಲಿತರಿಗೆ ಭದ್ರತೆಯಿಲ್ಲ, ದಲಿತ ಶಾಸಕನ ಮನೆ ಸುಟ್ಟ ಪ್ರಕರಣವೇ ಇದಕ್ಕೆ ಸಾಕ್ಷಿ. ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ದೌರ್ಜನ್ಯ ನಡೆಸುವವರನ್ನು ಸಮರ್ಥನೆ ಮಾಡುತ್ತಿರುವುದು ಖಂಡನೀಯ ಎಂದರು.
ಈ ಹಿಂದೆ ಉಡುಪಿಯಲ್ಲಿ ವಿದ್ಯಾರ್ಥಿಗಳು ಬುರ್ಖಾ ಧರಿಸಿ ಬಂದ ಪ್ರಕರಣ, ಕಾಲೇಜ್ ಶೌಚಾಲಯದಲ್ಲಿ ವಿಡಿಯೋ ಚಿತ್ರೀತ್ರಿಕರಣ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವವರ ಮೇಲೆ ನಡುರಸ್ತೆಯಲ್ಲೇ ಅಟ್ಟಹಾಸ ಮೆರೆಯುವವರ ಮೇಲೆ ಕ್ರಮ ಜರುಗಿಸದೆ ಅವರನ್ನು ರಕ್ಷಿಸಲು ಮುಂದಾಗಿರುವುದು ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ರೇಷ್ಮಾ ಉದಯ ಶೆಟ್ಟಿ ಆರೋಪಿಸಿದ್ದಾರೆ.
ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಜ್ಯೋತಿ ರಮೇಶ್, ಕಾರ್ಕಳ ತಾಲೂಕು ಮಹಿಳಾ ಮೋರ್ಚಾದ ಕಾರ್ಯದರ್ಶಿ ಪ್ರಮೀಳಾ ದಿನೇಶ್, ಶಶಿಮಣಿ, ಸುಮತಿ, ಸುಜಾತ, ಸರಸ್ವತಿ ಉಪಸ್ಥಿತರಿದ್ದರು.






























































