ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ
ಕಾರ್ಕಳ : ಜಿಹಾದಿಗಳಿಗೆ ಪಕ್ಷವೂ ಇಲ್ಲ, ಜಾತಿಯೂ ಇಲ್ಲ. ಅವರಿಗೆ ಜಿಹಾದ್ ಮಾತ್ರ ಬೇಕಾಗಿರುವುದು. ಇದನ್ನಿವತ್ತು ನಮ್ಮ ಕಾರ್ಯಕರ್ತರು ಜನರಿಗೆ ಅರ್ಥ ಮಾಡಿಸಬೇಕಾಗಿದೆ. ಜಿಹಾದಿ ಮಾನಸಿಕತೆಯವರನ್ನು ಬ್ರದರ್ಸ್ ಎಂದು ಕರೆದ ಪರಿಣಾಮವಾಗಿ, ಗೂಂಡಾಗಳನ್ನು ಅಮಾಯಕರೆಂದು ಹೇಳಿದ ಪರಿಣಾಮವಾಗಿ ಲವ್ ಮಾಡಿಲ್ಲ ಎಂದರೆ ಕುತ್ತಿಗೆಗೆ ಚೂರಿ ಹಾಕುವ ಮಟ್ಟಿಗೆ ಕಾಂಗ್ರೆಸ್ ಸರಕಾರದ ಕಾನೂನು ಬಂದಿದೆ ಎಂದಾದರೆ ನಾವು ಈ ಚುನಾವಣೆಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಹೇಳಿದರು.
ಕಾರ್ಕಳದಲ್ಲಿ ಜನಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹುಬ್ಬಳ್ಳಿಯ ಕರಾಳ ಘಟನೆ ಕರ್ನಾಟಕದಲ್ಲೂ ಈ ರೀತಿಯಾದ ಘಟನೆ ನಡೆಯುತ್ತದಾ ಎಂದು ಅನ್ನಿಸುವಷ್ಟು ಮಟ್ಟದಲ್ಲಿ ನಡೆದಿದೆ. ನಾವು ಸಿಎಎ ವಿರುದ್ಧ ವಾಟ್ಸಾಪ್ನಲ್ಲಿ ಪೋಸ್ಟ್ ಹಾಕಿದಾಗ ರಾಜಸ್ಥಾನದಲ್ಲಿ ಟೈಲರ್ನ ಕುತ್ತಿಗೆ ಕೊಯ್ದರು. ಲವ್ ಮಾಡಿಲ್ಲ ಎನ್ನುವ ಕಾರಣಕ್ಕೆ ಯುವತಿಯನ್ನು ಕಾಲೇಜಿನ ಕ್ಯಾಂಪಸ್ಗೆ ಬಂದು ಒಂಬತ್ತು ಬಾರಿ ಚೂರಿ ಹಾಕ್ತಾರೆಂದರೆ ಯಾವ ಸರಕಾರ ನಡೀತಾ ಇದೆ ಇಲ್ಲಿ ಎಂದು ಗುಡುಗಿದ್ದಾರೆ. ಈ ಜಿಹಾದಿ ಮಾನಸಿಕತೆಯನ್ನು ಮತ್ತು ಅದಕ್ಕೆ ಬಹಿರಂಗವಾಗಿ ಬೆಂಬಲ ನೀಡುತ್ತಿರುವ ಕಾಂಗ್ರೆಸ್ಸಿನ ಮುಖವಾಡವನ್ನು ಕಳಚುವ ಸಮಯ ಬಂದಿದೆ. ಮುಂದಿನ ಎಂಟು ದಿನದಲ್ಲಿ ನಾವೆಲ್ಲರೂ ನಮ್ಮ ಬೂತ್ಗಳಲ್ಲಿ ಲೀಡ್ ಪಡೆದೇ ಪಡೆಯುತ್ತೇವೆ ಎಂದು ಸಂಕಲ್ಪ ಮಾಡಿದಲ್ಲಿ ಮಾತ್ರ ಇದ ಸಾಧ್ಯ ಎಂದರು.

ಮಹಾ ಸಂಪರ್ಕ ಅಭಿಯಾನ
ಪ್ರತಿ ಬೂತ್ ಮಟ್ಟದಲ್ಲಿ ಕಾರ್ನರ್ ಸಭೆಗಳನ್ನು ಈಗಾಗಲೇ ನಡೆಸಲಾಗಿದೆ. ಎಪ್ರಿಲ್ ೨೨, ೨೩, ೨೪ರಂದು ಎರಡನೇ ಹಂತದ ಮನೆಮನೆ ಪ್ರಚಾರ ಕಾರ್ಯಕ್ರಮ ನಡೆಯಲಿದೆ. 21ರಂದು ಮಹಾಸಂಪರ್ಕ ಅಭಿಯಾನ ನಡೆಯಲಿದೆ. ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಹಿತೈಷಿಗಳನ್ನು ಕೂಡಿಕೊಂಡು ಮಹಾ ಸಂಪರ್ಕ ಅಭಿಯಾನ ನಡೆಸಬೇಕು ಎಂದರು.
ಯೋಜನೆಗಳನ್ನು ರದ್ದು ಮಾಡಿದ ಕಾಂಗ್ರೆಸ್
ಕಾಂಗ್ರೆಸ್ ನೆಗೆಟಿವ್ ಕ್ಯಾಂಪೇನ್ ಅನ್ನು ನಡೆಸುತ್ತಿದೆ. ಒಂದು ಸುಳ್ಳನ್ನು ಹತ್ತು ಬಾರಿ ಹೇಳುತ್ತಿದ್ದಾರೆ. ಗ್ಯಾರಂಟಿಗಳ ಬಾಂಡ್ ಪೇಪರ್ ಮನೆಮನೆಗೆ ತಂದು ಕೊಡುತ್ತಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುವಷ್ಟು ಸ್ಥಾನಗಳಲ್ಲಿ ಸಹ ಸ್ಪರ್ಧೆ ಮಾಡಿಲ್ಲ. ಇದನ್ನು ನಾವು ಜನರಿಗೆ ಅರ್ಥ ಮಾಡಿಸಬೇಕು. ಬಿಜೆಪಿ ಸರಕಾರ ತಂದಿದ್ದ ಹತ್ತಾರು ಯೋಜನೆಗಳನ್ನು ಕಾಂಗ್ರೆಸ್ ಸರಕಾರ ರದ್ದು ಮಾಡಿದೆ. ಹೊಸ ಯೋಜನೆಗಳನ್ನು ತಂದಿಲ್ಲ. ಗ್ಯಾರಂಟಿಗೆ ನಮ್ಮ ಸ್ವಾಗತ ಇದೆ. ಆದರೆ ಗ್ಯಾರಂಟಿಗಾಗಿ ಎಷ್ಟು ಯೋಜನೆ ರದ್ದು ಮಾಡಿದ್ದೀರಿ ಎಂದು ತಿಳಿಸಿ.
ಅಕ್ಕಿ ಕೊಡುವುದು ಕೇಂದ್ರ ಸರಕಾರ
ಎಲ್ಲ ವಿಧದಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ. ಮನೆ ಮನೆಗೆ ಐದು ಕೆಜಿ ಅಕ್ಕಿ ನೀಡುತ್ತಿರುವುದು ಕೇಂದ್ರ ಸರಕಾರ. ಇದು ಬಹಿರಂಗವಾಗುವವರೆಗೆ ಸಿದ್ದರಾಮಯ್ಯನವರು ನಾನೇ ನೀಡುವುದು ಎಂದು ಹೇಳ್ತಾ ಬಂದಿದ್ದರು. ರಾಜ್ಯ ಸರಕಾರ ಒಂದು ಕಾಳು ಅಕ್ಕಿ ನೀಡಿಲ್ಲ. ಉಚಿತ ವಿದ್ಯುತ್ ಎಂದು ಹೇಳಿ ಎಷ್ಟು ಗಂಟೆಗಳ ಕಾಲ ಪವರ್ ಕಟ್ ನಡೀತಾ ಇದೆ? ಈ ರೀತಿ ದುರಾಡಳಿತ ನಡೆಯುವ ಸಂದರ್ಭದಲ್ಲಿ ಚುನಾಯಿತ ಜನಪ್ರತಿನಿಧಿಗಳು ಜನರಿಗೆ ತಿಳಿಸುವ ಅಗತ್ಯ ಇದೆ ಎಂದರು.

ಕರಾವಳಿಗೆ ೧ ರೂ. ಅನುದಾನ ಕೊಟ್ಟಿಲ್ಲ
ಕರಾವಳಿಗೆ ಒಂದು ರೂಪಾಯಿ ಅನುದಾನ ಈ ಸರಕಾರ ನೀಡಿಲ್ಲ. ಕಾಂಗ್ರೆಸ್ ಅಭ್ಯರ್ಥಿ ದೇಶದ ನಾಯಕರ ಹೆಸರು ಹೇಳಿ ಮತ ಕೇಳುವವನು ಜನಪ್ರತಿನಿಧಿ ಅಲ್ಲ ಎಂಬ ಹೇಳಿಕೆಯನ್ನು ಗಮನಿಸಿದ್ದೇನೆ. ನಾವು ಸಾವಿರ ಬಾರಿ ಬೇಕಾದ್ರೂ ಹೇಳ್ತೇವೆ. ನರೇಂದ್ರ ಮೋದಿಯವರ ಹೆಸರಿನಲ್ಲೇ ಚುನಾವಣೆಗೆ ಹೋಗ್ತೇವೆ. ಕಾಂಗ್ರೆಸ್ ಅಭ್ಯರ್ಥಿ ನಾನು ರಾಹುಲ್ ಗಾಂಧಿ, ಸಿದ್ದರಾಮಯ್ಯ ಹೆಸರಿನಲ್ಲಿ ಚುನಾವಣೆಗೆ ಹೋಗ್ತೇನೆ ಎಂದು ಹೇಳಲಿ ನೋಡುವ. ಯಾರ ನೇತೃತ್ವ ಎಂದು ಹೇಳಲಿಕ್ಕೆ ಸಾಧ್ಯವಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ.
ಮೋದಿಯವರ ನಾಯಕತ್ವದಲ್ಲಿ ಎರಡು ಬಾರಿ ಉತ್ತಮ ಆಡಳಿತ ನೀಡಿದ್ದೇವೆ. ಮೂರನೇ ಬಾರಿಯೂ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡಲಿದ್ದೇವೆ. ಸೋನಿಯಾ ಗಾಂಧಿ, ಡಿ.ಕೆ ಶಿವಕುಮಾರ್ ಹೆಸರು ಹೇಳಲಿಕ್ಕೆ ಕಾಂಗ್ರೆಸಿಗರು ತಯಾರಿದ್ದಾರಾ?
ಬಿಲ್ಲವ ನಿಗಮ ಮಾಡಿದ್ದು ಬಿಜೆಪಿ ಸರಕಾರ
ಹತ್ತು-ಹನ್ನೊಂದು ತಿಂಗಳ ಅವಧಿಯಲ್ಲಿ ರಾಜ್ಯ ಸರಕಾರ ಕರಾವಳಿಗೆ ಎಷ್ಟು ಮೋಸ ಮಾಡಿತು? ಸಿದ್ದರಾಮಯ್ಯನವರು ಬಂಟರ ಸಮಾವೇಶಕ್ಕೆ ಬಂದಾಗ ಬಂಟ ಅಭಿವೃದ್ದಿ ನಿಗಮ ಮಾಡ್ತೇನೆಂದು ಹೇಳಿದ್ರು. ಎಲ್ಲಿ ಹೋಯಿತು ಅದು? ಬಿಲ್ಲವ ನಿಗಮ ಮಾಡಿದ್ದು ನಾವು. ಒಂದು ರೂಪಾಯಿಯೂ ನೀಡದೆ ಇದ್ದದ್ದು ಕಾಂಗ್ರೆಸ್. ಕರಾವಳಿಯನ್ನು ಈ ಸರಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು.
ಜಿಲ್ಲೆಗೊಬ್ಬ ಮುಖ್ಯಮಂತ್ರಿ ಬೇಡ
ನಮಗೆ ರಾಜ್ಯಕ್ಕೆ ಒಬ್ಬ ಮುಖ್ಯಮಂತ್ರಿ ಬೇಕಾಗಿರುವುದು. ಜಿಲ್ಲೆಗೊಬ್ಬ ಮುಖ್ಯಮಂತ್ರಿ ಅಲ್ಲ. ಇಂದಿನ ಮುಖ್ಯಮಂತ್ರಿಗಳ ಹೇಳಿಕೆಗಳು ಒಂದು ಜಿಲ್ಲೆಗೆ ಸೀಮಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ನಾವು ಮುಂಬರುವ ದಿನದಲ್ಲಿ ಇದನ್ನು ಅರ್ಥಮಾಡಿಸಬೇಕಾಗಿದೆ. ಇದಕ್ಕಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಕೋಟ ಶ್ರೀನಿವಾಸ ಪೂಜಾರಿಯವರಂಥ ಜನಪರ ಕಾಳಜಿ ಹೊಂದಿರುವ ನಾಯಕ ಸಂಸತ್ತಿನಲ್ಲಿ ಇರಬೇಕು ಎಂದರು.
ಎರಡು ದೋಣಿಗಳಲ್ಲಿ ಕಾಲಿಟ್ಟವರು
ಎರಡು ದೋಣಿಗಳಲ್ಲಿ ಕಾಲಿಟ್ಟವರಿಗೆ ಕಾರ್ಕಳದ ಅಭಿವೃದ್ಧಿ ಕಾಣಿಸುತ್ತಿಲ್ಲ. ಅಭಿವೃದ್ಧಿಯನ್ನು ಲೇವಡಿ ಮಾಡುತ್ತಿದ್ದವರೇ ಈಗ ಅಭಿವೃದ್ಧಿ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವುದು ವಿಪರ್ಯಾಸ. ಕಾರ್ಕಳದ ಎಲ್ಲ ರಸ್ತೆಗಳು ಬಿಜೆಪಿ ಸರಕಾರದ ಅವಧಿಯಲ್ಲಿ ಅಭಿವೃದ್ಧಿಗೊಂಡಿವೆ. ಮುನಿಯಾಲು ರಸ್ತೆಯೂ ಅಭಿವೃದ್ಧಿಯಾಗಿದೆ ಎಂಬುದಾಗಿ ಕಾರ್ಕಳದಲ್ಲಿ ಅಭಿವೃದ್ಧಿಯಾಗಿರುವುದು ನಗರದ ರಸ್ತೆಗಳು ಮಾತ್ರ ಎಂದವರಿಗೆ ಸುನಿಲ್ ಕುಮಾರ್ ಟಾಂಗ್ ನೀಡಿದರು.






























































