ಕಾರ್ಕಳ : ಸಾಣೂರು ಗ್ರಾಮ ಮುದ್ದಣನಗರ ನಡ್ಯೋಡಿಬೆಟ್ಟ ಶ್ರೀಕ್ಷೇತ್ರ ಧರ್ಮರಸು ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನ ಮತ್ತು ಬ್ರಹ್ಮಬೈದರ್ಕಳ ಗರಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಧರ್ಮರಸು ಉಲ್ಲಾಯನ ಮಾಡ ಹಾಗೂ ಜೀರ್ಣೋದ್ಧಾರಗೊಂಡ ಗರ್ಭಗುಡಿಗಳಲ್ಲಿ ಶ್ರೀ ಕ್ಷೇತ್ರದ ಧರ್ಮದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಧಾರ್ಮಿಕ ಸಮಾರಂಭ ಹಾಗೂ ವಾರ್ಷಿಕ ನೇಮೋತ್ಸವ ಮಾ. 23ರಿಂದ 31ರವರೆಗೆ ಜರುಗಲಿದೆ. ಮಾ. 14ರ ಸಂಜೆ ಗರಡಿಯ ಆವರಣದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಈ ವೇಳೆ ಮಾತನಾಡಿದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶ್ರೀರಾಂ ಭಟ್ ಗ್ರಾಮದ ಪ್ರತಿ ಮನೆಗೆ ಆಮಂತ್ರಣ ಪತ್ರಿಕೆ ತಲುಪಬೇಕು. ಯಾವೊಂದು ಗೊಂದಲವಿಲ್ಲದೇ ಸಕಲ ಕಾರ್ಯಗಳು ನಡೆಯಬೇಕೆಂದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಕೋಟ್ಯಾನ್ ಮಾತನಾಡಿ, ಮಾ. 20ರಂದು ಗ್ರಾಮದ ಎಲ್ಲ ರಸ್ತೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಬೇಕೆಂದು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರೆಲ್ಲರೂ ಸಹಕರಿಸಬೇಕೆಂದರು.
ಮಾ. 23 ರಂದು ಹಸಿರು ಹೊರೆಕಾಣಿಕೆ, ಮಾ. 27ರಂದು ಪುನರ್ ಪ್ರತಿಷ್ಠೆ, ಮಾ. 28ರಂದು ಬ್ರಹ್ಮಕಲಶಾಭಿಷೇಕ, ಮಾ. 29ರಂದು ವಾರ್ಷಿಕ ನೇಮೋತ್ಸವ ನಡೆಯಲಿದೆ.
ಸಾಣೂರು ಗ್ರಾ.ಪಂ. ಅಧ್ಯಕ್ಷ ಯುವರಾಜ್ ಜೈನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾತ್ ನಾಯಕ್, ಕೋಶಾಧಿಕಾರಿ ಎಂ. ದಯಾನಂದ ಶೆಟ್ಟಿ, ವಿಶಾಲ್ ಪೂಜಾರಿ ಖಂಡಿಗಬರ್ಕೆ, ಸುಂದರ್ ಶೆಟ್ಟಿ ಧರ್ಮಡ್ಕ ಮೊದಲಾದವರು ಈ ಸಂದರ್ಭದಲ್ಲಿದ್ದರು. ಪ್ರಚಾರ ಸಮಿತಿ ಸಂಚಾಲಕ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

























