ಕಂದಾಯ ದಾಖಲೆಗಳಲ್ಲಿ ಕದೀಂ ವರ್ಗ ಎಂದು ಗುರುತಿಸಲ್ಪಟ್ಟ (ಸಾಮಾನ್ಯವಾಗಿ ಪಹಣಿ ಪತ್ರ ಅಂದರೆ ಆರ್.ಟಿ.ಸಿ. ಯ ಕಲಂ. ನಂ. 6 ರಲ್ಲಿ ನಮೂದಿಸಲ್ಪಟ್ಟ) ಕೃಷಿ ಜಮೀನುಗಳಿಗೆ ಹೊಂದಿಕೊಂಡು ಇರುವ ಸರಕಾರಿ ಜಮೀನಿನ ಮೇಲೆ ಪ್ರತಿಯೊಬ್ಬ ಕೃಷಿಕನು ತನಗೆ ಸೇರಿದ ಕದೀಂ ವರ್ಗ ಸ್ಥಳದ ಅಂಚಿನಿಂದ 450 ಲಿಂಕ್ಸ್ ಅಂದರೆ 100 ಯಾರ್ಡ್ಸ್ ವರೆಗಿನ ಅಳತೆಯ ಪ್ರದೇಶದಲ್ಲಿ ಭೂ ಕಂದಾಯ ಅಧಿನಿಯಮದಲ್ಲಿ ಉಲ್ಲೇಖಿಸಲ್ಪಟ್ಟ ಕುಮ್ಕಿ ಹಕ್ಕನ್ನು ಚಲಾಯಿಸಬಹುದಾಗಿದೆ. ಅಂದರೆ ಕದೀಂ ವರ್ಗ ಸ್ಥಳದ ಮಾಲೀಕತ್ವ ಹೊಂದಿರುವ ಕೃಷಿಕನು ತನ್ನ ಕೃಷಿ ಚಟುಬಟಿಕೆಗಳ ಉದ್ದೇಶಕ್ಕಾಗಿ ಸರಕಾರದ ಮಾಲೀಕತ್ವದ ಕುಮ್ಕಿ ಸ್ಥಳದಲ್ಲಿರುವ ಸೊಪ್ಪು, ತರಗೆಲೆ, ಕಟ್ಟಿಗೆ, ಇತ್ಯಾದಿಗಳನ್ನು ಉಪಯೋಗಿಸಬಹುದಾಗಿದೆ.
ಮೂಲತಃ ‘ಸೌತ್ ಕೆನರಾ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ನಮ್ಮ ಈಗಿನ ಅವಿಭತತ ದಕ್ಷಿಣ ಕನ್ನಡ ಜಿಲ್ಲೆಯು (ಪ್ರತ್ಯೇಕಿಸಲ್ಪಟ್ಟ ಉಡುಪಿ ಜಿಲ್ಲೆ ಸಮೇತ) ಮಹಾರಾಷ್ಟçದ ಮುಂಬೈ ಪ್ರಾಂತ್ಯಕ್ಕೆ ಸೇರಿದ ಪ್ರದೇಶವಾಗಿತ್ತು. ಕಾಲ ಕ್ರಮೇಣ ಬ್ರಿಟಿಷ್ ಆಡಳಿತವು ಭಾರತದಲ್ಲಿ ತನ್ನ ಆಡಳಿತ ಸುಧಾರಣೆಯ ದೃಷ್ಟಿಯಿಂದ ‘ಸೌತ್ ಕೆನರಾ’ ಜಿಲ್ಲೆಯನ್ನು ಮದರಾಸು ರಾಜ್ಯದ (ಈಗಿನ ತಮಿಳುನಾಡು) ಆಡಳಿತ ವ್ಯಾಪ್ತಿಗೆ ಒಳಪಡಿಸಿದ್ದರು. ಆ ಸಮಯದಲ್ಲಿ ಈಗ ಕೇರಳ ರಾಜ್ಯದ ಆಡಳಿತ ವ್ಯಾಪ್ತಿಯಲ್ಲಿರುವ ಕಾಸರಗೋಡು ಜಿಲ್ಲೆಯು ಸಹಾ ನಮ್ಮ ‘ಸೌತ್ ಕೆನರಾ’ ಜಿಲ್ಲೆಯ ಆಡಳಿತ ವ್ಯಾಪ್ತಿಯೊಳಗೆ ಇತ್ತು. ನವೆಂಬರ್ 1 1956 ರಿಂದ ‘ಸೌತ್ ಕೆನರಾ’ ಜಿಲ್ಲೆಯನ್ನು ಹಿಂದೆ ಮೈಸೂರು ಎಂದು ಕರೆಯಲ್ಪಡುತ್ತಿದ್ದ ನಮ್ಮ ಈಗಿನ ಕರ್ನಾಟಕ ರಾಜ್ಯದ ಆಡಳಿತ ವ್ಯಾಪ್ತಿಯೊಳಗೆ ಸೇರಿಸಲ್ಪಟ್ವಿರುತ್ತದೆ. ಈ ಹಿಂದೆ ಸೌತ್ ಕೆನರಾ ಜಿಲ್ಲೆಯು ಮದರಾಸು ರಾಜ್ಯದ ಆಡಳಿತ ವ್ಯಾಪ್ತಿಯೊಳಗೆ ಬರುತ್ತಿದ್ದ ಸಂದರ್ಭದಲ್ಲಿ ಆಗಿನ ಬ್ರಿಟಿಷ್ ಸರಕಾರದವರು ರೈತರು ಪರಿಣಾಮಕಾರಿಯಾಗಿ ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ರೈತರಿಗೆ ಕುಮ್ಕಿ ಹಕ್ಕಿನ ಕುರಿತು ‘ಮದರಾಸ್ ರೆವೆನ್ಯೂ ಬೋರ್ಡ್ ಸ್ಟ್ಯಾಂಡಿಂಗ್ ಆಡರ‍್ಸ್’ ಎಂಬ ಆದೇಶವನ್ನು ಜಾರಿಗೆ ತಂದಿದ್ದು ಈ ಆದೇಶವು ಕೃಷಿಕರಿಗೆ ತಮ್ಮ ಕದೀಂ ವರ್ಗ ಹಕ್ಕಿನ ಸ್ಥಳದ ಕೃಷಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಅನುಕೂಲವಾಗಿರುತ್ತದೆ.
ಸಾಮಾನ್ಯವಾಗಿ ರೈತನ ಕುಮ್ಕಿ ಹಕ್ಕಿಗೆ ಅಡ್ಡಿ ಆತಂಕ ಮಾಡುವ ಅಧಿಕಾರ ಯಾರಿಗೂ ಇರುವುದಿಲ್ಲ. ತನ್ನ ಕುಮ್ಕಿ ಹಕ್ಕಿಗೆ ಧಕ್ಕೆ ಬಂದ ಸಂದರ್ಭದಲ್ಲಿ ಕದೀಂ ವರ್ಗದಾರನು ಕಾನೂನಿನ ಪ್ರಕಾರ ಸರಕಾರದಿಂದಾಗಲೀ ಅಥವಾ ಸಂಬಂಧಪಟ್ಟ ಸಿವಿಲ್ ನ್ಯಾಯಾಲಯದಿಂದಾಗಲೀ ಸೂಕ್ತ ರಕ್ಷಣೆಯನ್ನು ಪಡೆಯಬಹುದಾಗಿದೆ. ಯಾವುದೇ ಕುಮ್ಕಿ ಸ್ಥಳವನ್ನು ಸಾರ್ವಜನಿಕ ಉದ್ಧೇಶಕ್ಕಾಗಿ ಸರಕಾರವು ತನ್ನ ವಶಕ್ಕೆ ಪಡೆಯುವ ಮುಂಚಿತವಾಗಿ ಆಯಾ ಜಿಲ್ಲಾ ವ್ಯಾಪ್ತಿಯ ಜಿಲ್ಲಾಧಿಕಾರಿಯವರು ಕದೀಂ ವರ್ಗದಾರನಿಗೆ ಸೂಕ್ತ ನೋಟೀಸು ನೀಡಿ ತನಿಖೆ ನಡೆಸಿ ಅಗತ್ಯವಿರುವ ಸಂದರ್ಭದಲ್ಲಿ ಆತನ ಕುಮ್ಕಿ ಹಕ್ಕನ್ನು ರದ್ದುಪಡಿಸುವ ಅಧಿಕಾರವನ್ನು ರಾಜ್ಯ ಸರಕಾರವು ಹೊಂದಿರುತ್ತದೆ. ಕುಮ್ಕಿ ಹಕ್ಕನ್ನು ಅನುಭವಿಸುವ ಹಕ್ಕು ಕೇವಲ ಕದೀಂ ವರ್ಗದಾರನಿಗೆ ಮಾತ್ರ ಸೀಮಿತವಾಗಿರುವುದರಿಂದ ಕದೀಂ ವರ್ಗದಾರನು ತನಗೆ ಸೇರಿದ ಕುಮ್ಕಿ ಜಮೀನನ್ನು ಯಾರಿಗೂ ಮಾರಾಟ ಅಥವಾ ಪರಾಧೀನ ಮಾಡುವಂತಿಲ್ಲ. ಕುಮ್ಕಿ ಜಮೀನನ್ನು ಸಮ್ಮಂದಪಟ್ಟ ಕದೀಂ ವರ್ಗದ ರೈತರಿಗೆ ನೀಡುವ ಕುರಿತು ದಿನಾಂಕ ಫೆಬ್ರವರಿ 08 2013 ರಂದು ನಂ.ಆರ್.ಡಿ.46 ಎಲ್.ಜಿ.ಪಿ 2012 (ಪಿ-1)ರಂತೆ ಅಂದಿನ ಕರ್ನಾಟಕ ಸರಕಾರ ತನ್ನ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಕರಡು ಅಧಿಸೂಚನೆಯನ್ನು ಹೊರಡಿಸಿ ನಂತರ ತನ್ನ ಸಂಪುಟ ಸಭೆಯಲ್ಲಿಯೂ ಮಂಜೂರಾತಿಗಾಗಿ ತೀರ್ಮಾನ ತೆಗೆದುಕೊಂಡು ಕಾನೂನು ಇಲಾಖೆಯ ಅನುಮೋದನೆಯನ್ನು ಪಡೆಯಲಾಗಿತ್ತು. ಕುಮ್ಕಿ ಜಮೀನನ್ನು ಸಂಬಂಧಪಟ್ಟ ಕದೀಂ ವರ್ಗ ಹಕ್ಕಿನ ರೈತರಿಗೆ ನೀಡುವರೇ ಸೂಕ್ತ ಪರಿಣಾಮಕಾರಿ ಕಾನೂನನ್ನು ಅನುಷ್ಠಾನಕ್ಕೆ ತಂದು ಸಮ್ಮಂದಪಟ್ಟ ಕದೀಂ ವರ್ಗದಾರ ರೈತರಿಗೆ ಕುಮ್ಕಿ ಜಮೀನಿನ ಮೇಲಿನ ಹಕ್ಕನ್ನು ನೀಡಿದಲ್ಲಿ ರೈತರಿಗೆ ತುಂಬಾ ಅನುಕೂಲಕರವಾಗುತ್ತದೆ.


















































