ಐದು ತಲೆಮಾರು ಕಂಡ ಬೈಲೂರಿನ ಮಾಡ ಕುಟುಂಬ

ಮಗುವಿನ ನಾಮಕರಣದ ವಿಶಿಷ್ಟ ಕಾರ್ಯಕ್ರಮ

ಕಾರ್ಕಳ : ಇತ್ತೀಚಿನ ದಿನಗಳಲ್ಲಿ ಐದು ತಲೆಮಾರಿನ ತನಕ ಬದುಕುಳಿಯುವುದು ಬಹಳ ಅಪರೂಪವಾಗಿದೆ. ಎಲ್ಲೋ ಅಲ್ಲೊಂದು ಇಲ್ಲೊಂದು ಕುಟುಂಬಗಳಿಗೆ ಮಾತ್ರ ಐದನೇ ಪೀಳಿಗೆಯನ್ನು ಕಾಣುವ ಭಾಗ್ಯ ಸಿಗುತ್ತದೆ. ಯೋಗಾನುಯೋಗ ಎಂಬಂತೆ ಇಂಥ ಒಂದು ಕುಟುಂಬ ಈಗ ಬೈಲೂರಿನಲ್ಲಿದೆ. ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಪ್ರತಿಷ್ಠಿತ ಮಾಡ ಮನೆತನದ ಅವಿಭಕ್ತ ಕುಟುಂಬಕ್ಕೀಗ ಐದನೇ ತಲೆಮಾರು ಕಂಡ ಸಂಭ್ರಮ-ಸಡಗರ.

ಕೃಷಿಕ ಕುಟುಂಬವಾದ ದಿ. ಅಬ್ಬಣ್ಣ ಮಾಡ ಮತ್ತು ಶಾಂತ ಮಾಡ ಅವರಿಗೆ ಐವರು ಮಕ್ಕಳು. ಐವರು ಮಕ್ಕಳಲ್ಲಿ ಪ್ರಥಮ ಪುತ್ರ ದಿನೇಶ್‌ ಮಾಡ ತೀರಿಕೊಂಡಿದ್ದಾರೆ. ದೇವಕಿ ಭುಜಂಗ ಹೆಗ್ಡೆ, ಸುಲೋಚನಾ ರವೀಂದ್ರ ಶೆಟ್ಟಿ, ಚಂದ್ರಶೇಖರ ಮಾಡ, ಪ್ರಕಾಶ ಮಾಡ ಉಳಿದ ನಾಲ್ವರು. ಎಲ್ಲರೂ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಉತ್ತಮ ಸಾಧಕರಾಗಿದ್ದಾರೆ.

ಪ್ರಥಮ ಪುತ್ರಿ ದೇವಕಿ ಭುಜಂಗ ಹೆಗ್ಡೆಯವರಿಗೆ ಯಶು ಕುಮಾರ, ನವೀನ್‌, ನಮ್ರತಾ ಎಂಬ ಎಂಬ ಮೂವರು ಮಕ್ಕಳು. ಈ ಪೈಕಿ ನವೀನ್‌ ತೀರಿಕೊಂಡಿದ್ದಾರೆ. ನಮ್ರತಾ ಅವರು ಉದ್ಯಮಿ ಹರೀಶ್ ಶೆಟ್ಟಿ ಅವರನ್ನು ವಿವಾಹವಾಗಿದ್ದು‌, ದಂಪತಿಗೆ ಸಂವೇದ್‌ ಮತ್ತು ಸನ್ನಿಧಿ ಇಬ್ಬರು ಮಕ್ಕಳಿದ್ದಾರೆ. ಸನ್ನಿಧಿ ಸಾಫ್ಟವೇರ್‌ ಇಂಜಿನಿಯರ್‌ ಆಗಿದ್ದು, ಅವರ ಪತಿ ಹರಿಪ್ರಸಾದ್‌.

ಸನ್ನಿಧಿ-ಹರಿಪ್ರಸಾದ್‌ ದಂಪತಿಗೆ ಕಳೆದ ಫೆ.21ರಂದು ಗಂಡು ಮಗುವಾಗಿದ್ದು, ಈ ಮಗು ಮಾಡ ಕುಟುಂಬದ ಐದನೇ ತಲೆಮಾರಿನ ಮೊದಲ ಕೊಂಡಿ. ಕುಟುಂಬದ ಹಿರಿಯರಾದ ಶಾಂತ ಅಬ್ಬಣ್ಣ ಮಾಡ ಅವರಿಗೆ ಈಗ 98 ವರ್ಷ ಪ್ರಾಯ. ತನ್ನ ಕುಟುಂಬದ ಐದನೇ ತಲೆಮಾರಿನ ಮಗುವನ್ನು ಕಾಣುವ ಅತ್ಯಂತ ಅಪೂರ್ವ ಅವಕಾಶವೊಂದು ಅವರಿಗೆ ಲಭಿಸಿದ್ದು, ಈ ಸಂಭ್ರಮವನ್ನು ಬಹಳ ವಿಷೇಶವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲು ಮಾಡ ಕುಟುಂಬ ವಿಶೇಷ ತಯಾರಿ ಮಾಡಿ, ಮಾ.7ರಂದು ಈ ಕಾರ್ಯಕ್ರಮವನ್ನು ಅತ್ಯಂತ ಸಂಭ್ರದಿಂದ ಆಚರಿಸಿ, ಐದನೇ ತಲೆಮಾರಿನ ಮಗುವಿಗೆ ಅದ್ವೈತ್‌ ಎಂದು ನಾಮಕರಣ ಮಾಡಲಾಯಿತು.

ಶಾಂತ ಅಬ್ಬಣ್ಣ ಮಾಡ ಅವರು ಐದನೇ ತಲೆಮಾರಿನ ಮಗುವನ್ನು ಮೊದಲ ಬಾರಿ ನೋಡುವ ಸಂದರ್ಭ ಇಡೀ ಮನೆಯ ಒಳಗಡೆ ಹಣತೆಯ ದೀಪ ಬೆಳಗಿಸಲಾಗಿತ್ತು. ಬಂಗಾರದ ಹಣತೆಯ ದೀಪದ ಬೆಳಕಿನಲ್ಲಿ ಶಾಂತ ಅಬ್ಬಣ್ಣ ಮಾಡ ಅವರು ಮಗುವಿಗೆ ಆರತಿ ಮಾಡಿ, ಹರಸಿದ್ದಾರೆ. ಶಾಂತ ಅಬ್ಬಣ್ಣ ಮಾಡ ಅವರನ್ನು ಹಣತೆಯ ದೀಪದ ಬೆಳಕಿನ ಮೂಲಕ ಮಗುವಿರುವ ಮನೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು, ಸಭಾ ಕಾರ್ಯಕ್ರಮದ ಜೊತೆಗೆ ಹಿರಿಯರಾದ ಶಾಂತ ಅವರ 98ನೇ ವರ್ಷದ ಜನುಮದಿನವನ್ನು ಆಚರಿಸಲಾಯಿತು. ಸಮಾರಂಭಕ್ಕೆ ಆಗಮಿಸಿದ ಅತಿಥಿಗಣ್ಯರಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂಭ್ರಮವನ್ನು ಸ್ಮರಣೀಯವಾಗಿಸುವ ಸಲುವಾಗಿ ಮಾಡ ಕುಟುಂಬದ ಎಲ್ಲ ಬಂಧು-ಬಳಗ, ಹಿತೈಷಿಗಳು, ಸ್ನೇಹಿತರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.‌





























































































error: Content is protected !!
Scroll to Top