5, 8, 9, 11ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿದ ಹೈಕೋರ್ಟ್ ವಿಭಾಗೀಯ ಪೀಠ


ಬೆಂಗಳೂರು : ಶಾಲೆಗಳ 5, 8, 9, 11ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿ ಆದೇಶ ಹೊರಡಿಸಿದೆ. ಬೋರ್ಡ್ ಪರೀಕ್ಷೆ ರದ್ದುಪಡಿಸಿ ಹೈಕೋರ್ಟ್​ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯ ಪೀಠ ತಡೆಹಿಡಿದಿದ್ದು, ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ನಿಗದಿಯಂತೆ ಸೋಮವಾರದಿಂದ ಬೋರ್ಡ್ ಪರೀಕ್ಷೆಗಳು ನಡೆಯಲಿವೆ.

​2023-24ನೇ ಸಾಲಿನಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ 5,8,9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್​ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಅನುದಾನ ರಹಿತ ಶಾಲೆಗಳ ಸಂಘ ಹೈಕೋರ್ಟ್​ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ಬೋರ್ಡ್​ ಪರೀಕ್ಷೆಯನ್ನು ರದ್ದುಪಡಿಸಿತ್ತು. ಇದರಿಂದ ಸರ್ಕಾರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು.

ಖಾಸಗಿ ಶಾಲೆಗಳಷ್ಟೇ ಬೋರ್ಡ್ ಪರೀಕ್ಷೆಗೆ ತಕರಾರಿದೆ. ಸ್ವಹಿತಾಸಕ್ತಿಗಾಗಿ ಖಾಸಗಿ ಶಾಲೆಗಳು ರಿಟ್ ಸಲ್ಲಿಸಿವೆ. ಪೋಷಕರಾಗಲೀ, ಮಕ್ಕಳಾಗಲೀ ಬೋರ್ಡ್ ಪರೀಕ್ಷೆಗೆ ಆಕ್ಷೇಪಿಸಿಲ್ಲ. ಬೋರ್ಡ್ ಪರೀಕ್ಷೆಯಿಂದ ಖಾಸಗಿ ಶಾಲೆಗಳ ಮೌಲ್ಯಮಾಪನವಾಗಲಿದೆ. ತಡೆಯಾಜ್ಞೆಯಿಂದ ಸೋಮವಾರ ನಡೆಯುವ ಪರೀಕ್ಷೆ ಅಡಕತ್ತರಿಗೆ ಸಿಲುಕಿದೆ. ಹೀಗಾಗಿ ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಸರ್ಕಾರದ ಪರ ಎಎಜಿ ವಿಕ್ರಮ್ ಹುಯಿಲಗೋಳ್‌ ಅವರು ಮೇಲ್ಮನವಿಯಲ್ಲಿ ಮನವಿ ಮಾಡಿದ್ದರು. ಮತ್ತೊಂದೆಡೆ ಸರ್ಕಾರದ ಈ ಮನವಿಗೆ ಖಾಸಗಿ ಶಾಲೆಗಳ ಸಂಘ ಆಕ್ಷೇಪ ವ್ಯಕ್ತಪಡಿಸಿತ್ತು. ಅಂತಿಮವಾಗಿ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಬೋರ್ಡ್ ಎಕ್ಸಾಂ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ.









































































































error: Content is protected !!
Scroll to Top