ವರ್ಗಾವಣೆ ಲಿಖಿತ ಪತ್ರಗಳ ಕಾಯ್ದೆಯನ್ನು ಪ್ರಾಮಿಸರಿ ನೋಟು(ವಾಗ್ದಾನ ಪತ್ರ), ವಿನಿಮಯ ಪತ್ರ, ಚೆಕ್ ಮುಂತಾದವುಗಳ ಮೂಲಕ ನಡೆಸುವ ವಿವಿಧ ವ್ಯವಹಾರಗಳಿಗೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಭದ್ರತೆಯನ್ನು ನೀಡುವ ಉದ್ದೇಶಕ್ಕಾಗಿ ಪ್ರಥಮ ಬಾರಿಗೆ 1881ರಲ್ಲಿ ತರಲಾಗಿದ್ದು, ಆ ನಂತರ ಹಂತ ಹಂತವಾಗಿ ಸದ್ರಿ ಕಾನೂನಿಗೆ ವಿವಿಧ ತಿದ್ದುಪಡಿಗಳನ್ನು ಮಾಡಿದ ಪರಿಣಾಮವಾಗಿ ಈ ಮೇಲ್ಕಾಣಿಸಿದ ಕಾನೂನು ವಾಣಿಜ್ಯ ಅಥವಾ ವ್ಯವಹಾರ ಕ್ಷೇತ್ರದಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ.
ವರ್ಗಾವಣೆ ಲಿಖಿತ ಪತ್ರಗಳ ಕಾಯ್ದೆಗೆ 1988ರಲ್ಲಿ ಮಾಡಿದ ತಿದ್ದುಪಡಿಯಿಂದಾಗಿ ಚೆಕ್ ಮೂಲಕ ನಡೆಯುವ ವ್ಯವಹಾರಗಳು ಅತ್ಯಂತ ಬಲಶಾಲಿಯಾಗಿ ಪರಿವರ್ತನೆಗೊಂಡಿರುವುದರಿಂದ ಮತ್ತು ಮೇಲ್ಕಾಣಿಸಿದ ಕಾನೂನು ಚೆಕ್ಕನ್ನು ನೀಡಿದ ವ್ಯಕ್ತಿಗಿಂತ ಚೆಕ್ಕನ್ನು ಪಡೆದ ವ್ಯಕ್ತಿಗೆ ಪೂರಕವಾಗಿರುವುದರಿಂದ ಮತ್ತು ಚೆಕ್ ಬೌನ್ಸ್ ಪ್ರಕರಣವನ್ನು ಶಿಕ್ಷಾರ್ಹ ಕ್ರಿಮಿನಲ್ ಪ್ರಕರಣವೆಂದು ಘೋಷಿಸಿರುವುದರಿಂದ ಪ್ರತಿಯೊಬ್ಬ ವ್ಯಕ್ತಿಯು ತಾನು ಹೊಂದಿರುವ ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಚೆಕ್, ಅದರಲ್ಲೂ ಮುಖ್ಯವಾಗಿ ಬ್ಲ್ಯಾಂಕ್ ಚೆಕ್ ಅಂದರೆ ಬರಹಗಳನ್ನು ಒಳಗೊಂಡಿರದ ಸಹಿ ಮಾಡಿದ ಖಾಲಿ ಚೆಕ್ನ್ನು ಅನಾವಶ್ಯಕವಾಗಿ ಮತ್ತು ಯಾವುದೇ ಸೂಕ್ತ ಪ್ರತಿಫಲ ರಹಿತವಾಗಿ ಇನ್ನೊಬ್ಬ ವ್ಯಕ್ತಿಯ ಕೈಸೇರದಂತೆ ಮುಂಜಾಗ್ರತೆ ವಹಿಸುವುದು ಅತ್ಯಾವಶ್ಯಕವಾಗಿರುತ್ತದೆ.
ಅನೇಕ ಮುಗ್ಧ ವ್ಯಕ್ತಿಗಳು, ಚೆಕ್ಕಿಗೆ ಸಂಬಂಧಪಟ್ಟ ಮೇಲ್ಕಾಣಿಸಿದ ಕಾನೂನಿನ ಅರಿವು ಹೊಂದಿದ್ದರೂ ತಮ್ಮ ನಿರ್ಲಕ್ಷತನದಿಂದ ಅಥವಾ ತಮ್ಮ ತುರ್ತು ಅವಶ್ಯಕತೆಗಾಗಿ ಕೈ ಸಾಲ ಅಥವಾ ಸಾಲವನ್ನು ಹಣದ ಅಗತ್ಯತೆಗಾಗಿ ಖಾಸಗಿ ವ್ಯಕ್ತಿಗಳಿಂದ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಿಗೆ ತಾವು ಪಡೆಯುವ ಸಾಲದ ಭದ್ರತೆಗಾಗಿ ಬ್ಲ್ಯಾಂಕ್ ಚೆಕ್ ಅಂದರೆ ದಿನಾಂಕ, ಮೊತ್ತ ಮತ್ತು ಚೆಕ್ ಪಡಕೊಳ್ಳುವವರ ಹೆಸರು ವಗೈರೆ ಯಾವುದೇ ವಿವರಗಳನ್ನು ನಮೂದಿಸದೇ ಖಾಲಿ ಚೆಕ್ಗೆ ಸಹಿ ಮಾಡಿ ನೀಡುವ ಪರಿಣಾಮವಾಗಿ ಕೊನೆಗೆ ಅನಾವಶ್ಯಕವಾಗಿ ಅಪರಾಧಿ ಸ್ಥಾನದಲ್ಲಿ ನಿಂತು ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುವ ಮತ್ತು ತಮ್ಮ ಅಸ್ತಿ ಮತ್ತು ಅಂತಸ್ತನ್ನು ಕಳಕೊಳ್ಳುವ ಪ್ರಸಂಗಗಳು ನಡೆಯುತ್ತಲೇ ಇರುತ್ತದೆ. ಕಾರಣ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಚೆಕ್ ಹೊಂದಿರುವ ವ್ಯಕ್ತಿಗೆ ಪೂರಕವಾದ ಪೂರ್ವಭಾವನೆ ಇರುವುದು.

ಈ ಕಾರಣದಿಂದಾಗಿ ಯಾವುದೇ ವ್ಯಕ್ತಿಯು ತನ್ನ ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಸಹಿ ಮಾಡಿರುವ ತನ್ನ ಬ್ಲ್ಯಾಂಕ್ ಚೆಕ್ಕನ್ನು ಕಳಕೊಂಡಲ್ಲಿ ಅಥವಾ ಯಾರಾದರೂ ಆತನಿಂದ ಮೋಸದಿಂದ ಅಥವಾ ಕಳವು ಮಾಡಿ ಕಾನೂನು ಬಾಹಿರವಾಗಿ ಸ್ವಾಧೀನ ಹೊಂದಿದಲ್ಲಿ, ಅಂತಹ ಪ್ರತಿಫಲ ರಹಿತವಾಗಿರುವ ಸಹಿ ಮಾಡಿರುವ ಖಾಲಿ ಚೆಕ್ಕನ್ನು ಸ್ವಾಧೀನ ಹೊಂದಿರುವ ವ್ಯಕ್ತಿ ಈ ಮೇಲೆ ವಿವರಿಸಿದಂತೆ ಸುಳ್ಳು ವಿವರವನ್ನು ಬರೆದು ಬ್ಯಾಂಕಿಗೆ ಹಾಜರು ಪಡಿಸಿ, ದುರುಪಯೋಗ ಪಡಿಸುವ ಮುಂಚಿತವಾಗಿ ವ್ಯಕ್ತಿಯು ಲಿಖಿತವಾದ ದೂರನ್ನು ಸಂಬಂಧಪಟ್ಟ ಬ್ಯಾಂಕಿಗೆ ಮತ್ತು ಪೋಲೀಸ್ ಠಾಣೆಗೆ ನೀಡಿ ಸೂಕ್ತ ರಶೀದಿ ಅಥವಾ ಹಿಂಬರಹವನ್ನು ಪಡಕೊಂಡು ಸಂದರ್ಭಕ್ಕನುಸಾರವಾಗಿ ಚೆಕ್ಕು ಹೊಂದಿರುವ ವ್ಯಕ್ತಿಗೆ ಚೆಕ್ಕನ್ನು ದುರುಪಯೋಗ ಪಡಿಸದಂತೆ, ಲಿಖಿತವಾಗಿ ತಿಳಿಸಿ ಮತ್ತು ಚೆಕ್ಕನ್ನು ಬ್ಯಾಂಕಿಗೆ ನಗದೀಕರಣಕ್ಕಾಗಿ ಹಾಜರು ಪಡಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಚೆಕ್ ನೀಡಿದ ಅಥವಾ ಚೆಕ್ ಕಳಕೊಂಡ ವ್ಯಕ್ತಿ ಮುಂದೆ ಆತನಿಗೆ ಉಂಟಾಗಬಹುದಾದ ತೊಂದರೆ ಮತ್ತು ಅನ್ಯಾಯದಿಂದ ತನ್ನನ್ನು ರಕ್ಷಿಸಿಕೊಳ್ಳಬಹುದು.
































































