ವೈಬ್ರಂಟ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತರಬೇತಿ ಕಾರ್ಯಾಗಾರ
ಮೂಡುಬಿದಿರೆ: ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ತುಂಬ ಶಾಂತವಾಗಿರಬೇಕು, ಮತ್ತು ಆತ್ಮವಿಶ್ವಾಸದಿಂದ ಈರಬೇಕು. ವೇಳಾಪಟ್ಟಿಯನ್ನು ರಚಿಸಿಕೊಂಡು ಎಲ್ಲ ವಿಷಯಗಳ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ನಕಾರಾತ್ಮಕವಾದ ಆಲೋಚನೆಯನ್ನು ಬಿಟ್ಟು ಎಲ್ಲವನ್ನೂ ಧನಾತ್ಮಕವಾಗಿ ಯೋಚಿಸುವಂತೆ ತಯಾರಿ ಮಾಡಿಕೊಳ್ಳಬೇಕು ಎಂದು ಮೂಡುಬಿದಿರೆಯ ದಿಶಾ ಕೆರಿಯರ್ ಟುವರ್ಡ್ಸ್ ಎಕ್ಸಲೆನ್ಸ್ನ ಮಾಲಕಿ ಹಾಗೂ ಕೆರಿಯರ್ ಕೌನ್ಸಿಲರ್ ರಾಜೇಶ್ವರಿ ಡಿ. ಶೆಟ್ಟಿ ಹೇಳಿದರು.
ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರಂಟ್ ಪದವಿಪೂರ್ವ ಕಾಲೇಜಿನಲ್ಲಿ ‘ವಿ ಪ್ರೇರಣಾ’ದ ಅಡಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ‘ಮುಂಬರುವ ನಿಮ್ಮ ಪರೀಕ್ಷೆಯನ್ನು ನಗುವಿನೊಂದಿಗೆ ಸ್ವಾಗತಿಸಿ’ಎಂಬ ಪರೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ತರಬೇತುದಾರರಾಗಿ ಮಾತನಾಡಿದರು.
ನಿಮ್ಮನ್ನು ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬೇಡಿ. ನಿಮ್ಮ ಸ್ನೇಹಿತರನ್ನು ನೀವು ಎಷ್ಟು ವಿಷಯಗಳನ್ನು ಪೂರ್ಣಗೊಳಿಸಿದ್ದೀರಿ ಎಂದು ಕೇಳುವುದನ್ನು ನಿಲ್ಲಿಸಿ. ಇದು ನಿಮ್ಮನ್ನು ಹತಾಶೆಗೆ ಕೊಂಡೊಯ್ಯಬಹುದು ಅಥವಾ ಅತಿಯಾದ ಆತ್ಮವಿಶ್ವಾಸವನ್ನು ಉಂಟುಮಾಡಬಹುದು. ನೀವು ಕೇವಲ ನೀವಾಗಿರಿ ಅಷ್ಟೇ ಸಾಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಟ್ರಸ್ಟಿ ಯೋಗೇಶ್ ಬೆಡೇಕರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಟ್ರಸ್ಟಿ ಹಾಗೂ ಪ್ರಾಂಶುಪಾಲ ಡಾ. ಎಸ್.ಎನ್.ವೆಂಕಟೇಶ್ ನಾಯಕ್, ಟ್ರಸ್ಟಿಗಳಾದ ಸುಭಾಷ್ ಜಾ, ಚಂದ್ರಶೇಖರ ರಾಜೇ ಅರಸ್, ಎಂ.ಮೆಹಬೂಬ ಬಾಷಾ, ಶರತ್ ಗೋರೆ ಹಾಗೂ ಕಾಲೇಜಿನ ಆಡಳಿತಾಧಿಕಾರಿ ಅರುಣ್ ಡಿ’ಸಿಲ್ವಾ ಇದ್ದರು.ಎಲ್ಲ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಆಂಗ್ಲ ಭಾಷೆಯ ಮುಖ್ಯಸ್ಥ ಹರೀಶ್ ನಂಬಿಯಾರ್ ಸ್ವಾಗತಿಸಿದರು. ಗಣಿತ ವಿಭಾಗದ ಉಪನ್ಯಾಸಕಿ ರಮ್ಯಾ ಶೆಟ್ಟಿ ವಂದಿಸಿದರು. ಕಾರ್ಯಕ್ರಮದ ಸಂಯೋಜಕಿ ಹಾಗೂ ಆಂಗ್ಲಭಾಷಾ ಉಪನ್ಯಾಸಕಿ ವರ್ಷಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು.






























































