ಉಡುಪಿ ಕೆಡಿಪಿ ಸಭೆಯಲ್ಲಿ ಸುನಿಲ್ ಕುಮಾರ್ – ಎಸ್. ಪಿ. ಜಟಾಪಟಿ

ಕಾರ್ಕಳ : ಲಾರಿ ಮುಷ್ಕರದ ವೇಳೆ ಪ್ರತಿಭಟನಾಕಾರರಿಗೆ ನೋಟಿಸ್ ನೀಡಿದ ವಿಚಾರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯನ್ನು ಇಂದು ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತರಾಟೆಗೆತ್ತಿಗೊಂಡ ಸುನಿಲ್‌ ಕುಮಾರ್‌ ನಮ್ಮ ಜಿಲ್ಲೆಯಲ್ಲಿ ಯಾರೂ ಪ್ರತಿಭಟನೆ ಮಾಡಲು ಇಲ್ಲವೇ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದು ತುಘಲಕ್‌ ಆಡಳಿತವೇ..?
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ ಎಂದ ಅವರು ನಮ್ಮ ಜಿಲ್ಲಾ ಸಂಕೀರ್ಣದಲ್ಲಿ ಪ್ರತಿಭಟನೆಗಾಗಿಯೇ ಜಾಗವನ್ನು ಕಾಯ್ದಿರಿಸಿದ್ದೇವೆ. ಆದರೆ ನೀವು ಪ್ರತಿಭಟನೆ ಮಾಡುವವರಿಗೆ, ವಾಹನಗಳಿಗೆ ನೊಟೀಸ್‌ ನೀಡುತ್ತೀರಿ ಎಂದಾದರೆ ಇದೆಂಥ ವ್ಯವಸ್ಥೆ ? ಇದು ತುಘಲಕ್‌ ಆಡಳಿತವೇ ಎಂದು ಪ್ರಶ್ನಿಸಿದ್ದಾರೆ.

ಜಿಲ್ಲಾಡಳಿತ ಸ್ಪಷ್ಟನೆ ನೀಡಲಿ
ಪ್ರತಿಭಟನಾಕಾರರಿಗೆ ನೋಟೀಸ್‌ ನೀಡುವುದಾದರೆ ಅದಕ್ಕೆ ನನ್ನ ವಿರೋದವಿಲ್ಲ. ನಾನೂ ಅದನ್ನು ಒಪ್ಪುತ್ತೇನೆ. ಆದರೆ ಜಿಲ್ಲಾಡಳಿತ ಪ್ರತಿಭಟನೆ ಹೇಗೆ ಮಾಡಬೇಕು ಎಂಬುದರ ಕುರಿತು ಸ್ಪಷ್ಟನೆ ನೀಡಲಿ. ನಾವು ಮನೆಯಲ್ಲಿ ಕೂತು ಭಜನೆ ಮಾಡಬೇಕಾ ಎಂದು ವ್ಯಂಗ್ಯವಾಡಿದ ಅವರು ಉಡುಪಿ ಜಿಲ್ಲೆಯ ಜನ ಯಾವ ರೀತಿ ಪ್ರತಿಭಟನೆ ಮಾಡಬೇಕೆಂದು ಸುತ್ತೋಲೆಗಳನ್ನು ನೀಡಿ. ಅದೇ ರೀತಿ ನಾವು ಪ್ರತಿಭಟನೆ ಮಾಡುತ್ತೇವೆ ಎಂದರು.

ಕಾನೂನು ಪ್ರಕಾರ ಕಾರ್ಯ – ಎಸ್ಪಿ ಅರುಣ್
ಸುನಿಲ್‌ ಕುಮಾರ್‌ ಅವರ ಮಾತಿಗೆ ಪ್ರತಿಕ್ರಿಯಿಸಿದ ಎಸ್‌ಪಿ ಅರುಣ್‌, ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯುವ ಸಂದರ್ಭ ಏನಾದರೂ ದುರ್ಘಟನೆ ಸಂಭವಿಸಿದರೆ ಏನು ಮಾಡುವುದು. ಕಾನೂನಿನ ಪ್ರಕಾರ ನಾವು ನೋಟಿಸ್‌ ನೀಡಿದ್ದೇವೆ. ಅವರು ಕಾನೂನಿನ ದಾರಿಯಲ್ಲೇ ಉತ್ತರಿಸಲಿ ಎಂದರು. ‌

ಹೆಬ್ಬಾಳ್ಕರ್ ಸಮಾಧಾನ
ಸುನಿಲ್‌ ಕುಮಾರ್‌ ಮತ್ತು ಎಸ್ಪಿ ನಡುವೆ ನಡೆಯುತ್ತಿದ್ದ ಮಾತಿನ ಜಟಾಪಟಿಯ ಮಧ್ಯೆ ಮಧ್ಯಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುನಿಲ್‌ ಕುಮಾರ್‌ಗೆ ಸಮಾಧಾನ ಪಡಿಸಿ, ಎಸ್ಪಿಗೆ ಬುದ್ದಿವಾದ ಹೇಳಿದ್ದಾರೆ.

ಸಭೆಯಲ್ಲಿ ಶಾಸಕರಾದ ಯಶ್‌ಪಾಲ್ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಡಿಎಫ್‌ಒ ಗಣಪತಿ ಸೇರಿದಂತೆ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.







































































































































error: Content is protected !!
Scroll to Top