ಕೆರ್ವಾಶೆ ಬಂಗ್ಲೆಗುಡ್ಡೆ ಶಾಲೆಗೆ 1 ಲಕ್ಷ ರೂ. ದೇಣಿಗೆ ಘೊಷಣೆ
ಕಾರ್ಕಳ : ಕೆರ್ವಾಶೆ ಬಂಗ್ಲೆಗುಡ್ಡೆ ಸ. ಕಿ. ಪ್ರಾ. ಶಾಲೆ ತನ್ನ ವಿನೂತನ ಕಾರ್ಯಚಟುವಟಿಕೆಗಳ ಮೂಲಕ ಮಾದರಿ ಶಾಲೆಯೆನಿಸಿದೆ. ಮುಂದಿನ ದಿನಗಳಲ್ಲಿ ಶಾಲೆಗೆ ಶಿಕ್ಷಕರ ಅಭಾವ ಬಂದರೂ ಶಾಲೆ ನಿಭಾಯಿಸುವ ಮಟ್ಟಿಗೆ ನಿಧಿ ಸಂಗ್ರಹಿಸಿಡುವ ಹೊಸ ಆಲೋಚನೆಯಲ್ಲಿ ಮೊದಲ ದೇಣಿಗೆಯಾಗಿ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಒಂದು ಲಕ್ಷ ರೂ. ನೀಡಲು ನಿರ್ಧರಿಸಿದೆ. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ, ಶಾಲೆಯ ಹಳೆವಿದ್ಯಾರ್ಥಿ ಸಂಘ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಈ ಯೋಜನೆಯನ್ನು ಯಶಸ್ವಿಗೊಳಿಸುವ ಪ್ರಯತ್ನ ಮಾಡಬೇಕು ಎಂದು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಅನಿಲ್ ಕುಮಾರ್ ಜೈನ್ ಹೇಳಿದರು.
ಅವರು ನ. 22 ರಂದು ಬಂಗ್ಲೆಗುಡ್ಡೆ ಶಾಲೆಯಲ್ಲಿ ನಡೆದ ಜ್ಞಾನಸುಧಾ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 9ನೇ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉದ್ಯಮಿ ತ್ರಿವಿಕ್ರಮ ಕಿಣಿ ಮಾತನಾಡಿ, ಸರಕಾರಿ ಶಾಲೆಯಲ್ಲಿ ಓದಿ ಉದ್ಯೋಗ ಪಡೆದುಕೊಳ್ಳುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮೊದಲ ವೇತನವನ್ನು ತಾವು ಓದಿದ ಕನ್ನಡ ಮಾಧ್ಯಮ ಶಾಲೆಗೆ ಮೀಸಲಿಟ್ಟರೆ ಕನ್ನಡ ಮಾಧ್ಯಮ ಶಾಲೆಗಳಿಗೆ ಯಾವತ್ತೂ ಸಮಸ್ಯೆಯಾಗದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ. ಹಾಗೂ ಕಾರ್ಕಳ ಜ್ಞಾನಸುಧಾ ಪ. ಪೂ. ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು ಸಂಸ್ಥೆಯ ವಿದ್ಯಾರ್ಥಿಗಳಿಗೆ ಉತ್ತಮ ಆತಿಥ್ಯ ಮಾಡಿದ ಶಾಲೆಯ ಆಡಳಿತ ಮಂಡಳಿ ಹಾಗೂ ಊರಿನ ನಾಗರಿಕರಿಗೆ ಕೃತಜ್ಞತೆ ತಿಳಿಸಿ ಜೀವನದಲ್ಲಿ ಮರೆಯದ ಅನುಭವ ಕಟ್ಟಿಕೊಡುವ ಈ ಶಿಬಿರದ ಸ್ಥಳ ಹಾಗೂ ಜನರನ್ನು ಮರೆಯಬೇಡಿ ಎಂದು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಅಲ್ಲದೆ ಶಾಲಾ ನಿಧಿಗೆ ಎರಡನೇ ದೇಣಿಗೆಯಾಗಿ ಹತ್ತು ಸಾವಿರ ರೂ. ಗಳ ಮೊತ್ತವನ್ನು ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಕೊಡಲಾಗುತ್ತಿದೆ ಎಂದರು.

ಆತಿಥೇಯ ಶಾಲೆಯ ನಿಕಟ ಪೂರ್ವ ಮುಖ್ಯ ಶಿಕ್ಷಕ ಹಾಗೂ ಪ್ರಸ್ತುತ ಮಿಯ್ಯಾರು ಸ. ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಶ್ರೀ ಸಂಜೀವ ದೇವಾಡಿಗ ಮಾತನಾಡಿ, ಬಂಗ್ಲೆಗುಡ್ಡೆ ಶಾಲೆ ಜಿಲ್ಲೆಯಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನೊಳಗೊಂಡ ಶಾಲೆ. ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಗೆ ಅಗತ್ಯಯುಳ್ಳ ಕಾರ್ಯಚಟುವಟಿಕೆಗಳೊಂದಿದೆ ಮಾದರಿ ಶಾಲೆಯೆಂದೆನಿಸಿಕೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭ ಶಿಬಿರದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಾದ ಮನಿತ್, ಸುವೀಕ್ಷಾ, ಸ್ಟೀವ್ ಪಿಂಟೊ ಮತ್ತು ಅಭಿಷ್ ಜೈನ್ ಉತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದರು. ಕೆರ್ವಾಶೆ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಸುನಿಲ್ ಶೆಟ್ಟಿ, ಬಂಗ್ಲೆಗುಡ್ಡೆ ಸ. ಕಿ. ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಸುನೀತಾ ನಾಯಕ್, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು., ಬಂಗ್ಲೆಗುಡ್ಡೆ ಸ. ಕಿ. ಪ್ರಾ. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಾನಂದ ಪೂಜಾರಿ, ಉಪಾಧ್ಯಕ್ಷೆ ಸರಸ್ವತಿ ಆಚಾರ್ಯ, ಕಾರ್ಕಳ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಉಮೇಶ್, ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಡಾ. ಹರಿಪ್ರಸಾದ್, ಕೆರ್ವಾಶೆ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ಧರ್ಮರಾಜ ಹೆಗ್ಡೆ, ಶಿಕ್ಷಣ ತಜ್ಞ ರಾಮ ಸೇರ್ವೆಗಾರ್, ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸ್ವಾತಿ ವಿವೇಕ್ ನಾಯಕ್ ಮತ್ತಿರರು ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ನಿರೂಪಿಸಿ, ಕಾರ್ಯಕ್ರಮಾಧಿಕಾರಿ ರವಿ ಜಿ. ವಂದಿಸಿದರು.




































































