ಕಾರ್ಕಳ : ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಮತ್ತು ಅದರ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನ. 25 ರಂದು ಅಂತರ್ ಕಾಲೇಜು ಆಹ್ವಾನಿತ ತಂಡಗಳ ʼಯಕ್ಷಗವಿಷ್ಟಿʼ ಎಂಬ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ನಡೆಯಲಿದೆ.
ನಿಟ್ಟೆ ಶಿಕ್ಷಣ ಸಂಸ್ಥೆಯ ಸದಾನಂದ ಸಭಾಂಗಣದಲ್ಲಿ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ಐದು ಕಾಲೇಜಿನ ಕಲಾವಿದರು ʼಭೀಷ್ಮ ಪ್ರತಿಜ್ಞೆʼ ಪ್ರಸಂಗವನ್ನು ಪ್ರದರ್ಶಿಸಲಿರುವರು. ಬೆಳಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪ್ರಸಿದ್ಧ ಕಲಾವಿದ ಹಾಗೂ ವಿದ್ವಾಂಸ ಶ್ರೀವಾಸುದೇವ ರಂಗ ಭಟ್ಟ ಮಧೂರು ಉದ್ಘಾಟಿಸಲಿದ್ದಾರೆ. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆಯ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ ಹಾಗೂ ಮೂಡಬಿದ್ರೆಯ ಧನಲಕ್ಷ್ಮೀ ಕ್ಯಾಶ್ಯೂಸ್ನ ಪ್ರವರ್ತಕ ಶ್ರೀಪತಿ ಭಟ್ ಅತಿಥಿಗಳಾಗಿ ಭಾಗವಹಿಸಲಿರುವರು. ಸ್ಪರ್ಧೆಯ ಬಳಿಕ ಆತಿಥೇಯ ಕಾಲೇಜಿನ ಕಲಾವಿದರು “ಧರ್ಮ ದಂಡನೆ” ಕಥಾನಕವನ್ನು ಅಭಿನಯಿಸಲಿರುವರು.
ನೋಂದಣಿ ಮತ್ತು ಮೌಲ್ಯಮಾಪನಗಳು ಕಾಗದ ರಹಿತವಾಗಿ, ಅಂತರ್ಜಾಲಾಧರಿತವಾಗಿ ನಡೆಯಲಿದ್ದು, ಪರಂಪರೆ ಮತ್ತು ತಂತ್ರಜ್ಞಾನದ ಅಪೂರ್ವ ಸಮ್ಮಿಲನಕ್ಕೆ ಇದು ವೇದಿಕೆಯಾಗಲಿದೆ ಎಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.































































